ನಕಲಿ ಸಹಾಯವಾಣಿ ಕರೆಗೆ ನೌಕರಗೆ ಬಿತ್ತು ಪಂಗನಾಮ!

KannadaprabhaNewsNetwork | Published : Jan 3, 2025 12:32 AM

ಸಾರಾಂಶ

ಮೋಸ ಹೋಗೋರು ಇರೋವರೆಗೂ ಮೋಸ ಮಾಡೋರು ಇರುತ್ತಾರೆಂಬ ಪ್ರತೀತಿ ಮುರಿಯುವತ್ತ ಸಿಸಿಪಿ ಸಿಬ್ಬಂದಿ ಚುರುಕಾಗಿ ವಂಚಕರ ಪತ್ತೆ ಮಾಡಿ

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮೊಬೈಲ್ ಮೂಲಕ ನಕಲಿ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಲಕ್ಷಾಂತರ ಹಣ ಕಳೆದುಕೊಂಡ ಪ್ರಾಚಾರ್ಯರ ಪ್ರಹಸನ ಜನಮಾನಸದಲ್ಲಿ ಹಸಿರಾಗಿರುವಾಗಲೇ ಈ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದ್ದರೂ, ಮತ್ತದೇ ಫೋನ್ ಕರೆಗಳಿಗಳಿಂದ ವಿದ್ಯಾವಂತರೇ ವಂಚಕರ ಖೆಡ್ಡಾಗೆ ಬೀಳುತ್ತಿರುವ ಪ್ರಕರಣಗಳು ಅವಳಿ ನಗರದಲ್ಲಿ ಹೆಚ್ಚುತ್ತಿವೆ.

ಇಲ್ಲಿನ ತಾಪಂ ಅಧಿಕಾರಿಯೊಬ್ಬರಿಗೆ ಸಹಾಯವಾಣಿ ಹೆಸರಲ್ಲಿ ಕರೆ ಮಾಡಿ ಡೆಬಿಟ್/ಕ್ರೆಡಿಟ್ ಕಾರ್ಡ್‌ನಿಂದ ₹೨.೫ ಲಕ್ಷ ಲಪಟಾಯಿಸಲಾಗಿದೆ. ರಬಕವಿ-ಬನಹಟ್ಟಿಯಲ್ಲಿ ಮತ್ತೊಂದು ಪ್ರಕರಣ ಸಾಕ್ಷಿಯಾಗಿ, ಡೆಬಿಟ್/ಕ್ರೆಡಿಟ್‌ನಿಂದ ಯುಪಿಐ ಮೂಲಕ ಸಹಾಯವಾಣಿ ಹೆಸರಲ್ಲಿ ಇಲ್ಲಿನ ತಾಪಂ ಅಧಿಕಾರಿಯೊಬ್ಬರಿಗೆ ಆನಲೈನ್‌ನಲ್ಲಿ ₹೨.೫ ಲಕ್ಷ ಮುಂಡಾಯಿಸಿರುವ ಕುರಿತು ಸಿಸಿಪಿ (ಸೈಬರ್ ಕ್ರೈಂ ಪೋರ್ಟಲ್) ಆನ್‌ಲೈನ್ ಮೂಲಕ ದೂರು ನೀಡಲಾಗಿದೆ.

ನಡೆದದ್ದೇನು?:

