ಮೊಪೆಡ್‌ ಸಹಾಯದಿಂದ ಎಡೆಕುಂಟೆ ಹೊಡೆದ ರೈತ

KannadaprabhaNewsNetwork | Published : Jun 1, 2024 12:46 AM

ಸಾರಾಂಶ

ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದ ಯಮನೂರಪ್ಪ ಹಡಪದ ಎಂಬವರು ತನ್ನ ಹೊಲದಲ್ಲಿ ಬೆಳೆದ ಕಳೆಯನ್ನು ತನ್ನ ಮೊಪೆಡ್‌ ಬಳಸಿ, ಅತಿ ಕಡಿಮೆ ವೆಚ್ಚದಲ್ಲಿ ತೆರವು ಮಾಡಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ರೈತರೊಬ್ಬರು ಎಡೆಕುಂಟೆ ಹೊಡೆಯಲು ಎತ್ತುಗಳು ಸಿಗದ ಕಾರಣ ಟಿವಿಎಸ್ ಎಕ್ಸ್ಎಲ್ ಸೂಪರ್ ದ್ವಿಚಕ್ರ ವಾಹನ ಬಳಸಿಕೊಂಡು ಎಡೆಕುಂಟೆ ಹೊಡೆದು ಕಳೆ ತೆಗೆಯುವ ಮೂಲಕ ಗಮನ ಸೆಳೆದಿದ್ದಾರೆ.

ತಾಲೂಕಿನ ಕೊರಡಕೇರಾ ಗ್ರಾಮದ ಯಮನೂರಪ್ಪ ಹಡಪದ ಎಂಬವರು ತನ್ನ ಹೊಲದಲ್ಲಿ ಬೆಳೆದ ಕಳೆ ತೆಗೆಯಲು ಈ ಉಪಾಯ ಮಾಡಿದ್ದಾರೆ.

ಯಮನೂರಪ್ಪ ಹಡಪದ ಅವರಿಗೆ ಒಟ್ಟು ಎರಡು ಎಕರೆ ಜಮೀನು ಇದೆ. ಇತ್ತೀಚೆಗೆ ಮಳೆ ಸುರಿದ ಹಿನ್ನೆಲೆಯಲ್ಲಿ ಎತ್ತುಗಳ ಸಹಾಯದಿಂದ ಅಲಸಂದಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಅಲಸಂದಿ ಬೆಳೆಯಲ್ಲಿ ಎರಡು ಸಾಲಿನ ಮಧ್ಯೆ ಕಳೆ ಬೆಳೆದಿದೆ. ಈ ಕಳೆ ತೆಗೆಯಲು (ಎಡೆಕುಂಟಿ ಹೊಡೆಯಲು) ಸಕಾಲಕ್ಕೆ ಬಾಡಿಗೆ ಎತ್ತುಗಳು ಸಿಗಲಿಲ್ಲ. ಅವರ ಮಗ ಮಹಾಂತೇಶ ಟಿವಿಎಸ್ ಎಕ್ಸ್ಎಲ್ ಸೂಪರ್ ಬೈಕ್‌ನ ಹಿಂಬದಿಯಲ್ಲಿ ಎಡೆಕುಂಟೆ ಕಟ್ಟಿಕೊಂಡು ನಿಧಾನವಾಗಿ ಓಡಿಸಿದ್ದಾರೆ. ಯಮನೂರಪ್ಪ ಎಡೆಕುಂಟೆ ಹೊಡೆದಿದ್ದಾರೆ.

₹350 ಮಾತ್ರ ಖರ್ಚು: ಸುಮಾರು ಐದುತಾಸಿನಲ್ಲಿ ನಮ್ಮ ಎರಡು ಎಕರೆ ಹೊಲದಲ್ಲಿ ಎಡೆಕುಂಟೆ ಹೊಡೆದಿದ್ದು, ₹350 ಪೆಟ್ರೋಲ್ ಖರ್ಚು ಮಾಡಿದ್ದೇವೆ ಎನ್ನುತ್ತಾರೆ ರೈತನ ಮಗ ಮಹಾಂತೇಶ ಹಡಪದ.

ಡಿಮ್ಯಾಂಡ್: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೃಷಿಯ ಕಾರ್ಯಗಳು ಜೋರಾಗಿದ್ದು, ಎತ್ತುಗಳು ಸಿಗುವುದು ಕಷ್ಟ. ಎಡೆ ಕುಂಟೆ ಹೊಡೆಯಲು ಒಂದು ಜೊತೆ ಎತ್ತಿಗೆ ಸುಮಾರು ₹2000 ದರ ನಿಗದಿಪಡಿಸಿದ್ದಾರೆ. ದುಡ್ಡು ಕೊಟ್ಟರೂ ಸಮಯಕ್ಕೆ ಸಿಗಲಾರದ ಪರಿಸ್ಥಿತಿ ಇದೆ. ಸದ್ಯ ಎತ್ತುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಎಷ್ಟೆ ರೈತರನ್ನು ಕೇಳಿಕೊಂಡರೂ ಖಾಲಿ ಇಲ್ಲ ಎನ್ನುತ್ತಿದ್ದಾರೆ. ಹಾಗಾಗಿ ನಾನು ನನ್ನ ಮಗನ ಸಹಾಯದಿಂದ ಮೊಪೆಡ್‌ ಬಳಸಿ ಎಡೆಕುಂಟೆ ಹೊಡೆದಿರುವೆ ಎನ್ನುತ್ತಾರೆ ರೈತ ಯಮನೂರಪ್ಪ ಹಡಪದ.ಕೃಷಿ ಕಾರ್ಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಎತ್ತುಗಳ ಬಾಡಿಗೆ ಸಿಗುವುದು ಕಷ್ಟವೆನಿಸಿತು. ಆದ ಕಾರಣ ನನ್ನ ಮಗನ ಮೊಪೆಡ್ ಉಪಯೋಗ ಮಾಡಿಕೊಂಡು ನನ್ನ ಹೊಲದಲ್ಲಿ ಎಡೆಕುಂಟೆ ಹೊಡೆದಿದ್ದೇವೆ. ಖರ್ಚು ಸಹಿತ ಕಡಿಮೆಯಾಗಿದೆ ಎಂದು ಕೊರಡಕೇರಾ ಗ್ರಾಮದ ರೈತ ಯಮನೂರಪ್ಪ ಹಡಪದ ಹೇಳುತ್ತಾರೆ.

Share this article