ರಾಂ ಅಜೆಕಾರು
ಕಾರ್ಕಳ ಅನಂತಶಯನದ ಆನಂದ ದೇವಾಡಿಗ ಅವರಿಂದ ಚರ್ಮವಾದ್ಯ ತಯಾರಿಕೆಯ ಕೌಶಲ ಕಲಿತ ಶಿವರಾಂ ದೇವಾಡಿಗರು, ಮೂರುವರೆ ದಶಕಗಳಿಂದ ಈ ವೃತ್ತಿಯನ್ನು ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಕೇವಲ ವಾದ್ಯ ತಯಾರಿಸುವುದಷ್ಟೇ ಅಲ್ಲದೆ, ಅದರ ಧ್ವನಿ, ನಾದ ಹಾಗೂ ಬಳಕೆಗೆ ಅನುಗುಣವಾಗಿ ವಾದ್ಯವನ್ನು ಸಿದ್ಧಪಡಿಸುವಲ್ಲಿ ಅವರು ಪರಿಣತಿ ಹೊಂದಿದ್ದಾರೆ.ತಾಸೆ, ನಗಾರಿ, ತೆಂಬರೆ, ಡೋಲು, ಪಠಾವು ಡೋಲು, ಘಂಟೆ, ಸಮ್ಮೇಳ ಸೇರಿದಂತೆ ವಿವಿಧ ಬಗೆಯ ಚರ್ಮವಾದ್ಯಗಳನ್ನು ಅವರು ತಯಾರಿಸುತ್ತಾರೆ. ದೇವಸ್ಥಾನಗಳ ಉತ್ಸವ, ದೈವಾರಾಧನೆ, ಹುಲಿವೇಷ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇವರ ವಾದ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳ ಹಲವು ದೇವಸ್ಥಾನಗಳಲ್ಲಿ ಶಿವರಾಂ ದೇವಾಡಿಗರು ತಯಾರಿಸಿದ ನಗಾರಿ ಹಾಗೂ ಇತರ ಚರ್ಮವಾದ್ಯಗಳ ನಾದ ಕೇಳಿಬರುತ್ತಿದೆ. ಕೆರುವಾಶೆ ದೇವಸ್ಥಾನ, ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಚಿಕ್ಕಲ್‌ಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಂಗಿಲಾರು ಶ್ರೀ ವಾಸುದೇವ-ಬ್ರಹ್ಮಲಿಂಗೇಶ್ವರ ದೇವಸ್ಥಾನ, ಹೆರ್ಮುಂಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಅತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಿಗೆ ಅವರು ವಾದ್ಯಗಳ ಚಾಕರಿ ಮಾಡುತ್ತಿದ್ದಾರೆ.
ಆಧುನಿಕ ಸಂಗೀತ ಪರಿಕರಗಳ ಬಳಕೆ ಹೆಚ್ಚಾಗುತ್ತಿರುವ ಇಂದಿನ ಕಾಲದಲ್ಲಿಯೂ ಸಾಂಪ್ರದಾಯಿಕ ಚರ್ಮವಾದ್ಯ ತಯಾರಿಕೆಯ ವೃತ್ತಿಯನ್ನು ಕೈಬಿಡದೆ ಮುಂದುವರಿಸಿಕೊಂಡು ಬಂದಿರುವ ಶಿವರಾಂ ದೇವಾಡಿಗರಿಗೆ ಪತ್ನಿ ಜಯಲಕ್ಷ್ಮಿ ಅವರ ಸಹಕಾರವೂ ಮಹತ್ವದ್ದಾಗಿದೆ. ವಾದ್ಯ ತಯಾರಿಕೆಯ ಕೆಲಸದಲ್ಲಿ ಅವರು ಪತಿಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ..
ಗುರುಗಳಿಂದ ಕಲಿತ ಚರ್ಮವಾದ್ಯ ತಯಾರಿಕೆಯ ಕಲೆಯನ್ನು 35 ವರ್ಷಗಳಿಂದ ಮುಂದುವರಿಸಿಕೊಂಡು ಬರುತ್ತಿದ್ದೇನೆ. ನಮ್ಮ ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಯಬೇಕು ಎಂಬುದೇ ನನ್ನ ಆಶಯ. -ಶಿವರಾಂ ದೇವಾಡಿಗ, ಕೆರುವಾಶೆ