ಎಲ್ಲ ಧರ್ಮಗಳ ಸಾರ ನಿಜ ದನಿಯ ಬದುಕಿಗೆ ದಿಕ್ಸೂಚಿ

KannadaprabhaNewsNetwork |  
Published : Apr 05, 2025, 12:50 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉಪ ಕುಲಪತಿ ಪ್ರೊ.ಸಿ.ಬಸವರಾಜು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಲ್ಲ ಧರ್ಮಗಳ ಸಾರ ನಿಜ ದನಿಯ ಬದುಕಿಗೆ ದಿಕ್ಸೂಚಿಯಾಗಬೇಕೆಂದು ರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಸಿ.ಬಸವರಾಜು ಹೇಳಿದರು.

ಯುವಜನ ಸೇವಾ ಮತ್ತು ಕ್ರೀಡಾ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ವರ್ತಮಾನದ ಸನ್ನಿವೇಶದಲ್ಲಿ ಯುವಕರ ಬಗೆಗಿನ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡಾಗ ಮಾನವೀಯ ಮೌಲ್ಯಗಳನ್ನು ಗೌರವಿಸಿದಂತಾಗುತ್ತದೆಂಬ ಸ್ವಾಮಿ ವಿವೇಕಾನಂದ ಸಂದೇಶ ಸಾರ್ವಕಾಲಿಕವೆಂದರು.

ಅಮೇರಿಕಾದ ಚಿಕಾಗೋದಲ್ಲಿ 1893ರಲ್ಲಿ ನಡೆದ ಧಾರ್ಮಿಕ ಸಂಸತ್ ಉದ್ದೇಶಿಸಿ ಮಾತನಾಡಿದ್ದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ ಕೇವಲ ಭಾರತಕ್ಕಷ್ಟೆ ಅಲ್ಲ. ಇಡಿ ವಿಶ್ವಕ್ಕೆ ಬೇಕಾಗಿದೆ. ಸಾಮರಸ್ಯ, ಸಹಭಾಳ್ವೆ, ಐಕ್ಯತೆಯಿಂದ ಎಲ್ಲಾ ಜಾತಿ ಧರ್ಮದವರು ಬಾಳಬೇಕಾಗಿರುವುದರಿಂದ ಯಾವುದೆ ಒಂದು ಧರ್ಮವನ್ನು ಅವಮಾನಿಸಬಾರದು. ಎಲ್ಲಾ ಧರ್ಮಗಳಲ್ಲಿರುವ ಒಳ್ಳೆ ಅಂಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಸ್ಪರರು ಅರ್ಥಮಾಡಿಕೊಂಡು ಸಹನೆಯಿಂದ ಬದುಕಿದಾಗ ಧರ್ಮ ಸಂಘರ್ಷಕ್ಕೆ ದಾರಿಯಿರುವುದಿಲ್ಲ. ಸೈದ್ದಾಂತಿಕ, ಧಾರ್ಮಿಕ ತಳಹದಿಯ ಮೇಲೆ ಸಮಾಜದಲ್ಲಿ ಶಾಂತಿ ಉಂಟು ಮಾಡಬಹುದೆನ್ನುವುದು ಸ್ವಾಮಿ ವಿವೇಕಾನಂದರವರ ಚಿಂತನೆಯಾಗಿತ್ತು ಎಂದರು.

ಇಂದಿನ ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರವರ ಚಿಂತನೆ, ಆದರ್ಶ ಮುಖ್ಯ. ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ, ಧರ್ಮ, ಮಾನವೀಯತೆ ಹೀಗೆ ಎಲ್ಲಾ ರಂಗಗಳಲ್ಲಿಯೂ ಸ್ವಾಮಿ ವಿವೇಕಾನಂದರವರ ಚಿಂತನೆಗಳು ಅಡಗಿದೆ. ಶಾಂತಿ, ಸಹೋದರತ್ವವನ್ನು ಹೇಗೆ ಹುಟ್ಟು ಹಾಕಬೇಕೆಂಬ ಕುರಿತು ಸದಾ ಆಲೋಚಿಸುತ್ತಿದ್ದ ಸ್ವಾಮಿ ವಿವೇಕಾನಂದರವರ ಮೌಲ್ಯಗಳು ಯುವ ಪೀಳಿಗೆಗೆ ದಾರಿ ದೀಪವಾಗಬೇಕು. ಧರ್ಮ ಎನ್ನುವುದು ಪುಸ್ತಕ, ಬರವಣಿಗೆಯಲ್ಲಿಲ್ಲ. ನಿಮ್ಮ ನಿಮ್ಮ ಅಂತರಾತ್ಮದಲ್ಲಿದೆ. ಸ್ವತಃ ಯೋಚನೆ, ವೈಯಕ್ತಿಕ ಶ್ರಮದಿಂದ ಜೀವನದಲ್ಲಿ ಸಾಧನೆ ಸಾಧ್ಯ ಎಂದು ತಿಳಿಸಿದರು.

