ಹೋಬೋ ಸೆಕ್ಷುಯಾಲಿಟಿ : ಒಂದು ಹಗುರ ಸಂಬಂಧದ ಕಥೆ!

| N/A | Published : Aug 31 2025, 12:01 PM IST

lovers holding their hands
ಹೋಬೋ ಸೆಕ್ಷುಯಾಲಿಟಿ : ಒಂದು ಹಗುರ ಸಂಬಂಧದ ಕಥೆ!
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಹಗುರ ಸಂಬಂಧದ ಕಥೆ! ಪ್ರೀತಿ ಇಲ್ಲದ ಮೇಲೆ ‘ಅರ್ಥ’ ಹುಟ್ಟೀತು ಹೇಗೆ? ಲೈಪು ಇಷ್ಟೇನೆ ಅಂತ ಯೋಗರಾಜ ಭಟ್ಟರು ಹೇಳಿರುವುದರ ಇನ್ನೊಂದು ರೂಪ ಇದು. ಜೆನ್‌ ಜೀಗಳು ಕ್ಷಣದ ಅಗತ್ಯಕ್ಕೆ ತಕ್ಕಂಥ ಸಾಂಗತ್ಯಕ್ಕೆ ಇಟ್ಟಿರುವ ಹೆಸರು ಹೋಬೋ ಸೆಕ್ಷುಯಾಲಿಟಿ.

 ಒಂದು ಹಗುರ ಸಂಬಂಧದ ಕಥೆ! ಪ್ರೀತಿ ಇಲ್ಲದ ಮೇಲೆ ‘ಅರ್ಥ’ ಹುಟ್ಟೀತು ಹೇಗೆ? ಲೈಪು ಇಷ್ಟೇನೆ ಅಂತ ಯೋಗರಾಜ ಭಟ್ಟರು ಹೇಳಿರುವುದರ ಇನ್ನೊಂದು ರೂಪ ಇದು. ಜೆನ್‌ ಜೀಗಳು ಕ್ಷಣದ ಅಗತ್ಯಕ್ಕೆ ತಕ್ಕಂಥ ಸಾಂಗತ್ಯಕ್ಕೆ ಇಟ್ಟಿರುವ ಹೆಸರು ಹೋಬೋ ಸೆಕ್ಷುಯಾಲಿಟಿ.  

- ವಿಹಂಗಮ

ದೊಡ್ಡ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಹೊಂದಿಸಿಕೊಳ್ಳುವ ಶಿವಾನಿಗೆ ಸಣ್ಣದೊಂದು ಕೆಲಸದಲ್ಲಿರುವ ಯುಗಾಂತ್‌ ಯಾವಾಗ ಹೇಗೆ ಜೊತೆಯಾದನೆಂಬುದೇ ನೆನಪಿಲ್ಲ. ಒಮ್ಮೆ ಅವಳ ಮನೆಗೆ ಬಂದ ನಂತರ ಅವನು ಆಚೆ ಹೋಗಲೇ ಇಲ್ಲ ಅನ್ನಬಹುದು. ಕನಸಿನಂತೆಯೇ ಅವನ ಮೂಲವೂ ಅಸ್ಪಷ್ಟ. ತನ್ನ ಊರು, ವಿಳಾಸ, ತಂದೆ ತಾಯಿ ಇತ್ಯಾದಿ ವಿವರಗಳನ್ನು ಕೇಳಿದರೆ ತಪ್ಪಿಸಿಕೊಳ್ಳುತ್ತಾನೆ. ಮನೆಯ ಬಾಡಿಗೆಯನ್ನೂ ಲೈಟ್‌ ಬಿಲ್ಲನ್ನೂ ಶಿವಾನಿಯೇ ಭರಿಸುತ್ತಾಳೆ. ಅವನು ನಾನ್-ಪೇಯಿಂಗ್‌ ಗೆಸ್ಟ್. ಯಾವತ್ತೋ ಒಮ್ಮೆ ಕೇಳುತ್ತಾಳೆ- ‘ಈ ತಿಂಗಳು ಮನೆ ಬಾಡಿಗೆ ಕಟ್ತೀಯಾ ಹನಿ?ʼ ಅವನು ಸೋತ ಮುಖ ಮಾಡಿ ಖಾಲಿ ಕೈ ತೋರಿಸ್ತಾನೆ. ಪರವಾಗಿಲ್ಲ, ಅವಳು ಇಬ್ಬರಿಗೂ ಸಾಕಾಗುವಷ್ಟು ಗಳಿಸುತ್ತಾಳಲ್ಲ? ಅವನು ಹಲವೊಮ್ಮೆ ತನ್ನನ್ನು ರಮಿಸುವುದು, ವಾರಕ್ಕೊಮ್ಮೆ ಔಟಿಂಗ್‌ಗೆ ಕರೆದೊಯ್ಯುವುದು ಅವಳಿಗಿಷ್ಟ. ಆದರೆ ಸಂಜೆಯ ವಾಕಿಂಗ್‌ಗೆ, ರಾತ್ರಿಯ ಮಧುರ ಕ್ಷಣಗಳಿಗೆ, ತನ್ನ ಎಡೆಬಿಡದ ಮಾತುಗಳಿಗೆ ಅವನು ಸದಾ ಕಿವಿಗೊಡಬೇಕೆಂಬ ಅವಳ ಆಸೆಗೆ ಅವನು ಜೊತೆಯಲ್ಲ.

