ಕನ್ನಡಪ್ರಭ ವಾರ್ತೆ ಮೈಸೂರು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಗೆಲುವು ಸಾಧಿಸಲಿ ಎಂದು ಅವರ ಅಭಿಮಾನಿಗಳು ಮೈಸೂರಿನ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿ ಗುರುವಾರ ಪ್ರಾರ್ಥನೆ ಸಲ್ಲಿಸಿದರು.ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸುಮಾರು 300 ಮಂದಿ ಗುರುವಾರ ಬೆಳಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದರು. ಆಮೂಲಕ ಡಿ.ಕೆ. ಸುರೇಶ್ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಬೇಕು ಎಂದು ಪ್ರಾರ್ಥಿಸಿದರು.
ಡಿ.ಕೆ. ಸುರೇಶ್ ಅವರು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಬೇಕು ಎಂದು ಎಲ್ಲರೂ ಹರಕೆ ಹೊತ್ತು ಬಂದಿದ್ದೇವೆ. ನಮ್ಮಂತಹ ಗದ್ದೆ, ಹೊಲ ಇಲ್ಲದವರಿಗೆ ಪ್ರತಿ ತಿಂಗಳು ಕಾಂಗ್ರೆಸ್ ಸರ್ಕಾರ 2 ಸಾವಿರ ನೀಡುತ್ತಿದೆ. ಜೊತೆಗೆ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ನೀಡುತ್ತಿದ್ದಾರೆ. ಇದರಿಂದ ನಮ್ಮ ಸಂಸಾರವನ್ನು ನಡೆಸಲು ಸಹಾಯವಾಗುತ್ತಿದೆ. ಸರ್ಕಾರದ ಈ ಯೋಜನೆಗಳು ನಮಗೆ ಅನುಕೂಲವಾಗಿವೆ. ಈ ಯೋಜನೆಗಳಿಂದ ರಾಜ್ಯಕ್ಕೆ ಯಾವುದೇ ತೊಂದರೆ ಇಲ್ಲ. ಬಿಜೆಪಿ ನಮ್ಮಂತಹ ಬಡವರಿಗಾಗಿ ಏನು ಮಾಡಿದೆ ಎಂದು ಅಭಿಮಾನಿಗಳು ಪ್ರಶ್ನಿಸಿದರು.ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶಕ್ತಿ ತುಂಬುವಂತಹ ಕಾರ್ಯಕ್ರಮವನ್ನು ನೀಡಿದ್ದಾರೆ. ನಾವು ಗಂಡದಿರು, ಮಕ್ಕಳ ಬಳಿ ಹಣ ಕೇಳುವ ಪರಿಸ್ಥಿತಿಯನ್ನು ನೀಡದೇ ನಮಗೆ ಅವರು ಹಣ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಉಚಿತ ಬಸ್ ವ್ಯವಸ್ಥೆ, 2 ಸಾವಿರ ಹಣ, ಉಚಿತ ವಿದ್ಯುತ್ ಸೌಕರ್ಯ, ಅನ್ನಭಾಗ್ಯ ಯೋಜನೆ ಎಲ್ಲವನ್ನು ಜಾರಿ ಮಾಡಿದ್ದಾರೆ. ಆ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆ. ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಮಗೆ ಇನ್ನು ಹೆಚ್ಚಿನ ಸಿಗುವ ಭರವಸೆಯಿದೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಅವರು ಮನವಿ ಮಾಡಿದರು.