ಎಲೆಚುಕ್ಕಿ ಔಷಧಕ್ಕೆ ಕಾದು ಕಂಗಾಲಾದ ರೈತ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ಎಲೆಚುಕ್ಕಿ ರೋಗದಿಂದ ಮಲೆನಾಡೇ ಹೊತ್ತಿ ಉರಿಯುತ್ತಿದೆ. ಇಲಾಖೆಯ ಬಾಗಿಲಿನಲ್ಲಿ ಔಷಧ ಖಾಲಿಯಾಗಿದೆ ಎಂಬ ಫಲಕ ರೈತರನ್ನು ಕಂಗೆಡಿಸಿದೆ.

ಮಂಜುನಾಥ ಸಾಯೀಮನೆ

ಶಿರಸಿ:

ಅತ್ತ ಬಾಣಲೆಯಲ್ಲೂ ಇತ್ತ ಬೆಂಕಿಗೂ ಬೀಳಲಿಲ್ಲ ಎಂಬಂತ ಸ್ಥಿತಿ ತಾಲೂಕಿನ ಅಡಕೆ ಬೆಳೆಗಾರರದ್ದಾಗಿದೆ. ತೋಟಗಾರಿಕೆ ಇಲಾಖೆ ಉಚಿತ ಔಷಧ ನೀಡುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಅವರೇ ವಿತರಿಸಿ ಉದ್ಘಾಟಿಸಿದ್ದಾರೆ. ಆದರೆ, ಔಷಧ ಮಾತ್ರ ರೈತರಿಗೆ ಲಭ್ಯವಾಗುತ್ತಿಲ್ಲ.

ಹೌದು, ಎಲೆಚುಕ್ಕಿ ರೋಗದಿಂದ ಮಲೆನಾಡೇ ಹೊತ್ತಿ ಉರಿಯುತ್ತಿದೆ. ಇಲಾಖೆಯ ಬಾಗಿಲಿನಲ್ಲಿ ಔಷಧ ಖಾಲಿಯಾಗಿದೆ ಎಂಬ ಫಲಕ ರೈತರನ್ನು ಕಂಗೆಡಿಸಿದೆ. ಎಲೆಚುಕ್ಕಿ ರೋಗದ ಕ್ಷೇತ್ರಕ್ಕೆ ತುಲನೆ ಮಾಡಿದಲ್ಲಿ ತೋಟಗಾರಿಕೆ ಇಲಾಖೆ ನೀಡಿದ ಔಷಧ ರಕ್ಕಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರುವಿದಂತಾಗಿದೆ.

ಅಡಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗ ಕಳೆದ ವರ್ಷದಿಂದಲೇ ಕಾಣಿಸಿಕೊಂಡಿದ್ದರೂ ಈ ವರ್ಷ ಬ್ರಹ್ಮರಾಕ್ಷಸ ರೂಪ ಪಡೆದುಕೊಂಡಿದೆ. ಈ ವರ್ಷ ಹದ ಮಳೆ ಸುರಿದರೂ ಎಲೆಚುಕ್ಕಿ ರೋಗಕ್ಕೆ ವಿಸ್ತರಿಸಿಕೊಳ್ಳಲು ಸೂಕ್ತ ಹವಾಮಾನ ಲಭಿಸಿದಂತಾಗಿದೆ. ಆರ್ದ್ರತೆಯ ಅಂಶದೊಂದಿಗೆ ಇನ್ನಷ್ಟು ಹೆಚ್ಚಿಕೊಳ್ಳುವ ಎಲೆಚುಕ್ಕಿ ರೋಗಕ್ಕೆ ಗಣೇಶ ಚತುರ್ಥಿಯ ಬಳಿಕ ಸುರಿದ ಮಳೆ ವೇಗ ವರ್ಧಕವಾಗಿ ಪರಿಣಮಿಸಿದೆ.

ಶಿರಸಿ ತಾಲೂಕಿನಲ್ಲಿ ಒಟ್ಟೂ ೪೫೦೦ ಹೆಕ್ಟೇರ್ ಪ್ರದೇಶದ ಅಡಕೆ ತೋಟ ಈಗ ಎಲೆಚುಕ್ಕಿ ರೋಗಕ್ಕೆ ಒಳಗಾಗಿದೆ. ಈ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಎಲೆಚುಕ್ಕಿ ರೋಗದ ಕ್ಷೇತ್ರ ಜಾಸ್ತಿಯಾದಂತೆ ಔಷಧಗಳೂ ಬದಲಾಗುತ್ತಲೇ ಇವೆ. ಕಳೆದ ವರ್ಷ ತೋಟಗಾರಿಕೆ ಇಲಾಖೆಯೇ ಕೆಲ ರೈತರಿಗೆ ಔಷಧ ಒದಗಿಸಿತ್ತಾದರೂ ಅದು ಪರಿಣಾಮಕಾರಿಯಾಗಿರಲಿಲ್ಲ. ಅಡಕೆಗೆ ಬೋರ್ಡೋ ಸಿಂಪಡಣೆ ಮಾಡುವ ವೇಳೆ ಎಲೆಚುಕ್ಕಿ ನಿಯಂತ್ರಣಕ್ಕೆ ಹೆಡೆಗಳಿಗೂ ಸಿಂಪಡಿಸಿ ಎಂದು ಇಲಾಖೆ ಸೂಚಿಸಿತ್ತು. ಇದಾವುದೂ ಪರಿಣಾಮ ಬೀರದಿದ್ದಾಗ ಮರ ಉಳಿಸಿಕೊಳ್ಳುವ ಧಾವಂತದಲ್ಲಿ ರೈತರು ತರಹೇವಾರಿ ಔಷಧ ಹಾಕಿದ್ದಾರೆ. ನೆಗ್ಗು ಪಂಚಾಯಿತಿಯ ಕೆಲ ರೈತರು ಮರದ ಬುಡದಲ್ಲಿ ಸುರಿಯುವ ಔಷಧಗಳನ್ನೂ ಪ್ರಯೋಗ ಮಾಡಿದ್ದಾರೆ.