ಲೈಲಾ ಯಾವುದೋ ಸಣ್ಣ ಕೆಲಸದಲ್ಲಿದ್ದಾಳೆ. ಇತ್ತೀಚೆಗೆ ಕೆಫೆಯೊಂದರಲ್ಲಿ ಹೀಗೇ ವಿಕ್ರಾಂತ್‌ ಪರಿಚಯವಾಗಿದೆ. ಆರಂಕಿಯ ಸಂಬಳ ಗಳಿಸುವ ಅವನು ನಿತ್ಯ ಆ ಕೆಫೆಯಲ್ಲಿ ಒಂದೆರಡು ಗಂಟೆ ಕುಳಿತೆದ್ದು ಹೋಗುವವನು. ಲಕ್ಷುರಿ ಅಪಾರ್ಟ್‌ಮೆಂಟ್‌ ಇದೆ, ಕಾರಿದೆ, ಬೇಕಾದಾಗ ಸಿಗುವ ರಜೆಯಿದೆ, ಬಂಧುಗಳ ಕಾಟವಿಲ್ಲ. ಅವಳಿಗೆ ಇರೋಕೆ ಮನೆಯಿಲ್ಲ ಎನ್ನುವಾಗ ‘ನಮ್ಮ ಮನೆಯಲ್ಲೇ ಬಂದು ಇರಬಹುದಲ್ಲʼ ಎಂದು ಆಹ್ವಾನಿಸಿದವನು ಅವನು.

ಹೀಗೆ ಆತನ ಮನೆ ಸೇರಿಕೊಂಡ ಅವಳೂ ಅವನೂ ಹಂ ತುಂ ಏಕ್‌ ಕಮರೇ ಮೆ ಬಂದ್‌ ಹೋ ಎನ್ನುವ ಸಂಗಾತಿಗಳೇನಲ್ಲ. ಇಬ್ಬರಿಗೂ ದೇಹ ಹಂಚಿಕೊಳ್ಳಲು ತಕರಾರಿಲ್ಲ. ಆದರೆ ಭಾವನಾತ್ಮಕವಾಗಿ ಒಬ್ಬರನ್ನೊಬ್ಬರು ಅಪ್ಪಿರುವುದು ಕಡಿಮೆ. ವಿಲಾಸಿ ಅಪಾರ್ಟ್‌ಮೆಂಟ್‌ನ ರೆಂಟ್‌ ಮತ್ತಿತರ ಬಿಲ್ಲುಗಳ ಹೊಣೆಯೆಲ್ಲ ಅವನದೇ. ಕೆಲವೊಮ್ಮೆ ಅವಳು ಅಡುಗೆ ಮಾಡಬಹುದು, ಉಳಿದಂತೆ ಅವಳ ಪಾಡಿಗೆ ಅವಳು, ಇವನ ಪಾಡಿಗೆ ಇವನು.