ಡಿ.೨೬ರಂದು ಎಸ್‌ಬಿಐ ಕಾರ್ಡ್ ಚಿಹ್ನೆಯೊಂದಿಗೆ ಹಿಂದಿ ಭಾಷೆಯಲ್ಲಿ ಕರೆ ಮಾಡಿದ ವಂಚಕರು ನಿಮ್ಮ ಎಸ್‌ಬಿಐನ ಡೆಬಿಟ್/ಕ್ರೆಡಿಟ್ ಕಾರ್ಡ್‌ ಅವಧಿ ಇಂದು ಮುಕ್ತಾಯಗೊಳ್ಳಲಿದೆ. ಕಾರ್ಡ್ ನಂಬರ್ ದೃಢೀಕರಿಸಿಕೊಳ್ಳಲು ನಂಬರ್ ತಿಳಿಸಿ ಎಂದಿದ್ದಾರೆ. ಕರೆಯನ್ನು ನಿರ್ಲಕ್ಷ್ಯ ಮಾಡಿದ ಅಧಿಕಾರಿಗೆ ಮತ್ತೇ ಮರುದಿನ ಕರೆ ಮಾಡಿ ನಂಬರ್ ತಿಳಿಸುವಂತೆ ಶಿಷ್ಟಾಚಾರ ಸಹಿತ ಅನುನಯದಿಂದ ಮಾತುಗಳನ್ನಾಡಿದ್ದಾರೆ. ನಾನು ಸ್ಥಳೀಯ ಶಾಖೆಗೆ ಭೇಟಿ ಕೊಡುವುದಾಗಿ ತಿಳಿಸಿದ ನೌಕರಿನಿಗೆ ಬ್ಯಾಂಕ್‌ಗಳಿಗೆ ಎರಡು ದಿನ ರಜೆ ಕಾರಣ ಇಲ್ಲಿಂದಲೇ ತಮ್ಮ ಕ್ರೆಡಿಟ್ ಕಾರ್ಡ್‌ ಅನ್ನು ₹೫೦ ಸಾವಿರ ಬದಲಾಗಿ ₹೧ ಲಕ್ಷ ಹೆಚ್ಚಿಸಲಾಗುವದೆಂದು ತಿಳಿಸಿದ್ದನ್ನು ನಂಬಿದ ನೌಕರ ಕಾರ್ಡ್ ಮೇಲಿನ ಸಂಖ್ಯೆಗಳನ್ನು ಹೇಳಿದ್ದಾರೆ. ಆ ಕಡೆಯಿಂದ ತಮ್ಮ ನಂಬರ್‌ಗಳು ಸರಿಯಾಗಿವೆ ಧನ್ಯವಾದವೆಂದು ತಿಳಿಸಿದ್ದಾರೆ. ಅದರಂತೆ ಮತ್ತೊಮ್ಮೆ ಅವಧಿ ಮುಕ್ತಾಯದ ದಿನಾಂಕ ಸ್ಪಷ್ಟಪಡಿಸಿ ಎಂದಿದ್ದಾರೆ. ಮತ್ತೇ ವಿಶ್ವಾಸದ ಮಾತುಗಳು ಹಿಂದಿ ಭಾಷೆಯಲ್ಲಿಯೇ ಮುಂದುವರೆದು ಸಿವಿವಿ ನಂಬರ್‌ನ್ನು ಸ್ಪಷ್ಟಪಡಿಸಿ ಎಂದಿದ್ದಾರೆ. ಉತ್ತರಿಸಿದ ತಕ್ಷಣವೇ ₹೧೯ ಸಾವಿರ ಚಿಲ್ಲರೆ ಹಣ ಬಟವಡೆಯಾಗುತ್ತಲೇ ಖಾತೆಯಲ್ಲಿರುವ ಎಲ್ಲ ಹಣ ಗುಳುಂ ಮಾಡಿದ್ದಾರೆ.

ಮೂರು ದಿನಗಳಿಂದ ಹಣ ಬಟವಡೆ:

ದಿ.೨೭ರಿಂದ ೩೦ನೇ ತಾರೀಖಿನವರೆಗೂ ₹೧೯ ಸಾವಿರ ಮೇಲ್ಪಟ್ಟ ಹಣವನ್ನು ಸುಮಾರು ೧೦ ಬಾರಿ ಬಟವಡೆ ಮಾಡಿಕೊಂಡಿದ್ದಾರೆ. ಈ ಕುರಿತು ಗ್ರಾಹಕನಿಗೆ ತಿಳಿಯಬಾರದೆಂಬ ಉದ್ದೇಶಕ್ಕೆ ಡಿಎನ್‌ಡಿ(ಡು ನೋಟ್ ಡಿಸ್ಟರ್ಬ್) ಅಂದರೆ ಮೊಬೈಲ್‌ಗಳಿಗೆ ಖಾತೆಯ ಮಾಹಿತಿ ಬಾರದಂತೆ ಸಂಚು ಮಾಡಿದ್ದಾರೆ. ಸಂಶಯಗೊಂಡ ಸಂತ್ರಸ್ತ ಸೋಮವಾರ ಸ್ಥಳೀಯ ಎಸ್‌ಬಿಐನಲ್ಲಿ ತೆರಳಿ ಖಾತೆಯ ಲಿಖಿತ ವಹಿವಾಟು ವಿವರ ಪಡೆದ ನಂತರ ಶಾಕ್ ಆಗಿದ್ದಾರೆ. ಇತ್ತ ಮೊಬೈಲ್ ಮೂಲಕ ಪಡೆದ ನಕಲಿ ಸಹಾಯವಾಣಿ ನಂಬರ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದೆ.

ತಕ್ಷಣ ಮೋಸ ಹೋಗಿರುವ ಬಗ್ಗೆ ಖಚಿತವಾದ ಹಿನ್ನೆಲೆಯಲ್ಲಿ ಸಿಸಿಪಿ ಆನ್‌ಲೈನ್ ಮೂಲಕ ದೂರು ನೀಡಿದ್ದಾರೆ. ಮೋಸ ಹೋಗೋರು ಇರೋವರೆಗೂ ಮೋಸ ಮಾಡೋರು ಇರುತ್ತಾರೆಂಬ ಪ್ರತೀತಿ ಮುರಿಯುವತ್ತ ಸಿಸಿಪಿ ಸಿಬ್ಬಂದಿ ಚುರುಕಾಗಿ ವಂಚಕರ ಪತ್ತೆ ಮಾಡಿ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಬೇಕಿದೆ.

Share this article