ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೂರಾರು ಸಂಸ್ಥೆಗಳಿದ್ದರೂ ಅವಕಾಶಗಳನ್ನು ಬಳಸಿಕೊಳ್ಳದೇ ಪ್ರಯತ್ನದಿಂದ ಹಿಂದೆ ಸರಿಯುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
ಜ್ಞಾನ ಎಂಬುದು ಯಾರ ಸ್ವತ್ತಲ್ಲ, ಅದನ್ನು ಸರಿಯಾದ ಸಮಯದಲ್ಲಿ ಅಳವಡಿಸಿಕೊಂಡರೇ ಮಾತ್ರ ಉನ್ನತ ಸ್ಥಾನ ಕಟ್ಟಿಟ್ಟ ಬುತ್ತಿ ಎಂದು ನಗರ ಅಪರಾಧ ಮತ್ತು ಸಂಚಾರ ಡಿಸಿಪಿ ಕೆ.ಎಸ್. ಸುಂದರ್ ರಾಜು ತಿಳಿಸಿದರು.ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯು ಆಯೋಜಿಸಿರುವ ಪಿಸಿ/ ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ಉಚಿತ ತರಬೇತಿ ಶಿಬಿರವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೂರಾರು ಸಂಸ್ಥೆಗಳಿದ್ದರೂ ಅವಕಾಶಗಳನ್ನು ಬಳಸಿಕೊಳ್ಳದೇ ಪ್ರಯತ್ನದಿಂದ ಹಿಂದೆ ಸರಿಯುತ್ತಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿದವರು ಎಲ್ಲಾ ಪ್ರಮುಖ ಹುದ್ದೆಗಳ ಚುಕ್ಕಾಣಿ ಹಿಡಿದು ಆಡಳಿತ ಕೇಂದ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬ ಸಾಧಕರ ಹಿಂದೆ ಕಠಿಣ ಪರಿಶ್ರಮವಿದ್ದು ಅವರನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಪ್ರತಿಯೊಂದು ಕೆಲಸವನ್ನು ಮಾಡುವ ಮುನ್ನ ದೃಢ ಸಂಕಲ್ಪ ಮಾಡಿದರೆ ಮಾತ್ರ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಬಹುದಾಗಿದೆ ಎಂದರು.ಯಾವುದೇ ಹುದ್ದೆಗೆ ಸೇರ ಬಯಸುವ ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ಸೇವಾ ಮನೋಭಾವವನ್ನು ಅಳವಡಿಸಿಕೊಂಡರೇ ಉನ್ನತ ಹೆಸರನ್ನು ಮಾಡಬಹುದಾಗಿದ್ದು, ನಿಷ್ಠೆಯಿಂದ ಪ್ರಾಮಾಣಿಕ ಪ್ರಯತ್ನ ನಡೆಸಿ, ಪ್ರತಿದಿನ ಅಭ್ಯಾಸವನ್ನು ಮಾಡುತ್ತಿದ್ದರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಪೊಲೀಸ್ ಅಧಿಕಾರಿಯಾಗಬಹುದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವಯಸ್ಕರ ಶಿಕ್ಷಣ ಕೌನ್ಸಿಲ್‌ನಿರ್ದೇಶಕ ವೈ.ಎನ್. ಶಂಕರೇಗೌಡ ಮಾತನಾಡಿ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಪೊಲೀಸ್ ಇಲಾಖೆಯೂ ಒಂದಾಗಿದ್ದು. ಆಲೋಚನೆ ಕ್ರಮಗಳನ್ನು ಪಠ್ಯವಾರು ವಿಂಗಡಿಸಿಕೊಂಡರೆ ಆಗ ಮಾತ್ರ ಪ್ರತಿ ವಿಷಯದ ಬಗ್ಗೆ ಜ್ಞಾನವನ್ನು ಪಡೆಯಬಹುದು. ಪ್ರತಿಯೊಬ್ಬರು ಹಿಂಜರಿಕೆತನವನ್ನು ಹಿಮ್ಮೆಟ್ಟಿ ಮುಂದೆ ಸಾಗಿ ಎಂದು ಹೇಳಿದರು.ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಿ. ಉದಯ್ ಕುಮಾರ್, ಜ್ಞಾನಬುತ್ತಿ ಸಂಸ್ಥೆಯ ಕಾರ್ಯದರ್ಶಿ ಎಚ್. ಬಾಲಕೃಷ್ಣ, ಪ್ರೊ.ವಿ. ಜಯಪ್ರಕಾಶ್, ಡಾ. ಐಪನಹಳ್ಳಿ ವಸಂತ್ ಕುಮಾರ್, ಡಾ.ಎಸ್.ಬಿ.ಎಂ. ಪ್ರಸನ್ನ, ಕೆ.ವೈ. ನಾಗೇಂದ್ರ, ಕಿರಣ್ ಕೌಶಿಕ್, ಜೈನಹಳ್ಳಿ ಸತ್ಯನಾರಾಯಣಗೌಡ, ಡಾ. ಪಳಿನಿಸ್ವಾಮಿ ಮೂಡುಗೂರು, ಡಾ.ವಿ. ಕೃಷ್ಣಕುಮಾರ್, ಯು.ಎಂ. ಶರದ್ ರಾವ್, ಎಂ. ರಾಜೀವ್ ಶರ್ಮ ಮೊದಲಾದಲರು ಇದ್ದರು.
----ಕೋಟ್...
ಮಾಹಿತಿ, ಜ್ಞಾನ ಮತ್ತು ಬುದ್ಧಿವಂತಿಕೆ ಈ ಮೂರು ಪ್ರಮುಖ ಅಂಶಗಳನ್ನು ಓದುವ ಹವ್ಯಾಸದಲ್ಲಿ ಅಳವಡಿಸಿಕೊಂಡರೇ ಪ್ರತಿಯೊಬ್ಬರೂ ಅಧಿಕಾರಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಓದುವುದರಿಂದ ಯಾವುದೇ ಪ್ರಯೋಜನವಿಲ್ಲ, ಪ್ರತಿಯೊಂದು ವಿಷಯವನ್ನು ಬುದ್ಧಿವಂತಿಕೆಯಿಂದ ಅಧ್ಯಯನ ಮಾಡಿದರೇ ಮಾತ್ರ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬಹುದು.- ಡಿ. ಉದಯ್ ಕುಮಾರ್, ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