* ‘ಹೋಮೋಸೆಕ್ಷುಯಾಲಿಟಿʼ ಎಂಬುದನ್ನು ಕೇಳಿದ್ದೀರಿ. ‘ಹೋಬೋಸೆಕ್ಷುಯಾಲಿಟಿʼ ಎಂಬ ಪದ ಕೇಳಿದ್ದೀರಾ? ಭಾರತದ ನಗರಗಳಲ್ಲೂ ಹೆಚ್ಚುತ್ತಿರುವ ಈ ಟ್ರೆಂಡಿಗೆ ಮೇಲಿನೆರಡು ನಿದರ್ಶನ. ಇಬ್ಬರೂ ಒಟ್ಟಿಗಿರುತ್ತಾರೆ. ಲಿವ್‌-ಇನ್‌ ಎಂದರೂ ತಪ್ಪಲ್ಲ. ಆದರೆ ಲಿವ್‌ ಇನ್‌ನಂತೆ ಇಲ್ಲಿ ಭಾವನಾತ್ಮಕ ಸಾಂಗತ್ಯ ಅತ್ಯಲ್ಪ. ಅವನಿಗೋ ಅಥವಾ ಅವಳಿಗೋ ಕಡಿಮೆ ಸಂಬಳವಿದ್ದಾಗ, ಮನೆ ಬಾಡಿಗೆ ಕಟ್ಟಲು ಅಸಾಧ್ಯವಾದಾಗ ಕಂಡುಕೊಳ್ಳುವ ದಾರಿಯಿದು. ಇಲ್ಲಿ ಹೆಚ್ಚು ಆದಾಯವಿದ್ದವರು ಮನೆ ಬಾಡಿಗೆ ಕಟ್ಟುತ್ತಾರೆ, ಉಳಿದವರು ಅವರಿಗೆ ಜೊತೆಯಾಗಿ ಇರುತ್ತಾರೆ. ಸಣ್ಣಪುಟ್ಟ ಅಗತ್ಯಗಳನ್ನು ಪೂರೈಸಬಹುದು. ಇದನ್ನೇ ಲಿವ್‌ ಇನ್‌ ಎಂದು ಕರೆದುಕೊಳ್ಳುತ್ತಾರಾದರೂ ಜೆನ್‌ ಝೀ ಇದನ್ನು ‘ಹೋಬೋಸೆಕ್ಷುಯಾಲಿಟಿʼ ಎಂಬ ಹೊಸ ಸ್ಲ್ಯಾಂಗ್‌ನಿಂದ ಕರೆಯುತ್ತದೆ. ಇದು ಹೆಟೆರೋ ಸೆಕ್ಷುಯಲ್‌ಗಳಲ್ಲದೆ ಹೋಮೋಸೆಕ್ಷುಯಲ್‌ಗಳಲ್ಲೂ ಕಾಣಿಸಬಹುದು. ‘ಹೋಬೋʼ ಎಂಬ ಪದದ ಬಳಕೆ ಆಗುವುದು ‘ಹೋಮ್‌ಲೆಸ್‌ʼ ಎಂಬುದಕ್ಕೆ ಪರ್ಯಾಯವಾಗಿ. 

