ಸಂಭ್ರಮದ ಕಾಲಕಾಲೇಶ್ವರ ದೇವರ ರಥೋತ್ಸವ

KannadaprabhaNewsNetwork |  
Published : Apr 03, 2026, 02:15 AM IST
ಸುಕ್ಷೇತ್ರ ಕಾಲಕಾಲೇಶ್ವರ ದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು. | Kannada Prabha

ಸಾರಾಂಶ

ದುರ್ಗಾದೇವಿಯ ವಿಶೇಷ ಪೂಜೆಯೊಂದಿಗೆ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಜೆ ಬಾನಂಗಳದಲ್ಲಿ ನಕ್ಷತ್ರ ಕಾಣಿಸಿಕೊಳ್ಳುತ್ತಿದ್ದಂತೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗಜೇಂದ್ರಗಡ: ಸಮೀಪದ ಸುಕ್ಷೇತ್ರ ಕಾಲಕಾಲೇಶ್ವರ ದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ಸಂಜೆ ಸಕಲ ವಾದ್ಯ ವೈಭವಗಳೊಂದಿಗೆ, ಸಹಸ್ರಾರು ಸದ್ಭಕ್ತರ ಹರ್ಷೋದ್ಗಾರದ ಮಧ್ಯೆ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ದವನದ ಹುಣ್ಣಿಮೆ ದಿನ ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಗೆ ದವನಾರ್ಪಣೆ, ತೆಂಗಿನ ಕಾಯಿ, ಉತ್ತತ್ತಿ, ಬಾಳೆಹಣ್ಣು, ಕಬ್ಬು ದವಸ- ಧಾನ್ಯ ಸಮರ್ಪಿಸಿದ ನಂತರ ಪಲ್ಲಕ್ಕಿ ಸೇವೆ ಸಲ್ಲಿಸಲಾಯಿತು. ಬಳಿಕ ದುರ್ಗಾದೇವಿಯ ವಿಶೇಷ ಪೂಜೆಯೊಂದಿಗೆ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಜೆ ಬಾನಂಗಳದಲ್ಲಿ ನಕ್ಷತ್ರ ಕಾಣಿಸಿಕೊಳ್ಳುತ್ತಿದ್ದಂತೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಹಸ್ರಾರು ಭಕ್ತರು ಸಕಲ ವಾದ್ಯ ವೈಭವಗಳೊಂದಿಗೆ ಶಂಭೋಲಿಂಗ ಹರ ಹರ ಮಹಾದೇವ ಎಂದು ಭಕ್ತಿ ಭಾವದಿಂದ ಜಯಘೋಷ ಹಾಕುತ್ತಾ ರಥವನ್ನು ಎಳೆದರು. ಕಾಲಕಾಲೇಶ್ವರ ರಥೋತ್ಸವ ಹಿನ್ನೆಲೆ ಬೆಳಗ್ಗೆ ಹಾಗೂ ಮಧ್ಯಾಹ್ನದ ಸುಡು ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆ ಮೂಲಕ ಆಗಮಿಸಿದ್ದ ಭಕ್ತರಿಗೆ ರಸ್ತೆ ಪಕ್ಕದ ಕೆಲವು ಹೊಲದ ಮಾಲೀಕರು ಹಾಗೂ ಪಟ್ಟಣದ ವಿವಿಧ ಸಂಘ- ಸಂಸ್ಥೆಗಳಿಂದ ಆರಂಭಿಸಿದ್ದ ನೀರಿನ ಅರವಟಿಗೆಗಳು ಭಕ್ತರ ದಾಹ ನೀಗಿಸಿದ್ದು ವಿಶೇಷವಾಗಿತ್ತು. ಇತ್ತ ಪಟ್ಟಣದ ದುರ್ಗಾ ವೃತ್ತದಿಂದಲೇ ಟಂಟಂ ವಾಹನಗಳು ಭಕ್ತರನ್ನು ಕಾಲಕಾಲೇಶ್ವರ ಜಾತ್ರೆಗೆ ರಿಯಾಯಿತಿ ದರದಲ್ಲಿ ಕರೆದುಕೊಂಡಲು ಹೋಗಲು ಸ್ಪರ್ಧೆಗೆ ಇಳಿದಂತೆ ಕಂಡಿದ್ದರಿಂದ ರಾಜೂರು ಮಾರ್ಗ ಹಾಗೂ ಪುರ್ತಗೇರಿ ಕ್ರಾಸ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಹೀಗಾಗಿ ಒಂದು ಕಿಲೋ ಮೀಟರ್ ದೂರದಲ್ಲಿಯೇ ಪೊಲೀಸರು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಿಸಿದರು.ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಎತ್ತಿನ ಚಕ್ಕಡಿ, ಟಂಟಂ, ಲಾರಿ, ಟೆಂಪೋಗಳ ಮೂಲಕ ಆಗಮಿಸಿ ಕಾಲಕಾಲೇಶ್ವರನ ದರ್ಶನ ಪಡೆದರು. ಭಾವೈಕ್ಯತೆಯ ಸಂಕೇತವಾಗಿರುವ ಈ ಜಾತ್ರೆಯು ಐದು ದಿನಗಳ ವರೆಗೆ ನಡೆಯಲಿದೆ.ಇಂದು ಗವಿಮಠದಲ್ಲಿ ಶಿವಾನುಭವ ಕಾರ್ಯಕ್ರಮ

ನರಗುಂದ: ತಾಲೂಕಿನ ಶಿರೋಳ ಗ್ರಾಮದ ಯಚ್ಚರ ಸ್ವಾಮಿಗಳ ಗವಿಮಠದ ಆವರಣದಲ್ಲಿ ಏ. 3ರಂದು ಸಂಜೆ 7 ಗಂಟೆಗೆ 30ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಶ್ರೀರಾಮ ಮತ್ತು ಹನುಮ ಜಯಂತಿ ಕಾರ್ಯಕ್ರಮ ಶ್ರೀಮಠದ ಆವರಣದಲ್ಲಿ ಜರುಗಲಿದೆ.ಸಾನ್ನಿಧ್ಯವನ್ನು ಅಭಿನವ ಯಚ್ಚರ ಶ್ರೀಗಳು ವಹಿಸುವರು. ಉಪನ್ಯಾಸಕರಾಗಿ ಮುಖ್ಯ ಶಿಕ್ಷಕ ಶಂಕರಗೌಡ ಪಾಟೀಲ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ, ಕೊಪ್ಪಳದ ವಿಶ್ವಕರ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅರ್ಕಸಾಲಿ, ಸಂಗೀತಗಾರರಾದ ಮಲ್ಲಪ್ಪ ಚಿಕ್ಕನರಗುಂದ, ಬಸವರಾಜ ಕುಪ್ಪಸ್ತ, ಮೈಲಾರಪ್ಪ ಹೂಗಾರ, ದುರ್ಗಾದೇವಿ ಭಜನಾ ಮಂಡಳಿ, ಮರಡಿ ಮಾರುತಿ ಸಂತ ಭಜನಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸುವರು ಎಂದು ಶ್ರೀಮಠದ ಭಕ್ತರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಪ್ತು ಸ್ಥಗಿತ, ಗಿಡದಲ್ಲಿಯೇ ಕೊಳೆಯುತ್ತಿರುವ ಪಪ್ಪಾಯಿ ಹಣ್ಣು!
ಸನಾತನ ಧರ್ಮ ಜಗತ್ತಿಗೆ ಬೆಳಕು ನೀಡುವ ಧರ್ಮ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