ಎಸ್.ಎಂ.ಸಯ್ಯದ್ ಗಜೇಂದ್ರಗಡ
ನಮ್ಮ ಸಂಸ್ಕೃತಿ, ಸಂಪ್ರದಾಯಗಳಲ್ಲಿ ಬರುವ ಹಲವಾರು ಹಬ್ಬಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ, ಅವರಿಗೇ ಪ್ರಾಧಾನ್ಯತೆ ಹೆಚ್ಚು. ಆದರೆ, ಗಂಡು ಮಕ್ಕಳಿಗೆ ಇರುವ ಏಕೈಕ ಹಬ್ಬ, ಅಥವಾ ಗಂಡು ಮಕ್ಕಳೇ ಹೆಚ್ಚು ಉತ್ಸಾಹ ಅಬ್ಬರದಿಂದ ಪಾಲ್ಗೊಳ್ಳುವ ಹಬ್ಬ ಎಂದರೆ ಅದು ಹೋಳಿಹಬ್ಬ. ಹೀಗಾಗಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹೋಳಿ ಹಬ್ಬದ ಅಬ್ಬರ ಮುಗಿಲು ಮುಟ್ಟಿದೆ. ಇತ್ತೀಚಿಗೆ ಮಹಿಳೆಯರೂ ಸಹ ಸರಿಸಮನಾಗಿ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರಾದರೂ ಸಹ ಇದು ಪುರುಷರ ಹಬ್ಬವೆಂದೇ ಖ್ಯಾತಿ ಪಡೆದಿದೆ.ಕಾಮಣ್ಣನ ಮಕ್ಕಳು ಏನನ್ನು ಕದ್ದರು, ಕುಳ್ಳು, ಕಟ್ಟಿಗೆ ಕದ್ದರು ಎಂದು ಹೇಳುತ್ತಾ ಗಲ್ಲಿಗಲ್ಲಿಗಳಲ್ಲಿ ರಾತ್ರಿಯಿಡಿ ಕಳುವು ಮಾಡುವುದು ಹಬ್ಬದ ವಿಶೇಷ. ಹೋಳಿ ಹಬ್ಬದ ವೈಶಿಷ್ಟ್ಯತೆ ಎಂದರೆ ಶಿವನ ತಪ್ಪಸ್ಸನ್ನು ಮನ್ಮಥ ಭಂಗಗೊಳಿಸಿದ ಎನ್ನುವ ಕಾರಣಕ್ಕೆ ಶಿವನ ಸಿಟ್ಟಿಗೆ ಮನ್ಮಥ ಸುಟ್ಟು ಭಸ್ಮವಾದ. ಪರ್ವತ ರಾಜನ ಮಗಳಾದ ಪಾರ್ವತಿಯನ್ನು ವರಿಸಿ ಅದೇ ಮಾರ್ಗವಾಗಿ ಶಿವನು ಬರುವಾಗ ರತಿಯು ಮನ್ಮಥನ ಚಿತಾ ಭಸ್ಮದ ಮುಂದೆ ಅಳುತ್ತಾ ಕುಳಿತಿದ್ದನ್ನು ಕಂಡ ಶಿವನು ರತಿಗೆ ನಿನ್ನ ಪತಿಯ ದೇಹ ದಹಿಸಿದೆಯೇ ಹೊರತು, ಆತ್ಮಕ್ಕಲ್ಲ. ಹೀಗಾಗಿ ಪ್ರತಿವರ್ಷ ಹೋಳಿ ಹಬ್ಬದ ದಿನ ನಿನ್ನ ಪತಿ ಸಾಕಾರ ರೂಪ ಧರಿಸುತ್ತಾನೆ. ನೀನು ಸುಮಂಗಲೆ ಆಗಿರುವೆ ಎಂದು ಹರಸುತ್ತಾನೆ ಎನ್ನುವ ಪ್ರತೀತಿ ಹಿನ್ನೆಲೆಯಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ.