ಶಾಸಕ ಭೀಮಣ್ಣ ನಾಯ್ಕ ಅವರು ತೋಟಗಾರಿಕೆ ಇಲಾಖೆ ಸಚಿವರು, ಸಂಬಂಧಿಸಿದವರೊಂದಿಗೆ ಮಾತನಾಡಿದ ಪರಿಣಾಮ ಕ್ಷೇತ್ರಕ್ಕೆ ₹ ೮.೫ ಲಕ್ಷ ಮಂಜೂರಾಗಿದೆ. ಈ ಹಣದಲ್ಲಿ ತೋಟಗಾರಿಕೆ ಇಲಾಖೆ ಈ ವರ್ಷ ಬೇರೆ ಮತ್ತು ಸೂಕ್ತ ಎನಿಸುವ ಔಷಧ ಖರೀದಿಸಿ ರೈತರಿಗೆ ವಿತರಣೆ ಆರಂಭಿಸಿದೆ. ಆದರೆ, ಕಾಡ್ಗಿಚ್ಚಿಗೆ ಕೊಡದಲ್ಲಿ ನೀರು ಸೋಕಿದಂತಾಗಿದೆ. ಪ್ರೊಪಿಕಾನಾಝೋಲ್ ಔಷಧವನ್ನು ತೋಟಗಾರಿಕೆ ಇಲಾಖೆ ವಿತರಿಸಿದ್ದು, ಪ್ರತಿ ಲೀಟರ್‌ಗೆ ೧ ಎಂಎಲ್ ಈ ದ್ರಾವಣ ಬೆರೆಸಿ ಅಡಕೆ ಮರಗಳಿಗೆ ಸಿಂಪಡಿಸುವ ಈ ಔಷಧ ಕೇವಲ ಒಂದೇ ದಿನದಲ್ಲಿ ಖಾಲಿಯಾಗಿದೆ. ಆಧಾರ್‌ ಕಾರ್ಡ್, ಪಹಣಿ ಪತ್ರಿಕೆ ಹಿಡಿದು ಸರತಿ ಸಾಲಿನಲ್ಲಿ ನಿಂತು ರೈತರು ಈ ಔಷಧ ಪಡೆದುಕೊಂಡಿದ್ದಾರಾದರೂ ಕೇವಲ ೬೨೦ ರೈತರಿಗೆ ಮಾತ್ರ ಈ ಔಷಧ ಲಭಿಸಿದೆ. ಇದು ೧೫೨೦ ಎಕರೆ ಅಡಕೆ ತೋಟಕ್ಕೆ ಮಾತ್ರ ಸಾಕಾಗುತ್ತಿದೆ. ಆ ಬಳಿಕ ತೋಟಗಾರಿಕೆ ಇಲಾಖೆಯ ಮುಂದೆ ಔಷಧ ಖಾಲಿಯಾಗಿದೆ ಎಂಬ ಫಲಕ ಹಾಕಲಾಗಿದೆ. ರೈತರು ಚಾತಕ ಪಕ್ಷಿಯಂತೆ ಇಲಾಖೆಯ ಬಾಗಿಲಿಗೆ ನಿತ್ಯ ಅಲೆಯುತ್ತಿದ್ದಾರೆ.ಅಡಕೆಗೆ ಆವರಿಸಿರುವ ಎಲೆಚುಕ್ಕಿ ರೋಗ ನಿಯಂತ್ರಿಣಕ್ಕೆ ಈಗಾಗಲೇ ಹಲವು ವಿಧದ ಔಷಧ ಸಿಂಪಡಿಸಿ ಸಾವಿರಾರು ರೂ. ಖರ್ಚು ಮಾಡಿಕೊಂಡಿದ್ದೇವೆ. ತೋಟಗಾರಿಕೆ ಇಲಾಖೆ ವಿತರಿಸುವ ಔಷಧಕ್ಕಾಗಿ ಕಾದಿದ್ದು, ಔಷಧ ವಿತರಣೆಗೆ ಕಾಯುತ್ತಿದ್ದೇವೆ ಎಂದು ರೈತ ಸುರೇಶ ಹೆಗಡೆ ಹೇಳಿದ್ದಾರೆ.

Share this article