ರಾಮನಗರ: ನಗರದ ಅಗ್ರಹಾರದ ವ್ಯಾಸರಾಯರ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣದ ಭೂಮಿಯಲ್ಲಿ ಐದು ದಿನಗಳ ಕಾಲ ನಡೆದ ಗಜಗೌರಿ ಸಾಮೂಹಿಕ ವ್ರತಾಚರಣೆಯು ಉದ್ಯಾಪನ ಹೋಮ, ಗಜಗೌರಿ ಮೂರ್ತಿಗಳ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.
ಭೂ ಸಂಬಂಧಿತ ನಿಮಿತ್ತ ವಾಸ್ತು ಹೋಮ, ರಕ್ಷೋಗ್ನ್ ಹೋಮ, ದಿಗ್ಬಲಿ ಪೂಜೆ, ರುದ್ರ ಹೋಮ, ಮೃತ್ಯುಂಜಯ ಹೋಮ ಮತ್ತು ಆಶ್ಲೇಷ ಬಲಿ ಪೂಜೆಗಳು ನೆರೆವೇರಿದವು. ಗಜಗೌರಿ ಸಾಮೂಹಿಕ ವ್ರತಾಚರಣೆಯಲ್ಲಿ 108 ದಂಪತಿಗಳು ಪೂಜಾ ಕಾರ್ಯ ನೆರವೇರಿಸಿದರು. ಪೌರಕಾರ್ಮಿಕರಿಗೆ ಮಡಲಕ್ಕಿ ತುಂಬಲಾಯಿತು. 10 ಸಾವಿರ ಗಾಯತ್ರಿ ಮಂತ್ರ ಜಪ ಕಾರ್ಯ ನೆರೆವೇರಿತು. ಅಖಂಡ ಭಜನೆ, ದುರ್ಗಾ ದೀಪ ನಮಸ್ಕಾರ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ನಾಗರಿಕರು ಭಾಗವಹಿಸಿದ್ದರು.
ಗಜಗೌರಿ ಮೂರ್ತಿ ಇಟ್ಟು ಭವ್ಯ ಮೆರವಣಿಗೆ:ತುಮಕೂರು ಜಿಲ್ಲೆ ತಿಪಟೂರು ತಾಲೂಕು ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಸೇರಿದ ಲಕ್ಷ್ಮಿ ಎಂಬ ಆನೆಯ ಮೇಲೆ ಗಜಗೌರಿಯ ಭವ್ಯ ಮೂರ್ತಿಯನ್ನು ಇರಿಸಲಾಗಿತ್ತು. ಅಗ್ರಹಾರ ಮುಖ್ಯ ರಸ್ತೆ, ಎಂ.ಜಿ.ರಸ್ತೆ, ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಇದರೊಟ್ಟಿಗೆ ಅಲಂಕೃತ ಬೆಳ್ಳಿ ರಥಗಳಲ್ಲಿ ಗಜಗೌರಿ ಮೂರ್ತಿಗಳ ಮೆರವಣಿಗೆಯೂ ನಡೆಯಿತು.
ವ್ರತಾಚರಣೆಗಾಗಿ ಮಾಗಡಿಯಲ್ಲಿ ಮಣ್ಣಿನಿಂದ ಸಿದ್ದಗೊಂಡು ಸ್ಥಾಪಿಸಲಾಗಿದ್ದ ಒಂಬತ್ತು ಗೌರಿಗಳಾದ ಗಜಗೌರಿಯ, ಸ್ವರ್ಣಗೌರಿ, ಸೌಭಾಗ್ಯ ಗೌರಿ, ಸೋಮಾವತಿ ಗೌರಿ, ಹಸ್ತ ಗೌರಿ, ಸಂಪದ ಗೌರಿ, ಸ್ಕಂದಮಾತಾ ಗೌರಿ, ಕನಕ ಗೌರಿ ವಿಜಯ, ಬೃಹದಾ ಗೌರಿ ಮೂರ್ತಿಗಳನ್ನು ನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಗಜಗೌರಿ ವ್ರತಾಚರಣೆಗೆ ಸಂಸದ ಡಾ.ಸಿ.ಎನ್.ಮಂಜುನಾಥ್, ಬಿಜೆಪಿ ರಾಜ್ಯ ವಕ್ತಾರ ಮೋಹನ್ ವಿಶ್ವ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ,ವಿವಿಧ ಮಠಗಳ ಮಠಾಧೀಶರು ಸೇರಿದಂತೆ ಪ್ರಮುಖರು ಭೇಟಿ ನೀಡಿ ಪ್ರಾರ್ಥಿಸಿದರು.
ಮನಸ್ಸು ಶುದ್ದಿಗೆ ಧಾರ್ಮಿಕ ಕಾರ್ಯಗಳು ಸಹಕಾರಿ
-ಗೋವಿಂದಾನಂದ ಸ್ವಾಮೀಜಿ,
ಆನೆಯ ಮೇಲೆ ಇಟ್ಟಿದ್ದ ಗಜಗೌರಿಯ ಭವ್ಯವಾದ ಮೂರ್ತಿಗೆ ಶಾಸಕ ಇಕ್ಬಾಲ್ ಹುಸೇನ್ ಪುಷ್ಪಾರ್ಚನೆ ಮಾಡುತ್ತಿರುವುದು.