ಹೋಳಿ ಹಬ್ಬದಲ್ಲಿ ಚಿಕ್ಕಮಕ್ಕಳು, ಯುವಕರು ತಂಡ ತಂಡವಾಗಿ ಹಲಗೆ ಬಾರಿಸುತ್ತಾ, ಕೃತಕ ಶವ ಮಾಡಿ ಅವರ ಹೆಸರಿನಲ್ಲಿ ಓಣಿಗಳಲ್ಲಿ ಅಳುತ್ತಾ ಬಾಯಿ, ಬಾಯಿ ಬಡೆದುಕೊಂಡು, ಕಾಮಣ್ಣನನ್ನು ಸುಡಲು ಕಟ್ಟಿಗೆ, ಕುಳ್ಳು ಸಂಗ್ರಹಿಸುವರು. ಹುಣ್ಣಿಮೆ ದಿನದ ಸಂಜೆ ಪಟ್ಟಣದ ಅನೇಕ ಬಡಾವಣೆಗಳಲ್ಲಿ ರತಿ, ಕಾಮಣ್ಣರ ಮೂರ್ತಿ ಪ್ರತಿಷ್ಠಾಪಿಸಿದ ಮರುದಿನ ಜೋಡೆತ್ತಿನ ಬಂಡಿಯಲ್ಲಿಟ್ಟು ಮೆರವಣಿಗೆ ನಡೆಸುತ್ತಾರೆ. ಮತ್ತೊಂದು ಬಂಡೆಯಲ್ಲಿ ಕೃತಕ ಶವವನ್ನಿಟ್ಟು ಹತ್ತು ಬೀಗರು, ಕುಲದವರು ಬಂದರು ಎಂದು ಜೋರಾಗಿ ಅತ್ತು ಕರೆದು, ಬಾಯಿ ಬಡೆದುಕೊಳ್ಳುತ್ತಾ, ಪ್ರಮುಖ ಬೀದಿಗಳಲ್ಲಿ ಜನರನ್ನು ಮನರಂಜಿಸಿ ರಾತ್ರಿ ಕಾಮದಹನ ಮಾಡುವುದು ವಾಡಿಕೆ. ಮರುದಿನ ಬೆಳಗ್ಗೆ ರಂಗು ರಂಗಿನ ಬಣ್ಣದ ಓಕುಳಿ ಆಡಿ ಸಂಭ್ರಮಿಸುವುದು ಹೋಳಿ ಹಬ್ಬದ ವಿಶೇಷ.ಇಲ್ಲಿ ಹೋಳಿ ಹಬ್ಬವಿಲ್ಲ;
ತಾಲೂಕಿನ ಕೆಲ ಗ್ರಾಮಗಳನ್ನು ರುದ್ರಭೂಮಿ ಎಂದು ಪರಿಗಣಿಸಲ್ಪಡುವ ಈ ಭಾಗದ ಕಾಲಕಾಲೇಶ್ವರ, ಬೈರಾಪೂರ, ರಾಜೂರ, ಜಿಗೇರಿ, ನಾಗೇಂದ್ರಗಡ, ಲಕ್ಕಲಕಟ್ಟಿ, ಅಮರಗಟ್ಟಿ ಗ್ರಾಮಗಳಲ್ಲಿ ಹೋಳಿ ಹಬ್ಬ ಆಚರಿಸುತ್ತಿಲ್ಲ. ಇಲ್ಲಿ ಹೋಳಿ ಹಬ್ಬ ಆಚರಿಸಿದರೆ ಗ್ರಾಮಗಳ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂಬ ಹಿರಿಯರ ನಂಬಿಕೆ ಹಿನ್ನೆಲೆಯಲ್ಲಿ ಇಂದಿಗೂ ಸಹ ಹೋಳಿ ಹಬ್ಬದಿಂದ ದೂರ ಉಳಿದಿದ್ದಾರೆ. ಹೀಗಾಗಿ ಅಲ್ಲಿನ ಗ್ರಾಮಸ್ಥರಿಗೆ ಹೋಳಿ ಹುಣ್ಣಿಮೆಯ ಹೋಳಿಗೆ ತಿನ್ನುವ ಭಾಗ್ಯ ಇಲ್ಲ. ಈ ಗ್ರಾಮಗಳಲ್ಲಿ ಹಲಗೆಯ ಸದ್ದು ಇಲ್ಲ, ಬಣ್ಣದಾಟದ ಸಂಭ್ರಮವೂ ಇಲ್ಲ.