ಸಾರಾಂಶ
ಹಿರಿಯ ಮುಖಂಡರು, ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಕೆಲ ಬೇಡಿಕೆ ಈಡೇರಿಸಲು ಒತ್ತಾಯಿಸಲಿದ್ದಾರೆ. ಇಲ್ಲಿನ ವರೂರಿನಲ್ಲಿ ಜೈನಮುನಿ ಶ್ರೀ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ರಾಜ್ಯದ ವಿವಿಧ ಪ್ರದೇಶದ ಜೈನ ಸಮಾಜದ ಮುಖಂಡರು ಸಭೆ ನಡೆಸಿ ಈ ನಿರ್ಧಾರ ಕೈಗೊಂಡರು.
ಹುಬ್ಬಳ್ಳಿ: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪ್ರಕರಣ ಸಂಬಂಧ ಎಸ್‌ಐಟಿ ಮಧ್ಯಂತರ ವರದಿ ಪ್ರಕಟಿಸಬೇಕು ಎಂದು ಆಗ್ರಹಿಸಿರುವ ಜೈನ ಸಮಾಜದ ಮುಖಂಡರು, ಧಾರವಾಡದಲ್ಲಿ ಆ. ೧೧ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಅಲ್ಲದೇ ಅದೇ ದಿನ ಹಿರಿಯ ಮುಖಂಡರು, ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಕೆಲ ಬೇಡಿಕೆ ಈಡೇರಿಸಲು ಒತ್ತಾಯಿಸಲಿದ್ದಾರೆ. ಇಲ್ಲಿನ ವರೂರಿನಲ್ಲಿ ಜೈನಮುನಿ ಶ್ರೀ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ರಾಜ್ಯದ ವಿವಿಧ ಪ್ರದೇಶದ ಜೈನ ಸಮಾಜದ ಮುಖಂಡರು ಸಭೆ ನಡೆಸಿ ಈ ನಿರ್ಧಾರ ಕೈಗೊಂಡರು.ವಿಶೇಷ ತನಿಖಾ ತಂಡ ಮಧ್ಯಂತರ ವರದಿ ಪ್ರಕಟಿಸಬೇಕು. ಅನಾಮಧೇಯ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಈತ ಗುರುತಿಸಿದ್ದ ಪಾಯಿಂಟ್‌ಗಳು ಮುಗಿದಿವೆ. ಬಾಹುಬಲಿ ಅಹಿಂಸಾ ತತ್ವದ ಪ್ರತಿಪಾದಕರು. ಅವರ ಜಾಗದಲ್ಲಿಯೇ ಅಸ್ಥಿ ಹುಡುಕಲು ಹೊರಟಿರುವುದು ಸರಿಯಲ್ಲ. ಮುಂದುವರಿಯಲು ಬಿಟ್ಟರೆ ಮಂಜುನಾಥ ಸ್ವಾಮಿ ದೇವಸ್ಥಾನವನ್ನೂ ನೆಲಸಮಗೊಳಿಸುವ ಷಡ್ಯಂತ್ರ ಇದರ ಹಿಂದಿದೆ ಎಂದು ಮುಖಂಡರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಸಂಬಂಧ ಗಿರೀಶ ಮಟ್ಟಣ್ಣವರ ಕೂಡಲೇ ಕ್ಷಮೆಯಾಚಿಸಬೇಕು ಮತ್ತು ಅವರ ಮಂಪರು ಪರೀಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡದ ಕಲಾಭವನದಿಂದ ಹೊರಟು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಮುಖ್ಯಮಂತ್ರಿ, ಗೃಹ ಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸಲು ವಿಫಲವಾದಲ್ಲಿ ಸೆ. ೧ರಂದು ಧಾರವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕಿಳಿಯಲಾಗುವುದು ಎಂದು ಸಭೆ ಸೇರಿದ್ದವರು ಎಚ್ಚರಿಕೆ ನೀಡಿದರು.ಪ್ರಮುಖರಾದ ವೀರಕುಮಾರ ಪಾಟೀಲ, ಧೂಳಗೊಂಡ ಪಾಟೀಲ, ಶೀತಲ್ ಪಾಟೀಲ, ಅಭಯ ಅವಲಕ್ಕಿ, ವಿಮಲ ತಾಳಿಕೋಟೆ, ಚಂದ್ರಪ್ಪ ಬೆಣ್ಣಿ, ದೇವೇಂದ್ರಪ್ಪ ಕಾಗೇನವರ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖರು ಭಾಗವಹಿಸಿದ್ದರು.