ಜೋಡಿಯಲ್ಲಿ ಇಬ್ಬರಲ್ಲೊಬ್ಬರು ಮತ್ತೊಬ್ಬರನ್ನು ಉಚಿತ ವಸತಿಗೋ, ಖರ್ಚುವೆಚ್ಚ ಹಂಚಿಕೊಳ್ಳುವುದಕ್ಕೋ, ಇನ್ನಷ್ಟು ಒಳ್ಳೆಯ ಜೀವನಶೈಲಿಗಾಗಿಯೋ ಅವಲಂಬಿಸಬಹುದು. ಎರಡು ಕೆಲಸಗಳ ನಡುವೆ, ಒಂದು ಬ್ರೇಕಪ್‌ನ ನಂತರ ಹೊಸ ಸಂಗಾತಿಯ ಜೊತೆಗೆ ನಡೆಯಬಹುದು. ಸಣ್ಣ ಊರಿನಿಂದ ಬಂದ ವ್ಯಕ್ತಿ ಮೆಟ್ರೋ ಸಿಟಿಯ ಉನ್ನತಿಯ ಮೆಟ್ಟಿಲುಗಳನ್ನು ಏರಲು ಹೆಚ್ಚು ಸಂಪನ್ನ ಸಂಗಾತಿಯನ್ನು ಆಶ್ರಯಿಸಬಹುದು. ಯಾಕೋ ಈ ಪದ ಸ್ವಲ್ಪ ಕಠಿಣ ಅನಿಸ್ತಿದೆ ಅಲ್ವ. ಹಾಗಂತ ಈ ಸಂಬಂಧ ಪೂರ್ತಿಯಾಗಿ ಸಮಯಸಾಧಕತನದ್ದೂ ಅಂದುಕೋಬೇಕಿಲ್ಲ ಬದುಕಿನ ಸ್ಥಿರತೆಗಾಗಿ ಒಂದು ಮೌನ ಒಪ್ಪಂದ, ಒಂದು ಪ್ರಾಯೋಗಿಕ ವ್ಯವಸ್ಥೆ, ಒಂದು ಸಕಾರಣ ಅವರ ನಡುವೆ ಇದೆ ಎನ್ನಬೇಕು. ಹೋಬೋ ಭಾರತಕ್ಕೆ ಹೊಸದಲ್ಲ, ಆದರೆ ಏರುತ್ತಿರುವ ನಗರಗಳ ಜೀವನವೆಚ್ಚ ಅದನ್ನು ಹೆಚ್ಚು ಹೆಚ್ಚಾಗಿಸಿದೆ. ಮುಂಬಯಿ, ದಿಲ್ಲಿ, ಬೆಂಗಳೂರಿನಂಥ ನಗರಗಳಲ್ಲಿ ಮನೆ ಬಾಡಿಗೆಗಳು 20-30 ಪ್ರತಿಶತ ಏರಿವೆ. ಮೂವತ್ತು ಸಾವಿರದಿಂದ ಐವತ್ತು ಸಾವಿರದವರೆಗಿನ ಸಂಬಳ ಪಡೆಯುವವನು ವೇತನದ ಅರ್ಧ ಭಾಗ ರೆಂಟ್‌ಗೇ ಕಕ್ಕಬೇಕು. ಅದಕ್ಕಾಗಿ ಒಬ್ಬ ಪಾರ್ಟ್‌ನರ್‌ ಕಂಡುಕೊಳ್ಳುವುದು ಆರ್ಥಿಕವಾಗಿ ಜಾಣ ನಡೆ. ಇಲ್ಲಿ ರೊಮ್ಯಾನ್ಸ್‌ನ ಭಾಗೀದಾರಿಕೆ ಕಡಿಮೆ. 

