ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಸೌಹಾರ್ದತೆಯ ಪ್ರತೀಕ ಎನಿಸಿರುವ ಪಟ್ಟಣದ ವಸತಿ ರಹಿತ ಬಡವರಿಗೆ ಇದೊಂದು ಸಿಹಿ ಸುದ್ಧಿ. ಸರ್ವರಿಗೂ ಸೂರು ಕಲ್ಪಿಸುವ ಸರ್ಕಾರದ ಆಶಯ ಅನುಷ್ಠಾನಕ್ಕೆ ಪೂರಕವಾಗಿ ಹುಕ್ಕೇರಿ ಪುರಸಭೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿವೆ.
ಪಟ್ಟಣ ವ್ಯಾಪ್ತಿಯಲ್ಲಿ ಸ್ಲಂ ಪ್ರದೇಶವೆಂದು ಘೋಷಿಸಿ 2 ಮತ್ತು 5ನೇ ವಾರ್ಡ್‌ಗಳಿಗೆ ಸೀಮಿತಗೊಳಿಸಿರುವ ಪ್ರಧಾನಮಂತ್ರಿ ಆವಾಸ್ ಯೋಜನೆ-ಪಿಎಂಎವೈ (ನಗರ) ಅನ್ನು ಇದೀಗ ಎಲ್ಲ 23 ವಾರ್ಡ್‌ಗಳಿಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಸ್ವಂತ ಸೂರು ಹೊಂದಬೇಕೆಂದು ಹಲವು ವರ್ಷಗಳಿಂದ ಕಾಯ್ದು ಕುಳಿತಿದ್ದ ಬಡವರ ಕನಸು ನನಸಾಗುವ ಕಾಲ ಕೂಡಿ ಬಂದಂತಾಗಿದೆ.2022-23ರಲ್ಲಿಯೇ ಹುಕ್ಕೇರಿ ಪುರಸಭೆಯ ಎರಡು ವಾರ್ಡ್‌ಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಈ ಎರಡು ವಾರ್ಡ್‌ಗಳಲ್ಲಿ ಅರ್ಹ ಮತ್ತು ಬೇಡಿಕೆಗೆ ಅನುಗುಣವಾಗಿ ಫಲಾನುಭವಿಗಳು ಲಭ್ಯವಿಲ್ಲದ ಕಾರಣ ಈ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿತ್ತು. ಇದೀಗ ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಯೋಜನೆ ವಿಸ್ತರಿಸುವ ಮೂಲಕ ಬಡಜನತೆಗೆ ಆಶ್ರಯ ಕಲ್ಪಿಸುವ ಮಹತ್ವದ ಕೆಲಸಕ್ಕೆ ಕೈ ಹಾಕಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಪುರಸಭೆ ಸಹಯೋಗದಲ್ಲಿ ಅನುಷ್ಠಾನವಾಗಲಿರುವ ಈ ಯೋಜನೆಯಡಿ ಒಟ್ಟು 665 ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಈ ಪೈಕಿ ಪರಿಶಿಷ್ಟ ಜಾತಿ(ಎಸ್ಸಿ)-200, ಪರಿಶಿಷ್ಟ ಪಂಗಡ (ಎಸ್ಟಿ)-36, ಧಾರ್ಮಿಕ ಅಲ್ಪಸಂಖ್ಯಾತರು-110, ಹಿಂದುಳಿದ ವರ್ಗ-64, ಸಾಮಾನ್ಯ ವರ್ಗ-255 ಮನೆಗಳನ್ನು ಹಂಚಿಕೆ ಮಾಡಲಾಗಿದೆ.ಈಗಾಗಲೇ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಈ ಮನೆಗಳ ನಿರ್ಮಾಣ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಸಿಂಧನೂರಿನ ಎಸ್.ಎಂ.