ಕಾಲುವೆಗಳಿಗೆ ನೀರು ಹರಿಸಿ ಬೆಳೆ ರಕ್ಷಣೆ ಮಾಡುವಂತೆ ರೈತ ಸಂಘ ಆಗ್ರಹ

KannadaprabhaNewsNetwork |  
Published : Feb 24, 2025, 12:31 AM IST
22ಕೆಎಂಎನ್ ಡಿ18 | Kannada Prabha

ಸಾರಾಂಶ

ಗ್ರಾಮ ಆಡಳಿತಧಿಕಾರಿಗಳ ಮುಷ್ಕರದಿಂದ ರೈತರಿಗೆ ಬೇಕಾದ ಕೆಲವೊಂದು ತುರ್ತು ದಾಖಲೆಗಳನ್ನು ಪಡೆಯಲು ಪರದಾಡಬೇಕಾಗಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ನಿಯಂತ್ರಿಸಿಲು ತಕ್ಷಣವೇ ಕಂಪನಿ ಮುಖ್ಯಸ್ಥರ ಸಭೆ ಕರೆಯಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ತಕ್ಷಣವೇ ನೀರು ಹರಿಸಿ ರೈತರು ಬೆಳೆದು ನಿಂತಿರುವ ಬೆಳೆ ಸಂರಕ್ಷಣೆ ಮಾಡುವಂತೆ ತಾಲೂಕು ರೈತಸಂಘ ಆಗ್ರಹಿಸಿತು.

ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ರೈತರು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಭೇಟಿ ನೀಡಿ ನೀರು ಬಿಡುಗಡೆಗೆ ಒತ್ತಾಯಿಸಿದರು.

ಹೇಮಾವತಿ ಎಡದಂಡೆ ನಾಲಾ ವ್ಯಾಪ್ತಿ ಕೆರೆಗಳು ಹೇಮೆಯ ನೀರನ್ನು ಅವಲಂಭಿಸಿವೆ. ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ತೆಂಗು, ಅಡಿಕೆ ಮುಂತಾದ ವಾಣಿಜ್ಯ ಬೆಳೆಗಳು ಬೆಳೆದು ನಿಂತಿವೆ. ಇವುಗಳ ಸಂರಕ್ಷಣೆಗೆ ತುರ್ತು ನೀರಿನ ಅವಶ್ಯಕತೆಯಿದೆ ಎಂದರು.

ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಸರ್ಕಾರ ಹೇಮಾವತಿ ಪ್ರದೇಶದ ರೈತರಿಗೆ ಮೋಸ ಮಾಡುತ್ತಿದೆ. ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಯುವವರೆಗೂ ಕಾಯದೆ ತಕ್ಷಣವೇ ನೀರು ಹರಿಸಿ ರೈತರ ಬೆಳೆ ಸಂರಕ್ಷಣೆಗೆ ಮುಂದಾಗುವಂತೆ ಆಗ್ರಹಿಸಿದರು.

ಗ್ರಾಮ ಆಡಳಿತಧಿಕಾರಿಗಳ ಮುಷ್ಕರದಿಂದ ರೈತರಿಗೆ ಬೇಕಾದ ಕೆಲವೊಂದು ತುರ್ತು ದಾಖಲೆಗಳನ್ನು ಪಡೆಯಲು ಪರದಾಡಬೇಕಾಗಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ನಿಯಂತ್ರಿಸಿಲು ತಕ್ಷಣವೇ ಕಂಪನಿ ಮುಖ್ಯಸ್ಥರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಮನವಿ ಆಲಿಸಿದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ, ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ನೀರಾವರಿ ಸಲಹಾ ಸಮಿತಿ ಸಭೆ ನಡೆಯಬೇಕು. ರೈತರ ನೀರಿನ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.

ರೈತರ ಆರ್ ಟಿಸಿ ತಿದ್ದುಪಡಿ ಮತ್ತಿತರ ಲೋಪಗಳನ್ನು ಸರಿಪಡಿಸಿಲು ಗ್ರಾಮ ಮಟ್ಟದಲ್ಲಿಯೇ ಆಂದೋಲನ ಆಯೋಜಿಸುತ್ತ ಕಂದಾಯ ಇಲಾಖೆ ಯೋಜಿಸುತ್ತಿದೆ. ಫೆ.25 ರೊಳಗೆ ರೈತರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಚರ್ಚಿಸಲು ಸಮ್ಮತಿಸಿದರು.

ಈ ವೇಳೆ ಉಪ ತಹಸೀಲ್ದಾರ್ ರವಿ, ರೈತ ಮುಖಂಡರಾದ ಹಿರೀಕಳಲೆ ಬಸವರಾಜು, ಕರೋಟಿ ತಮ್ಮಯ್ಯ, ನಗರೂರು ಕುಮಾರ್, ಹೊನ್ನೇಗೌಡ, ಕರೋಟಿ ಕೃಷ್ಣೇಗೌಡ, ಚೌಡೇನಹಳ್ಳಿ ಕೃಷ್ಣೇಗೌಡ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಲಕ್ಷ್ಮೀಪುರ ನಾಗರಾಜು ಸೇರಿದಂತೆ ಹಲವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