ಲಕ್ಷಾಂತರ ಮಂದಿ ಪ್ರತಿವರ್ಷ ಕಲಿಯೋಕೆ, ಸಣ್ಣ ಕೆಲಸಕ್ಕೆ, ಕುಟುಂಬದ ಸಪೋರ್ಟ್‌ ಇಲ್ಲದೆಯೂ ಊರಿನಿಂದ ಇಲ್ಲಿಗೆ ಬರುತ್ತಾರೆ. ಪಿಜಿಗಳು, ಕೋ-ಲಿವಿಂಗ್‌ ಸ್ಪೇಸ್‌ಗಳು ದುಬಾರಿ ಹಾಗೂ ಅಲ್ಲಿನ ನಿಯಮಗಳು ಕಠಿಣ. ಅಂಥವರಿಗೆ ಇದು ಸುಲಭ. ಇನ್ನು ಕೋವಿಡ್‌ ನಂತರ ಎಷ್ಟೋ ಮಂದಿಯ ಜಾಬ್‌ಗಳು ಅಸ್ಥಿರವಾಗಿಬಿಟ್ಟಿವೆ ಅಥವಾ ಇಲ್ಲವಾಗಿವೆ. ಹಾಗಂತ ಯಾರ್ಯಾರ ಜೊತೆಗೋ ಇದ್ದುಬಿಡಲಾಗುತ್ತದಾ? ಇದು ಜೆನ್‌ ಎಕ್ಸ್‌ಗಳಿಗೆ ಕಾಡುವ ಪ್ರಶ್ನೆ. ಆದರೆ ಜೆನ್‌ ಝೀ, ಮಿಲೇನಿಯಲ್‌ಗಳಿಗೆ ಇದೊಂದು ಸಮಸ್ಯೆಯೇ ಅಲ್ಲ ನಗರದಲ್ಲಿ ಮದುವೆಯ ಮೊದಲಿನ ಜೊತೆವಾಸ ಶಾಕಿಂಗ್‌ ಸಂಗತಿ ಅಲ್ವೇ ಅಲ್ಲ. ಹೀಗಾಗಿ ರೊಮ್ಯಾನ್ಸ್‌ ಹೆಸರಿನಲ್ಲಿ ಒಟ್ಟಿಗೆ ಇರೋದು ಸುಲಭ. ತಮ್ಮಿಬ್ಬರ ನಡುವೆ ರೊಮ್ಯಾನ್ಸ್‌ ಇಲ್ಲ, ಇದು ಹೊಂದಾಣಿಕೆ ಅಷ್ಟೇ ಎಂಬುದನ್ನು ಇಬ್ಬರೂ ಜಾಣತನದಿಂದ ಮರೆಮಾಚಿರುತ್ತಾರೆ. ಇಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಈ ಸಂಬಂಧದಿಂದ ಲಾಭ ಪಡೆಯುತ್ತಾರೆ. ಮನೆ ಒದಗಿಸಿದವನೂ ಇದರಿಂದ ಸಾಂಗತ್ಯಸುಖ, ಮನೆಕೆಲಸದ ಹಂಚಿಕೆ, ಜೀವನವೆಚ್ಚದಲ್ಲಿ ಉಳಿತಾಯ ಮೊದಲಾದವನ್ನೆಲ್ಲ ಪಡೆಯಬಲ್ಲ. ಹಾಗಂತ ಇದನ್ನು ಅವಕಾಶವಾದಿ ಮಾತ್ರ ಅನ್ನುವುದೂ ತರವಲ್ಲ. ಇದಕ್ಕೆ ಸಂಕೀರ್ಣ ಮುಖಗಳಿವೆ. ಹಲವೊಮ್ಮೆ ಪವರ್‌ಫುಲ್‌ ವ್ಯಕ್ತಿ ಯಾರು ಎಂಬ ಗೊಂದಲ ಉಂಟಾಗಬಹುದು. 

ಮನೆಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಹೀಗೆ ಜನ ಒಟ್ಟಿಗೇ ಬದುಕುವ ಸ್ಥಳಗಳಲ್ಲಿ ಒಂದು ಬಗೆಯ ಆಂತರಿಕ ರಾಜಕೀಯವೂ ಇರುತ್ತದಷ್ಟೆ. ಇಲ್ಲಿ ಯಾರು ಯಾರನ್ನು ನಿಯಂತ್ರಿಸುತ್ತಿದ್ದಾರೆ ಎಂಬದರ ಮೇಲೆ ಸಂಬಂಧದ ಮುಂದುವರಿಕೆ ಇರುತ್ತದೆ. ಕೆಲವೊಮ್ಮೆ ಮನೆ ಬಾಡಿಗೆ ಕೊಡಬಲ್ಲ ಶ್ರೀಮಂತರನ್ನು ಕೆಲಸವಿಲ್ಲದ ಪಡಪೋಶಿಗಳು ಎಮೋಷನಲ್‌ ಬ್ಲ್ಯಾಕ್‌ಮೇಲ್‌ನಿಂದ ನಿಯಂತ್ರಿಸಬಹುದು. ಇನ್ನು ಹಲವೊಮ್ಮೆ ಆದಾಯವಿಲ್ಲದ ವ್ಯಕ್ತಿಯನ್ನು ಸಂಬಂಧದ ಹೆಸರಿನಲ್ಲಿ ಇನ್ನೊಬ್ಬ ಊಳಿಗಕ್ಕೆ ಬಳಸಬಹುದು. ಅಂತೂ ಇಲ್ಲಿ ಸಂಬಂಧದ ದುರ್ಬಳಕೆಗೆ ಸಾಕಷ್ಟು ಅವಕಾಶವಿದೆ. ಒಬ್ಬ ಇನ್ನೊಬ್ಬನನ್ನು ಗೌರವಿಸುವವರೆಗೆ ಈ ಸಂಬಂಧ ನಾಜೂಕಾಗಿ ನಡೆಯಬಲ್ಲದು. ಈ ಮೂಲಕ ಒಂಟಿತನ ನಿವಾರಿಸಿಕೊಂಡು, ಸಂಬಂಧ ಸುಧಾರಿಸಿಕೊಂಡು, ಹೊಸ ಬದುಕಿನ ಕಡೆಗೆ ನಡೆಯುವವರಿದ್ದಾರೆ. 

