ಭಟ್ಕಳ:
ಸಮಾಜದಲ್ಲಿ ಇಂದು ಕಂದಕವೇ ಹೆಚ್ಚುತ್ತಿದ್ದು, ನಾವು ವಿದೇಶಿ ಸಂಸ್ಕೃತಿ ಆಚರಿಸ ತೊಡಗಿದ್ದೇವೆ. ಅಲ್ಲಿ ತಂದೆ-ತಾಯಿ, ಗುರು-ಶಿಷ್ಯರ ಸಂಬಂಧವೇ ತಿಳಿದಿಲ್ಲ. ಮಗು ಜನ್ಮತಾಳಿ ದೊಡ್ಡದಾಗುತ್ತಿದ್ದಂತೆಯೇ ತಂದೆ-ತಾಯಿಯರ ಸಂಪರ್ಕ ಇಲ್ಲವಾಗುತ್ತದೆ. ಇದು ನಮ್ಮ ಭಾರತಕ್ಕೂ ಕಾಲಿಡುತ್ತಿದ್ದು ಅಪಾಯದ ಸೂಚನೆಯಾಗಿದೆ ಎಂದು ಉಡುಪಿಯ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.ಅವರು ಮಣ್ಕುಳಿಯ ಶ್ರೀ ಹನುಮಂತ ಹಾಗೂ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ನಿರ್ಮಾಣ ಕಾರ್ಯಕ್ರಮದ ಪೂರ್ವಭಾವಿಯಾಗಿ ನಿಧಿಕುಂಭ ಸ್ಥಾಪನೆಯ ನಂತರ ಆಶೀರ್ವಚನ ನೀಡಿದರು.ಚಿಕ್ಕಂದಿನಿಂದಲೇ ಮಕ್ಕಳಿಗೆ ದೇವರ ಭಕ್ತಿ, ತಂದೆ-ತಾಯಿಯರ ಕುರಿತು ಗೌರವ ಮೂಡುವಂತೆ ಮಾಡಬೇಕು. ಮಕ್ಕಳಲ್ಲಿ ಸನಾತನ ಸಂಸ್ಕೃತಿ ಬೆಳೆಸಿದಲ್ಲಿ ಸನಾತನ ಸಂಸ್ಕೃತಿಗೆ ಬಾಧಕವಾಗದು ಎಂದ ಅವರು, ಹನುಮಾನ್ ಮೇಲೆ ಜನತೆ ಇಟ್ಟಿರುವ ನಂಬಿಕೆ ಮತ್ತು ದೃಢ ವಿಶ್ವಾಸದ ಸಂಕೇತವಾಗಿದೆ. ಎಲ್ಲೆಡೆ ಹನುಮ ಎರಡೂ ಕೈಗಳನ್ನು ಮುಗಿದಿರುವ ಭಂಗಿಯಲ್ಲಿ ನೋಡುತ್ತೇವೆ. ಆದರೆ ಇಲ್ಲಿ ರಾಕ್ಷಸನನ್ನು ಸಂಹರಿಸಿ ಅಭಯ ಹಸ್ತ ನೀಡಿದ್ದು ಹನುಮನ ವಿಶೇಷವಾದ ಭಂಗಿಯಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸುವುದು ಒಂದು ಭಾಗ್ಯ. ನಾವು ಮಾಡಿದ ಸಾಧನೆ, ಸಮಾಜಕ್ಕೆ ಕೊಟ್ಟ ಕೊಡುಗೆಯೇ ಜೀವನ. ಸಮಾಜಕ್ಕೆ ಕೊಟ್ಟ ಕೊಡುಗೆ ಮಾತ್ರ ಶಾಶ್ವತವಾದುದು. ನಾವು ಉತ್ತಮ ಕೆಲಸ ಮಾಡಿದಾಗ ನಮ್ಮ ಜೀವನ ಸಾರ್ಥಕವಾಗುವುದು. ದೇವಸ್ಥಾನದ ಕಾರ್ಯವನ್ನು ಒಂದು ವರ್ಷದೊಳಗೆ ಮುಗಿಸುವುದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದರೊಂದಿಗೆ ಸರ್ಕಾರದಿಂದ ಅನುದಾನ ಕೊಡಿಸುವಲ್ಲಿ ಕೂಡಾ ಕ್ರಮವಹಿಸುವುದಾಗಿ ತಿಳಿಸಿದ ಅವರು, ತಾವೂ ಕೂಡಾ ವೈಯಕ್ತಿಕವಾಗಿ ಸಹಾಯ ಮಾಡುವ ಭರವಸೆ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ ಶೆಟ್ಟಿ, ನಾಗಾಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು, ಹಾಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ ಶೆಟ್ಟಿ, ದೇವಾಲಯದ ಮೊಕ್ತೇಸರ ಮಹಾಬಲೇಶ್ವರ ಶೆಟ್ಟಿ, ಉಧ್ಯಮಿ ಮಂಜುನಾಥ ಶೆಟ್ಟಿ ಬೆಂಗಳೂರು, ಉದ್ಯಮಿ ವಿನಾಯಕ ಮುಂಬೈ, ಕೃಷ್ಣಮೂರ್ತಿ ಶೆಟ್ಟಿ, ಶಿಕ್ಷಕ ಮನೋಜ ಶೆಟ್ಟಿ, ತೇಜಸ್ವಿನಿ ಆರ್. ಶೆಟ್ಟಿ ಇದ್ದರು.