ದೊಡ್ಡಬಳ್ಳಾಪುರ: ಇಲ್ಲಿನ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಡಹಬ್ಬ ದಸರಾವನ್ನು ಈ ಬಾರಿ ವಿಶೇಷವಾಗಿ ಆಚರಿಸಲಾಯಿತು. ವಿವಿಧ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು.
ಆರ್ಎಲ್ಜೆಐಟಿಯ ವಿದ್ಯಾರ್ಥಿಗಳು ದಸರಾ, ನವರಾತ್ರಿ ಸಂಭ್ರಮದ ಭಾಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇಸಿ ವಿಭಾಗದ ಒಳಾಂಗಣದ ಹುಲ್ಲುಹಾಸಿನ ಮೇಲೆ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಗಣಕ ವಿಜ್ಞಾನ ವಿಭಾಗ, ಅಲೈಡ್ ಸೈನ್ಸ್ ವಿಭಾಗ, ಎಐಎಂಎಲ್ ವಿಭಾಗಗಳ ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳನ್ನು ನೀಡಿದರು. ಕೋಲಾಟ, ದಾಂಡಿಯಾ, ಗರ್ಬಾ ಸೇರಿದಂತೆ ವಿವಿಧ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳು ನಡೆದವು. ಸಿರ್ವಿ ತಂಡದಿಂದ ಆಯೋಜಿಸಿದ್ದ ಗುಜರಾತಿ ದಾಂಡಿಯಾ ನೃತ್ಯ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಪಠ್ಯ ಕೇಂದ್ರಿತ ಶಿಕ್ಷಣವನ್ನಷ್ಟೇ ಕೇಂದ್ರೀಕರಿಸುವುದು ಸರಿಯಲ್ಲ. ಸ್ಥಳೀಯ ಹಬ್ಬ ಹರಿದಿನಗಳ ಆಚರಣೆ, ಅವುಗಳ ಹಿನ್ನಲೆ, ಸಾಮಾಜಿಕ ಹಾಗೂ ಸಾಂಸ್ಕೃತಿಯ ವೈವಿಧ್ಯತೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡುವುದು ಅಗತ್ಯ. ಈ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ದಸರೆಯನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ವಿದ್ಯಾರ್ಥಿಗಳು ಮತ್ತು ತಂಡಗಳಿಗೆ ಬಹುಮಾನ, ಸ್ಮರಣಿಕೆಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಶೈಕ್ಷಣಿಕ ಘಟಕಗಳು ಮತ್ತು ವಿಭಾಗಗಳಲ್ಲಿ ಆಯುಧಪೂಜೆ, ವಿಜಯದಶಮಿ ಆಚರಣೆ ನಡೆಯಿತು.
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಕಣ್ಮನ ಸೆಳೆದ ಗೊಂಬೆ ಪ್ರದರ್ಶನ.
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.