ಶೀಲಾ ಹಾಲ್ಕುರಿಕೆ, ಶರಣು ಶೆಟ್ಟರ್, ಲಕ್ಷ್ಮಣ ಪೀರಗಾರರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ
ಸಿನಿಮಾಗಳು ನಟರನ್ನು ದೊಡ್ಡದಾಗಿ, ಟಿವಿಗಳು ಚಿಕ್ಕದಾಗಿ ತೋರಿಸಿದರೆ ಪ್ರೇಕ್ಷಕನಿಗೆ ನಿಜವಾದ ಚಿತ್ರಣ ಕೊಡುವುದು ರಂಗಭೂಮಿ ಮಾತ್ರ. ಇವತ್ತಿನ ಮೊಬೈಲ್, ಟಿವಿಗಳ ಹಾವಳಿಯಲ್ಲಿ ರಂಗಭೂಮಿಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಇದನ್ನು ಉಳಿಸಿ, ಬೆಳೆಸಬೇಕಿದೆ ಎಂದು ನಾಟಕ ಅಕಾಡೆಮಿಯ ಸದಸ್ಯ ಚಾಂದಪಾಷಾ ಕಿಲ್ಲೇದಾರ ಹೇಳಿದರು.
ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕನ್ನಡನೆಟ್ ಡಾಟ್ ಕಾಮ್, ಕವಿಸಮಯ ಹಾಗೂ ಬಹುತ್ವ ಬಳಗ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಿಜಿಕೆ ರಂಗ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸಿಜಿಕೆಯವರು ಬೀದಿ ನಾಟಕಗಳ ಪರಿಕಲ್ಪನೆ ಹುಟ್ಟು ಹಾಕಿದರು. ಕಲೆಯು ಜನಪರವಾಗಿರಬೇಕು ಎಂಬುದು ಸಿಜಿಕೆಯವರ ಆಶಯವಾಗಿತ್ತು. ಕಲೆಯು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಕಲೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಂಗಕಲೆಗೆ ಸರ್ಕಾರ ಸಹಾಯಧನ ನೀಡುತ್ತದೆ. ಅದನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.ಪ್ರಶಸ್ತಿ ಪ್ರದಾನ:
ಮುಖ್ಯ ಅತಿಥಿಗಳಾಗಿದ್ದ ಪ್ರಗತಿಪರ ಚಿಂತಕಿ ಶೈಲಜಾ ಹಿರೇಮಠ್, ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಗೌಸ್ ಮುಲ್ಲಾ, ಪ್ರಶಸ್ತಿ ಸ್ವೀಕರಿಸಿದ ಶೀಲಾ ಹಾಲ್ಕುರಿಕೆ, ಲಕ್ಷ್ಮಣ್ ಪೀರಗಾರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಗಣಪತಿ ಲಮಾಣಿ ಮಾತನಾಡಿದರು.