ಧಾರವಾಡ: ಯಕ್ಷಗಾನ ತಾಳಮದ್ದಳೆಗೆ ದೊಡ್ಡ ಪರಂಪರೆ ಇದೆ. ಈ ಯಕ್ಷಗಾನ ತಾಳಮದ್ದಲೆ ಪ್ರಸ್ತುತ ಸ್ವತಂತ್ರ ಕಲಾ ಪ್ರಕಾರವಾಗಿ ಬೆಳೆದಿದೆ. ತಾಳಮದ್ದಳೆಯಲ್ಲಿ ಮಾತಿನ ನವನೀತವೇ ಮುಖ್ಯ ಎಂದು ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಹೇಳಿದರು.
ಸಂಘ ಎಲ್ಲ ಪ್ರಕಾರದ ಸಾಹಿತ್ಯ, ಕಲೆ, ಸಂಗೀತ, ಲಲಿತ ಕಲೆಗಳಿಗೆ ನಿರಂತರವಾಗಿ ಪ್ರೋತ್ಸಾಹಿಸುತ್ತಿದೆ. ಪ್ರಸ್ತುತ ಸಮಯದಲ್ಲಿ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ಕರಾವಳಿ ಜಿಲ್ಲೆ ಕೇರಳದಲ್ಲಿ ಹೆಚ್ಚು ಜನಪ್ರಿಯ ಕಲೆ. ಯಕ್ಷಗಾನ ಬಯಲಾಟದಲ್ಲಿರುವಂತೆ ಯಾವುದೇ ನೃತ್ಯ ವೈಭವವಾಗಲಿ, ವೇಷಭೂಷಣದ ಸೋಗು ತಾಳಮದ್ದಳೆ ಪ್ರಸಂಗದಲ್ಲಿ ಇರುವುದಿಲ್ಲ. ಪೌರಾಣಿಕ ಪ್ರಸಂಗಗಳನ್ನು ಅರ್ಥೈಸಿ ಹೇಳಲಾಗುತ್ತದೆ. ಸಂಘ ಇಂತಹ ಕಲೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವುದು ಸಮಾಧಾನದ ಸಂಗತಿ ಎಂದರು.
ಡಾ. ಎಂ.ಎಂ. ಕಲಬುರ್ಗಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಸ್ಥಾಪನಾ ದಿನದಂದು ಸಂಘದ ಹಿರಿಯ ಸದಸ್ಯರನ್ನು ಗೌರವಿಸುವುದು ಒಂದೆಡೆಯಾದರೆ ನವೆಂಬರ್ ಇಡೀ ತಿಂಗಳು ಪೂರ್ತಿ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಯೋಜಿಸುತ್ತಿದೆ ಎಂದರು.ಸಂಘದ ಹಿರಿಯ ಸದಸ್ಯರಾದ ವಿ.ಜಿ. ಚಂದ್ರಶೇಖರಪ್ಪ, ಎಸ್.ಎಂ. ಚಿಕ್ಕಮಠ, ಕೆ.ಜಿ. ಆಡೂರ ಅವರನ್ನು ಗೌರವ ಉಪಾಧ್ಯಕ್ಷರಾದ ಕೆ.ಬಿ. ನಾವಲಗಿಮಠ ಸನ್ಮಾನಿಸಿದರು. ಶಂಕರ ಕುಂಬಿ ವಂದಿಸಿದರು. ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ ಇದ್ದರು.