ಈಗಾಗಲೇ ಸಲ್ಲಿಸಿದ್ದ ಮನವಿಗೆ ಹಣಕಾಸು ಸಚಿವರು ಪುರಸ್ಕರಿಸಿ, ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ತಂಬಾಕು ಬೆಳೆಗಾರರಿಗೆ ಪೂರಕವಾಗುವ ರೀತಿಯಲ್ಲಿ ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಚ್ಚಾ ತಂಬಾಕು ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸಲ್ಲಿಸಿದ್ದ ಮನವಿಗೆ ಹಣಕಾಸು ಸಚಿವರು ಪುರಸ್ಕರಿಸಿ, ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಫೆ.5 ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಉತ್ಪಾದಿತವಲ್ಲದ ತಂಬಾಕಿನ (ಕಚ್ಚಾ) ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿ ಹಣಕಾಸು ಸಚಿವರು ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಫೆ.5 ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನಾರಂಭಗೊಳ್ಳಲಿದೆ. ಇದರಿಂದ ತಂಬಾಕು ಬೆಳೆಗಾರರು ಮತ್ತು ಈ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ನೆರವಾಗಲಿದೆ. ಕಚ್ಚಾ ತಂಬಾಕಿನ ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸುವ ಗೆಜೆಟ್ ಅಧಿಸೂಚನೆ ಹೊರಡಿಸಿರುವುದರಿಂದ ರೈತರು ಮತ್ತು ವ್ಯಾಪಾರಿಗಳ ದೀರ್ಘಕಾಲೀನ ಬೇಡಿಕೆ ಈಡೇರಿದಂತಾಗಿದೆ. ತಂಬಾಕು ಮಾರುಕಟ್ಟೆಗೆ ಸ್ಥಿರತೆಯನ್ನು ತರುವ ನಿರೀಕ್ಷೆಯಿದೆ ಎಂದಿದ್ದಾರೆ.ಈ ಸಕಾಲಿಕ ಕ್ರಮಗಳು ವ್ಯಾಪಾರದಲ್ಲಿ ನಿರಂತರತೆ ಒದಗಿಸುತ್ತದೆ. ರೈತರ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಸಾವಿರಾರು ತಂಬಾಕು ಬೆಳೆಯುವ ಕುಟುಂಬಗಳ ಜೀವನೋಪಾಯಕ್ಕೆ ಆದ್ಯತೆ ನೀಡಲಿದೆ. ರೈತರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಕೃಷಿ ಸಮುದಾಯದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಸದಾ ಬದ್ಧ ಎಂದು ಅವರು ತಿಳಿಸಿದ್ದಾರೆ.