ಹುಬ್ಬಳ್ಳಿ: ವೀರಶೈವ -ಲಿಂಗಾಯತ ಮಹಾಸಭಾ ನಡೆಸಿದ ಏಕತಾ ಸಮಾವೇಶಕ್ಕೂ ಪಂಚಮಸಾಲಿ ಸಮಾಜಕ್ಕೂ ಯಾವುದೇ ಬಗೆಯ ಸಂಬಂಧವಿಲ್ಲ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಪಂಚಮಸಾಲಿ ಲಿಂಗಾಯತ ಎಂದೇ ಬರೆಯಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಪಂಚಮಸಾಲಿ ಪೀಠಗಳು, ಪಂಚಮಸಾಲಿ ಸಂಘ ಏನು ಹೇಳುತ್ತದೆಯೋ ಅದನ್ನು ಸಮಾಜದ ಜನ ಪಾಲಿಸಬೇಕು. ಸಮಾಜದ ಜನರು ಜಾತಿ ಗಣತಿ ವೇಳೆ ಧರ್ಮ ಕಾಲಂನಲ್ಲಿ ಹಿಂದೂ; ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ನಮೂದಿಸಬೇಕು ಎಂದು ಸ್ಪಷ್ಟಪಡಿಸಿದರು.
ಈ ಹಿನ್ನೆಲೆಯಲ್ಲಿ ಈಗಾಗಲೇ 16 ಜಿಲ್ಲೆಗಳಲ್ಲಿ ಸಂಚರಿಸಿ ಸಮಾಜದ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಉಳಿದ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು. ಅಲ್ಲದೇ ಒಂದು ಲಕ್ಷ ಸ್ಟಿಕರ್ ಮುದ್ರಿಸಿ ಹಂಚಲಾಗುವುದು ಎಂದರು.ಕಾಂತರಾಜು ಆಯೋಗದ ವರದಿ ವೈಜ್ಞಾನಿಕವಾಗಿಲ್ಲ ಎಂದು ಇದೀಗ ಮತ್ತೆ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯದ ಸಮೀಕ್ಷೆ ಇಷ್ಟೊಂದು ಗಡಿ-ಬಿಡಿ ಯಾಕೆ? ಈ ಸಮೀಕ್ಷೆ ಮೇಲೆ 7 ಕೋಟಿ ಕನ್ನಡಿಗರ ಭವಿಷ್ಯ ಅಡಗಿದೆ. ಹೀಗಾಗಿ, ಎಲ್ಲ ಅಡೆತಡೆಗಳನ್ನು ನಿವಾರಿಸಿ, ಸಮಾಧಾನದಿಂದ ಸಮೀಕ್ಷೆ ನಡೆಸಬೇಕು ಎಂಬುದು ನಮ್ಮ ಆಗ್ರಹ ಎಂದರು.
ಏಕತೆ ಸಾರಿದ ಮರುದಿನವೇ ಅಪಸ್ವರ: ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ ಏಕತಾ ಸಮಾವೇಶ ನಡೆಸಿ ವೀರಶೈವ- ಲಿಂಗಾಯತ ಎರಡು ಬೇರೆ ಬೇರೆ ಅಲ್ಲ. ಒಂದೇ ಎಂದು ಸಾರಿದ ಮರುದಿನವೇ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿಕೆ ನೀಡಿರುವುದು ಸಮಾಜದ ಜನರಲ್ಲಿ ಗೊಂದಲ ಮುಂದುವರಿದಂತಾಗಿದೆ.