ಗದಗ: ರೈತರು, ಬಡವರು ಹಾಗೂ ವ್ಯಾಪಾರಿಗಳಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘದ ಶ್ರಮ ಸಾರ್ಥಕ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಹಾಗೂ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ಹಲವಾರು ದಶಕಗಳ ಹೋರಾಟ, ಸಾಂಘಿಕ ಸಮನ್ವಯತೆ, ನಿರಂತರ ಶ್ರಮ, ಗ್ರಾಮೀಣ ಭಾಗದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ, ಮೂವತ್ತು ವರ್ಷಗಳ ನಿರಂತರ ಪರಿಶ್ರಮ, ನಂಜಯ್ಯನಮಠ, ಎಚ್.ವೈ.ಮೇಟಿ ಅವರಂತಹ ರಾಜಕಾರಣಿಗಳ ಒಡನಾಟ, ನೇಕಾರರ ಬದುಕಿನಲ್ಲಿ ಹೊಸಚೇತನ ತುಂಬುವ ಪ್ರಯತ್ನದಲ್ಲಿ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಕಲಬರ್ಗಿ ಅವರ ನೇತೃತ್ವದಲ್ಲಿ ಕೇವಲ ನೇಕಾರರ ಶ್ರೇಯೋಭಿವೃದ್ಧಿಗಾಗಿಯೇ ಆರಂಭಗೊಂಡ ಸಂಘ, ಮುಂದೆ ರೈತರು, ಬಡವರು, ವ್ಯಾಪಾರಿಗಳಿಗೆ ಆರ್ಥಿಕ ಶಕ್ತಿ ತುಂಬುವಲ್ಲಿ ಯಶಸ್ವಿಯಾಯಿತು ಎಂದರು.
ಠೇವುದಾರರ ವಿಶ್ವಾಸ, ಸಾಲಗಾರರ ಪ್ರಾಮಾಣಿಕ ಮರುಪಾವತಿ, ಸಿಬ್ಬಂದಿಯ ಕರ್ತವ್ಯ ನಿಷ್ಠೆ, ನಿರ್ದೇಶಕ ಮಂಡಳಿಯ ಸಹಕಾರ ಮನೋಭಾವ ಒಂದು ಸಂಸ್ಥೆಯ ಜೀವಾಳವಾಗಿದೆ. ಇದೆಲ್ಲವೂ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ಆರ್ಥಿಕ ಪ್ರಗತಿ ಸಾಧಿಸುವುದರಲ್ಲಿ ಸಫಲವಾಗಿದೆ ಎಂದು ತಿಳಿಸಿದರು.ವಿಪ ಶಾಸಕ ಎಸ್.ವಿ. ಸಂಕನೂರ ಮಾತನಾಡಿ, ಆರ್ಥಿಕ ಕ್ಷೇತ್ರದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿರುವ ರವೀಂದ್ರ ಕಲಬುರ್ಗಿ ಅವರ ಸೇವೆ ಅಮೋಘ. ಅವರ ಮೇಲಿನ ವಿಶ್ವಾಸದಿಂದ ನಲವತ್ತು ಶಾಖೆಗಳ ಅಂದಾಜು ಠೇವಣಿ ₹300 ಕೋಟಿ ದಾಟುತ್ತಿರುವುದು ಪ್ರಗತಿಯ ದ್ಯೋತಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ನಿಯಮಿತ ಸೂಳೇಭಾವಿ, ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಪಿ. ಕಲಬುರ್ಗಿ, ಬೆಟಗೇರಿ ನೀಲಕಂಠ ಮಠದ ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮಿಗಳು, ಕೆರೂರ ದೇವಾಂಗಮಠದ ರುದ್ರಮುನಿ ಶಿವಾಚಾರ್ಯರು, ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳ ನಿರ್ದೇಶಕ ಡಾ. ಸಂಜಯ ಹೊಸಮಠ, ಕೃಷ್ಣಾ ರಾಮದುರ್ಗ ಹಾಗೂ ಕೃಷ್ಣಾ ಬಾಪ್ರಿ ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಶಕುಂತಲಾ ಅಕ್ಕಿ, ಲಕ್ಷ್ಮೀಬಾಯಿ ಕಾಕಿ, ಮಾಧುಸಾ ಮೆಹರವಾಡೆ, ನೇಕಾರರ ಒಕ್ಕೂಟದ ಅಧ್ಯಕ್ಷ ಅನೀಲ ಗಡ್ಡಿ ಸೇರಿದಂತೆ ಇತರರು ಇದ್ದರು. ಹನಮಂತ ಮಾಚಾ ಸ್ವಾಗತಿಸಿದರು. ನಾರಾಯಣ ಮಾಶಾಳ ಹಾಗೂ ಹೇಮಂತ ದುತ್ತರಗಿ ನಿರೂಪಿಸಿದರು. ಶ್ರೀನಿವಾಸ ಹುಬ್ಬಳ್ಳಿ ವಂದಿಸಿದರು.