ಖಾದ್ರಿ ಎಂಟರ್‌ಪ್ರೈಸಿಸ್‌ಗೆ ಗುತ್ತಿಗೆ ನೀಡಿ ತ್ವರಿತಗತಿ ಮತ್ತು ಕಾಲಮಿತಿಯಲ್ಲಿ ನಿಗದಿತ ಗುರಿಯೊಂದಿಗೆ ಗುಣಮಟ್ಟದ ಮನೆ ನಿರ್ಮಿಸುವಂತೆ ಸೂಚಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯ ಈ ಯೋಜನೆಯ ಪ್ರತಿ ಮನೆ ನಿರ್ಮಾಣದ ಘಟಕ ವೆಚ್ಚವನ್ನು ಎಲ್ಲ ವರ್ಗದವರಿಗೆ ₹7,38,736 ನಿಗದಿಪಡಿಸಿದೆ. ಇದರಲ್ಲಿ ಫಲಾನುಭವಿ ₹1 ಲಕ್ಷ ವಂತಿಗೆ ಪಾವತಿಸಬೇಕಿದ್ದು, ಇನ್ನುಳಿದದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಮತ್ತು ಬ್ಯಾಂಕ್ ಲೋನ್ ಒಳಗೊಂಡಿದೆ.ಈ ವಸತಿ ಯೋಜನೆಯನ್ನು ಹುಕ್ಕೇರಿಯ ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸುವಲ್ಲಿ ಕ್ಷೇತ್ರದ ಶಾಸಕ ನಿಖಿಲ ಕತ್ತಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಪುರಸಭೆಗೆ ನಿಗದಿಪಡಿಸಿದ ಮನೆಗಳು ಸರ್ಕಾರಕ್ಕೆ ಮರಳಿ ಹೋಗದಂತೆ ಸಂಬಂಧಿಸಿದ ಸಚಿವರು, ಹಿರಿಯ ಅಧಿಕಾರಿಗಳಿಗೆ ವಸ್ತುಸ್ಥಿತಿ ವಿವರಿಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಪಟ್ಟಣದ ವಸತಿ ರಹಿತ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸಬೇಕೆಂಬ ಸಂಕಲ್ಪ ತೊಟ್ಟಿದ್ದಾರೆ.
ಮನೆಗಳ ನಿರ್ಮಾಣ ವೇಳೆ ಫಲಾನುಭವಿಗಳಿಗೆ ಹಲವು ಷರತ್ತು ವಿಧಿಸಿದ್ದು ಎಸ್ಸಿ,ಎಸ್ಟಿ ಮತ್ತು ಕಾರ್ಮಿಕ ಇಲಾಖೆಯಿಂದ ಮಾನ್ಯತೆ ಪಡೆದ ಫಲಾನುಭವಿಗಳಿಗೆ ಕೆಲ ರಿಯಾಯಿತಿ ನೀಡಲಾಗಿದೆ. ಬಹುವರ್ಷಗಳ ಬಳಿಕ ಬಾಡಿಗೆ ಮನೆ, ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಸ್ವಂತ ಮನೆ ಹೊಂದುವ ಸುಯೋಗ ಒದಗಿಬಂದಿದೆ. ಇದು ಸಹಜವಾಗಿ ಪಟ್ಟಣದ ಬಡ ಕುಟುಂಬಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.ಹುಕ್ಕೇರಿ ಪಟ್ಟಣದ ವಸತಿ ರಹಿತ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಈ ಪಿಎಂಎವೈ ಮನೆಗಳ ನಿರ್ಮಾಣ ಯೋಜನೆಯನ್ನು ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸಲಾಗಿದೆ. ಕ್ಷೇತ್ರದ ಸರ್ವರಿಗೂ ಸೂರು ಕಲ್ಪಿಸಲು ಸಂಕಲ್ಪ ಹೊಂದಿದ್ದೇನೆ.- ನಿಖಿಲ ಕತ್ತಿ, ಶಾಸಕರು ಹುಕ್ಕೇರಿಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಪುರಸಭೆ ಸಹಯೋಗದ ಈ ಯೋಜನೆ ಬಡವರಿಗೆ ಸುವರ್ಣಾಕಾಶ ತಂದಿದೆ. ಸಮರ್ಪಕ ಅನುಷ್ಠಾನಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಭರದಿಂದ ಸಾಗಿದೆ.
- ಇಮ್ರಾನ್ ಮೋಮಿನ್, ಅಧ್ಯಕ್ಷರು ಪುರಸಭೆ ಹುಕ್ಕೇರಿ