ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ

KannadaprabhaNewsNetwork | Published : Nov 6, 2023 12:46 AM

ಸಾರಾಂಶ

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಕಲ್ಪಿಸುವುದೇ ನಮ್ಮ ಸರ್ಕಾರದ ಆಶಯವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ ಲಾಡ್

ಕನ್ನಡಪ್ರಭ ವಾರ್ತೆ ಹಾವೇರಿ

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಕಲ್ಪಿಸುವುದೇ ನಮ್ಮ ಸರ್ಕಾರದ ಆಶಯವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿದ ಅವರು, ಜನರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರವೇ ನೇರವಾಗಿ ಜನರ ಬಳಿ ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದೆ ಎಂದರು.

ಕಟ್ಟಡ ಕಾರ್ಮಿಕ ಸಂಘಟನೆಗಳು ಶಿಶುಪಾಲನಾ ಕೇಂದ್ರ, ವಿದ್ಯಾರ್ಥಿ ವೇತನ, ಹಾಸ್ಟೆಲ್ ಕೆಲಸಗಾರರಿಗೆ ಹಾಗೂ ಅಕ್ಷರ ದಾಸೋಹ ಕಾರ್ಮಿಕರಿಗೆ ಕನಿಷ್ಠ ವೇತನ ಸೌಲಭ್ಯ, ಕಾರ್ಮಿಕರಿಗೆ ಮನೆ ನಿರ್ಮಾಣದ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕ ಮುಖಂಡರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಿಶುಪಾಲನಾ ಕೇಂದ್ರದಲ್ಲಿ ಕೆಲಸ ಮಾಡುವ ಮಹಿಳೆಯು ಕೆಲಸದ ಸಮಯದಲ್ಲಿ ತನ್ನ ಮಗುವಿನ ಪಾಲನೆಗೋಸ್ಕರ ತನ್ನ ಮಗುವನ್ನು ಕೇಂದ್ರದಲ್ಲಿ ಬಿಟ್ಟು ಕೆಲಸ ಮಾಡಲು ಹೋಗಬಹುದು. ಇದು ಶಿಶುಪಾಲನಾ ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಶಿಶುಪಾಲನಾ ಕೇಂದ್ರದಲ್ಲಿ ಸರ್ಕಾರ ಪ್ರತಿ ಮಗುವಿನ ಮೇಲೆ ಖರ್ಚು ಮಾಡುತ್ತಿದ್ದು, ನೈಜ ಕಾರ್ಮಿಕರು ಇದರ ಪ್ರಯೋಜನೆ ಪಡೆದುಕೊಳ್ಳುತ್ತಿಲ್ಲ ಎಂದರು.

ಕಟ್ಟಡ ಕಾರ್ಮಿಕರು ಸರ್ಕಾರದಿಂದ ಕಾರ್ಮಿಕರಿಗೆ ಮನೆ ಮಂಜೂರು ಮಾಡಿಕೊಡುವಂತೆ ಸಚಿವರಲ್ಲಿ ಬೇಡಿಕೆ ಇಟ್ಟರು. ಈ ಬಗ್ಗೆ ಮಾತನಾಡಿದ ಸಚಿವರು, ಈವರೆಗೂ ಕಟ್ಟಡ ಕಾರ್ಮಿಕರಿಗೆ ಮನೆ ಮಂಜೂರು ಮಾಡಿಲ್ಲ. ಅದು ಈಗ ಕಷ್ಟದ ಕೆಲಸ. ಕಟ್ಟಡ ಕಾರ್ಮಿಕರಿಗೆ ಮನೆ ಮಾಡಬೇಕಾದರೆ ಮೊದಲು ಸರ್ಕಾರ ಮಟ್ಟದಲ್ಲಿ ಯೋಜನೆ ರೂಪಿಸಿಕೊಂಡು ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಬೋಗಸ್ ಲೇಬರ್‌ ಕಾರ್ಡುಗಳಿದ್ದು, ಮೊದಲು ಅವುಗಳನ್ನು ಕಡಿಮೆ ಮಾಡಿ ನೈಜ ಕಾರ್ಮಿಕರನ್ನು ಗುರುತಿಸುವ ಕೆಲಸವಾಗಬೇಕಾಗಿದೆ. ನಂತರ ಬ್ಯಾಂಕುಗಳು ಕಾರ್ಮಿಕರಿಗೆ ಮನೆ ಮಂಜೂರು ಮಾಡಲು ಸಾಲ ಸೌಲಭ್ಯ ನೀಡಲು ಒಪ್ಪಿಗೆ ಸೂಚಿಸಬೇಕು. ಆಗ ಮಾತ್ರ ಈ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

ಅದೇ ರೀತಿಯಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ಲಿಪ್ಕಾರ್ಟ್, ಅಮೆಜಾನ್, ಇತರೆ ಕಾರ್ಮಿಕ ವರ್ಗದವರಿಗೂ ಹಾಗೂ ಮನೆ ಕೆಲಸಗಾರರು ಹೀಗೆ ೫೦ ಲಕ್ಷ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಸೌಲಭ್ಯ ನೀಡಿ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದರು.

ಸಭೆಯಲ್ಲಿ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಕಾರ್ಮಿಕ ಇಲಾಖೆ ಆಯುಕ್ತ ಎಚ್‌.ಎನ್. ಗೋಪಾಲಕೃಷ್ಣ, ಕಟ್ಟಡ ಹಾಗೂ ಕಾರ್ಮಿಕ ಕಲ್ಯಾಣ ಅಧಿಕಾರಿ ಭಾರತಿ, ಕಾರ್ಮಿಕ ಇಲಾಖೆಯ ಕುಮಾರ್ ಇತರರು ಇದ್ದರು.

Share this article