ಮೌಲ್ಯ ವೃದ್ಧಿಸಿಕೊಳ್ಳಲು ಅಂತರಂಗದ ಶಕ್ತಿಯನ್ನು ಬಳಸಿ. ನಿಸ್ವಾರ್ಥ ಸೇವೆಯಿಂದ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದೆಂದು ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ. ಪ್ರತಿಯೊಂದು ಧರ್ಮದಲ್ಲೂ ಧಾರ್ಮಿಕ ಸತ್ವವಿದೆ. ಯಾವ ಕೆಲಸವನ್ನಾಗಲಿ, ಏಕಾಗ್ರತೆ, ಬದ್ಧತೆಯಿಂದ ನಿಭಾಯಿಸಿದಾಗ ಗುರಿ ಮುಟ್ಟಲು ಸಾಧ್ಯ. ಸಾಮಾಜಿಕ ಪಿಡುಗು, ಅಸಮತೋಲನ ನಿವಾರಣೆಗೆ ಶಿಕ್ಷಣವೊಂದೆ ಅಸ್ತ್ರ ಎನ್ನುವ ಜಾಗೃತಿಯನ್ನು ಯುವ ಪೀಳಿಗೆಯಲ್ಲಿ ಸ್ವಾಮಿ ವಿವೇಕಾನಂದರು ಮೂಡಿಸಿದ್ದರು. ನಕಾರಾತ್ಮಕ ಆಲೋಚನೆಯಿಂದ ಹೊರ ಬರಲು ಧ್ಯಾನ ಮಾಡಿ ಎಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಷ್ಟ್ರೀಯ ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಕಾನೂನು ಕಾಲೇಜು ಅಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ ವೀರ ಸನ್ಯಾಸಿಯಾಗಿದ್ದ ಸ್ವಾಮಿ ವಿವೇಕಾನಂದರು ಯುವಕರೆ ಏಳಿ, ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ ಎನ್ನುವ ಸಂದೇಶ ನೀಡಿದ್ದಾರೆ.ಹಾಗಾಗಿ ವಿವೇಕಾನಂದರವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳುವುದು ಅಗತ್ಯ ಎಂದರು.ಸರಸ್ವತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಡಿ.ಕೆ.ಶೀಲಾ ಮಾತನಾಡಿದರು. ಪ್ರಾಚಾರ್ಯೆ ಡಾ.ಎಂ.ಎಸ್.ಸುಧಾದೇವಿ ಪ್ರಾಸ್ತಾವಿಕ ಮಾತನಾಡಿದರು.ಸರಸ್ವತಿ ಕಾನೂನು ಕಾಲೇಜು ಉಪಾಧ್ಯಕ್ಷ ಫಾತ್ಯರಾಜನ್, ಎನ್ಎಸ್ಎಸ್ ಕೋ-ಆರ್ಡಿನೇಟರ್ ಐ.ಬಿ.ಬೀರಾದರ್, ಆರ್ಥಿಕ ಚಿಂತಕ ಡಾ.ಎನ್.ಮಲ್ಲಿಕಾರ್ಜುನಪ್ಪ ವೇದಿಕೆಯಲ್ಲಿದ್ದರು.ಸಹಾಯಕ ಪ್ರಾಧ್ಯಾಪಕ ಡಾ.ಡಿ.ಬಿ.ರವಿಕುಮಾರ್ ರಾಷ್ಟ್ರೀಯ ಪ್ರತಿಜ್ಞೆ ಬೋಧಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪಿ.ಮುರುಗೇಶ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