ಇಬ್ಬರೂ ತಮ್ಮ ಅಗತ್ಯಗಳ ಬಗ್ಗೆ ಪ್ರಾಮಾಣಿಕರಾಗಿದ್ದರೆ ಇದು ಸಲೀಸು. ಒಬ್ಬರಲ್ಲಿ ತಾನು ಬಳಸಿಕೊಳ್ಳಲ್ಪಟ್ಟೆ, ಮೋಸ ಹೋದೆ ಎಂಬ ಭಾವನೆ ಬಂದರೆ, ಇನ್ನೊಬ್ಬರಲ್ಲಿ ಕೀಳರಿಮೆ, ಪಶ್ಚಾತ್ತಾಪ, ತಾನು ಇಲ್ಲಿ ಟ್ರ್ಯಾಪ್‌ ಆದೆ ಎಂಬ ಭಾವನೆ ಮೂಡಿದರೆ ಆಗ ಕಷ್ಟ. ನಗರಗಳು ಹೆಚು ಹೆಚು ದುಬಾರಿ ಆಗ್ತಾ ಹೋದ ಹಾಗೆ, ಇದೂ ಕೂಡ ಮೌನವಾಗಿ, ಯಾರೂ ಬಾಯಿ ಬಿಟ್ಟು ಹೇಳದೆಯೇ ಏರುತ್ತ ಹೋಗಲಿರುವ ಟ್ರೆಂಡು. ಗೇಟ್‌ವೇ ಆಫ್ ಹೀಲಿಂಗ್‌ನ ನಿರ್ದೇಶಕಿ ಮತ್ತು ಮನೋಚಿಕಿತ್ಸಕಿ ಡಾ. ಚಾಂದನಿ ತುಗ್ನೈಟ್ ಈ ಸಂಬಂಧದ ಬಗ್ಗೆ ಹೇಳುವುದು ಹೀಗೆ- ‘ಭಾವನಾತ್ಮಕವಾಗಿ, ಆರ್ಥಿಕವಾಗಿ ಅಥವಾ ಭೌತಿಕವಾಗಿಯೂ ತಮಗೆ ಕಡಿಮೆ ಪ್ರಾಮುಖ್ಯತೆ ನೀಡುವ ಸಂಗಾತಿಯ, ವಿಶೇಷವಾಗಿ ಪುರುಷನ ಜೊತೆಗೆ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳುವುದನ್ನು ಇತ್ತೀಚೆಗೆ ನಾವು ನೋಡುತ್ತಿದ್ದೇವೆ. ಅವರ ಜೀವನದಲ್ಲಿ ಅಸಮಾನ ಪಾಲುದಾರಿಕೆ ಇರುತ್ತದೆ. ಈ ಸಂಬಂಧ ಮೇಲ್ನೋಟಕ್ಕೆ ಪ್ರಣಯದಂತೆ ಕಾಣುತ್ತದೆ. ಒಂದು ಗುಪ್ತ ಶಕ್ತಿ ಅಸಮತೋಲನವಿರುತ್ತದೆ. ಅಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬರಿಗಿಂತ ಹೆಚ್ಚು ಪ್ರಯೋಜನ ಪಡೆಯುತ್ತಿರುತ್ತಾರೆ.ʼ

Read more Articles on