ವಿವಿ ಸಾಗರದಿಂದ ನಾಲೆಗಳಿಗೆ ನೀರು ಹರಿಸಲು ರೈತ ಸಂಘ ಆಗ್ರಹ

KannadaprabhaNewsNetwork |  
Published : Feb 07, 2024, 01:45 AM IST
ಚಿತ್ರ 1,2 | Kannada Prabha

ಸಾರಾಂಶ

ಅಚ್ಚುಕಟ್ಟು ಪ್ರದೇಶಕ್ಕೆ ವಿವಿ ಸಾಗರ ನಾಲೆಗಳಲ್ಲಿ ತುರ್ತಾಗಿ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಮಳೆ ಬಾರದೇ ಅಚ್ಚುಕಟ್ಟು ಪ್ರದೇಶದ ತೋಟಗಾರಿಕೆ ಮತ್ತು ಅಲ್ವಾವಧಿ ಬೆಳೆಗಳು ಒಣಗುತ್ತಿದ್ದು, ವಿವಿ ಸಾಗರ ಜಲಾಶಯದಿಂದ ಎಡ ಮತ್ತು ಬಲ ನಾಲೆಯಲ್ಲಿ ನೀರು ಹರಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮುಂಗಾರು ಮಳೆ ಬಾರದೇ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ತೆಂಗು, ಅಡಿಕೆ, ಬಾಳೆ, ಪಪ್ಪಾಯ, ದಾಳಿಂಬೆ ಮುಂತಾದ ತೋಟಗಾರಿಕೆ ಬೆಳೆಗಳಿಗೆ ತುರ್ತಾಗಿ ನೀರಿನ ಅವಶ್ಯಕತೆ ಇದೆ. ಜೊತೆಗೆ ಅಲ್ಪಾವಧಿ ಬೆಳೆಗಳು ಸಹ ಒಣಗುತ್ತಿವೆ. ಬರ ಪರಿಸ್ಥಿತಿ ಇರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆಲವು ಕಡೆ ಈಗಾಗಲೇ ಕೆಲವು ಬತ್ತಿ ಹೋಗಿವೆ. ವಿವಿ ಸಾಗರ ಜಲಾಶಯದಲ್ಲಿ ಈಗ 118 ಆಡಿಗೂ ಹೆಚ್ಚಿನ ನೀರು ಇರುವುದರಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಿದರೆ ಬೆಳೆಗಳು ಉಳಿಯುತ್ತವೆ ಮತ್ತು ಜಲಾಶಯದಲ್ಲಿ ನೀರಿನ ಅಭಾವವೂ ಉಂಟಾಗುವುದಿಲ್ಲ ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲೂಕು ಅಧ್ಯಕ್ಷ ಬಿ ಓ ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಲಕ್ಷ್ಮೀಕಾಂತ್, ವಿ.ಕಲ್ಪನಾ, ಮಂಜುಳಾ, ಹನುಮಂತರಾಯ, ನಿತ್ಯಶ್ರೀ, ಅವಿನಾಶ್ ಮುಂತಾದವರು ಹಾಜರಿದ್ದರು.

ಇನ್ನು, ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಪತ್ರಿಕಾ ಹೇಳಿಕೆ ನೀಡಿ, ವಿವಿ ಸಾಗರ ನಾಲೆಗಳಲ್ಲಿ ತುರ್ತಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವೇಳೆ ಸಮಿತಿಯ ನಿರ್ದೇಶಕ ಮಂಜುನಾಥ್ ಮಾಳಿಗೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ದೊಡ್ಡಘಟ್ಟ ಕುಮಾರ್ ಉಪಸ್ಥಿತರಿದ್ದರು.

ನೀರು ಹರಿಸಿ ಬೆಳೆ ಉಳಿಸಿ : ಜನವರಿ ತಿಂಗಳ 28ನೇ ತಾರೀಕಿನಂದು ಸಮಿತಿಯಿಂದ ನೀರು ಹರಿಸುವಂತೆ ಮನವಿ ಮಾಡಿದ್ದೆವು. ಆದರೂ ಸಹ ಇಲ್ಲಿ ಯವರೆಗೆ ಯಾವುದೇ ರೀತಿಯ ಪ್ರಗತಿಯಾಗಿಲ್ಲ. ಕಳೆದ ವರ್ಷ ಭೀಕರವಾದ ಬರಗಾಲವಾಗಿ ತಾಲೂಕಿನಲ್ಲಿ ಅದರಲ್ಲೂ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮಳೆ ಬೀಳದೆ ಕೆರೆ ನೀರು ನಂಬಿಕೊಂಡು ತೆಂಗು, ಅಡಿಕೆ, ಬಾಳೆ, ಪಪ್ಪಾಯ, ಶೇಂಗಾ ನಾಟಿ ಮಾಡಲಾಗಿದೆ. ಕೊಳವೆ ಬಾವಿಗಳು ಅಂತರ್ಜಲ ಕೊರತೆಯಿಂದ ಕೆಲವೊಂದು ನಿಂತು ಹೋಗಿವೆ. ಕೆಲವೊಂದು ಕೆಳಮಟ್ಟಕ್ಕೆ ಹೋಗಿವೆ. ಜಿಲ್ಲಾಧಿಕಾರಿಗಳು ತುರ್ತಾಗಿ ಸಂಬಂಧಪಟ್ಟ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಸಲಹೆ ಪಡೆದು ತುರ್ತಾಗಿ ನೀರು ಹರಿಸಬೇಕೆಂದು ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...