ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಬುಧವಾರ ನಡೆದ ಗ್ಯಾಂಗ್‍ವಾರ್‌ಗಳಲ್ಲಿ ಇಬ್ಬರು ಯುವಕರು ಹತ್ಯೆಯಾಗಿದ್ದು, ಇದಕ್ಕೆ ಪೊಲೀಸರ ವೈಫಲ್ಯವೇ ಕಾರಣ. ಇದರ ಹೊಣೆ ಹೊತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲಿಂದ ಜಾಗ ಖಾಲಿ ಮಾಡಲಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಇದೆ ಎಂದು ಹೇಳುತ್ತಾರೆ. ಆದರೆ, ಕೊಲೆಗಳು ನಡೆಯುತ್ತಲೇ ಇವೆ. ಈ ಕೊಲೆಯ ಹಿಂದೆ ರೌಡಿಗಳ ಪಾತ್ರವಿದೆ. ಪೊಲೀಸ್ ಇಲಾಖೆಗೆ ಸಮಗ್ರ ಮಾಹಿತಿ ಇತ್ತು. ಚುನಾವಣೆಯ ದಿನ ಕೆಲವು ಕಡೆ ತಲವಾರುಗಳು ಹೊರ ಬಂದಿದ್ದವು. ಲಷ್ಕರ್ ಮೊಹಲ್ಲಾದಲ್ಲೂ ಕೂಡ ತಲವಾರುಗಳು ಇದ್ದವು ಎಂಬ ಸ್ಪಷ್ಟ ಮಾಹಿತಿ ಪೊಲೀಸರಿಗೆ ಗೊತ್ತಿತ್ತು. ಆದರೂ ಕೂಡ ಅವರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ. ಒಂದಿಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಲಷ್ಕರ್ ಮೊಹಲ್ಲಾದಲ್ಲಿ ನಡೆದ ಕೊಲೆಗಳನ್ನು ತಪ್ಪಿಸಬಹುದಿತ್ತು ಎಂದು ಆರೋಪಿಸಿದರು.ಕೋಟೆ ಪೊಲೀಸ್ ಠಾಣೆಯ ಸಬ್‍ಇನ್ಸ್‌ಪೆಕ್ಟರ್ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಕೊಲೆ ಮಾಡಿದವರು ಹೊಳಲೂರಿನಲ್ಲಿ ಉಳಿದುಕೊಂಡಿದ್ದರು ಎಂಬ ಮಾಹಿತಿ ಇದೆ. ಅಲ್ಲದೆ ಯಲ್ಲಮ್ಮನ ದೇವಸ್ಥಾನದ ಬಳಿಯ ಹಿಂದುಗಳ ಮನೆಯೊಂದನ್ನು ಕೆಲವರು ಬಾಡಿಗೆ ತೆಗೆದುಕೊಂಡಿದ್ದಾರೆ. ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಮಾಹಿತಿಗಳಿವೆ. ಗಾಂಜಾ, ಅಫೀಮುಗಳ ಸಾಗಾಣಿಕೆ ಇದೆ. ಅದರ ಪರಿಣಾಮವೇ ಈ ರೀತಿಯ ಘಟನೆಗಳಿಗೆ ಕಾರಣವಾಗಿವೆ.
ಕಳೆದ ಹಲವು ದಿನಗಳ ಹಿಂದೆ ಸರ್ಕಾರಿ ನೌಕರನೊಬ್ಬನ ಮೇಲೆ ಹಲ್ಲೆಯಾಗಿತ್ತು. ದೂರು ಕೊಟ್ಟರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆಗೆ ಸಂಬಂಧಪಟ್ಟಂತೆ ಕೋಟೆ ಪೊಲೀಸ್ ಸ್ಟೇಷನ್ ಎಸ್.ಐ.ನ್ನು ಕೂಡಲೇ ವರ್ಗಾವಣೆ ಮಾಡಬೇಕು. ಶಾಂತಿ ಕಾಪಾಡಲು ಆಗದ ಎಸ್ಪಿಯವರು ಜಿಲ್ಲೆಯಲ್ಲಿ ಇದ್ದರೆಷ್ಟು ಹೋದರೆಷ್ಟು ಕೂಡಲೇ ಅವರು ಜಾಗ ಖಾಲಿ ಮಾಡಲಿ ಎಂದು ಹರಿಹಾಯ್ದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ.ಮೇಘರಾಜ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ನಾಗರಾಜ್, ಮೋಹನ್‍ರೆಡ್ಡಿ, ಚಂದ್ರಶೇಖರ್, ಅಣ್ಣಪ್ಪ ಮತ್ತಿತರರಿದ್ದರು.
ಗಂಭೀರ ಗಾಯಗೊಂಡಿದ್ದ 3ನೇ ವ್ಯಕ್ತಿ ಯಾಸಿನ್ ಖುರೇಷಿ ಸಾವುಶಿವಮೊಗ್ಗ: ಗ್ಯಾಂಗ್ ವಾರ್‌ನಲ್ಲಿ ಗಂಭೀರ ಗಾಯಗೊಂಡಿದ್ದ ರೌಡಿ ಶೀಟರ್ ಯಾಸಿನ್ ಖುರೇಷಿ ಗುರುವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ನಡೆದಿದ್ದ ದಾಳಿ ವೇಳೆ ಯಾಸಿನ್ ಖುರೇಷಿ ಗಂಭೀರ ಗಾಯಗೊಂಡಿದ್ದ.
ಈತನ ಮೇಲೆ ಆದಿಲ್ ಮತ್ತು ಆತನ ಸಹಚರರು ದಾಳಿ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಆತನನ್ನು ಶಿವಮೊಗ್ಗದ ಎನ್.ಎಚ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಯಾಸಿನ್ ಸಾವನ್ನಪ್ಪಿದ್ದಾನೆ. ಬುಧವಾರ ಸಂಜೆ ಆದಿಲ್ ಮತ್ತು ಆತನ ಸಹಚರರು ಲಷ್ಕರ್ ಮೊಹಲ್ಲಾದಲ್ಲಿ ಯಾಸಿನ್ ಖುರೇಷಿ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಯಾಸಿನ್‌ನ ಸಹಚರರು ಆದಿಲ್ ಸಹಚರರಾದ ಸೊಹೇಲ್ ಅಲಿಯಾಸ್ ಸೇಬು (32) ಮತ್ತು ಗೌಸ್ (30) ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಚಪ್ಪಡಿ ಕಲ್ಲುಗಳನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದರು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.