ಕರ್ನಾಟಕದಲ್ಲಿ ಮೊಟ್ಟ ಮೊದಲ ಮೂಳೆ ದಾನ : ಸಾವಿನಲ್ಲೂ ಸಾರ್ಥಕತೆ ಮೆರೆದ ಜಂಬೂರು ಗ್ರಾಮದ ಈಶ್ವರ

KannadaprabhaNewsNetwork |  
Published : Dec 24, 2024, 12:45 AM ISTUpdated : Dec 24, 2024, 10:58 AM IST
human body muscles bones

ಸಾರಾಂಶ

ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲೇ ಮೊಟ್ಟ ಮೊದಲ ಬಾರಿಗೆ ಮೃತದೇಹದ ಮೂಳೆ ದಾನ ಮಾಡಲಾಗಿದೆ. ಜಂಬೂರು ಗ್ರಾಮದ ನಿವಾಸಿ ಈಶ್ವರ ಎನ್‌. ಸಾವಿನಲ್ಲೂ ಸಾರ್ಥಕತೆ ಮೆರೆದವರು.

 ಮಡಿಕೇರಿ : ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲೇ ಮೊಟ್ಟ ಮೊದಲ ಬಾರಿಗೆ ಮೃತದೇಹದ ಮೂಳೆ ದಾನ ಮಾಡಲಾಗಿದೆ. ಸೋಮವಾರಪೇಟೆಯ ಜಂಬೂರು ಗ್ರಾಮದ ನಿವಾಸಿ ಈಶ್ವರ ಎನ್. (32) ಎಂಬುವವರೇ ಸಾವಿನಲ್ಲೂ ಸಾರ್ಥಕತೆ ಮೆರೆದವರು.

ಇದೇ ಡಿ.21 ರಂದು ರಾತ್ರಿ ತಾವು ಚಲಾಯಿಸುತ್ತಿದ್ದ ಪಿಕ್ ಅಪ್ ವಾಹನ ಗರಗಂದೂರು ಬಳಿ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಪರಿಣಾಮ ಈಶ್ವರ್ ಎನ್. ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.

ಈಶ್ವರ ಅವರು ಗಂಭೀರ ಸ್ಥಿತಿಯಲ್ಲಿದ್ದ ವಿಚಾರವನ್ನು ವೈದ್ಯರು ಅವರ ಸಹೋದರಿ ಸೌಮ್ಯ ಬಳಿ ತಿಳಿಸಿದಾಗ ಸ್ವಯಂಪ್ರೇರಿತರಾಗಿ ಅಂಗಾಂಗ ದಾನದ ಕುರಿತು ಆಸಕ್ತಿ ತೋರಿದರು. ಕಸಿ ಸಂಯೋಜಕರಾದ ಅಕ್ಷತಾ ಶೆಟ್ಟಿ ಹಾಗೂ ನರಶಸ್ತ್ರ ಚಿಕಿತ್ಸಕರು ಸೇರಿದಂತೆ ವೈದ್ಯಕೀಯ ತಂಡ ಸಮಾಲೋಚನೆ ನಡೆಸಿತು. ನಂತರ ಸಹೋದರಿ ಸೌಮ್ಯ ಹಾಗೂ ಕುಟುಂಬ ವರ್ಗ ಈಶ್ವರ ಅವರ ಮೂಳೆಗಳನ್ನು ಕಸಿ ಮಾಡಲು ದಾನ ನೀಡುವುದಾಗಿ ಒಪ್ಪಿಕೊಂಡರು.

ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ದಾನದ ಪ್ರಯೋಜನಗಳು ಮತ್ತು ಸ್ವೀಕರಿಸುವವರ ಮೇಲೆ ಅದು ಬೀರಬಹುದಾದ ಪ್ರಭಾವವನ್ನು ಕುಟುಂಬವು ಅರ್ಥಮಾಡಿಕೊಂಡಿದೆ ಎಂದು ವೈದ್ಯರ ತಂಡ ಖಚಿತ ಪಡಿಸಿಕೊಂಡಿತು. ಇದು ಮೆಡಿಕೋ-ಲೀಗಲ್ ಪ್ರಕರಣವಾಗಿರುವುದರಿಂದ, ದಾನ ನೀಡುವ ಮೊದಲು ಪೊಲೀಸರು ಮತ್ತು ಈಶ್ವರ ಅವರ ಹತ್ತಿರದ ಸಂಬಂಧಿಕರಿಂದ ಅಗತ್ಯ ಅನುಮತಿಯನ್ನು ಪಡೆಯಲಾಯಿತು.

ಆರ್ಥೋಪೆಡಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ವಿಕ್ರಂ ಶೆಟ್ಟಿ ನೇತೃತ್ವದಲ್ಲಿ ಪ್ರೊ.ಎಂ.ಶಾಂತರಾಮ ಶೆಟ್ಟಿ ಹಾಗೂ ಶಸ್ತ್ರಚಿಕಿತ್ಸಾ ತಂಡ ಮೂಳೆಯನ್ನು ಬೇರ್ಪಡಿಸಿತು. ಮೃತದೇಹದ ಮೂಳೆಗಳ ಸ್ಥಳದಲ್ಲಿ ಪ್ಲಾಸ್ಟಿಕ್ ಮೂಳೆಗಳನ್ನು ಸೇರಿಸಲಾಯಿತು.

ಈ ಮೂಳೆ ದಾನದಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಪೀಡಿತ ಆರು ಮಕ್ಕಳ ಕೈಕಾಲುಗಳನ್ನು ಸಮರ್ಥವಾಗಿ ಉಳಿಸಬಹುದು. ಮೂಳೆಗಳನ್ನು ಅಂಗ ಉಳಿಸುವ ಶಸ್ತ್ರಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಯುವ ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ ಎಂದು ಡಾ.ವರುಣ್ ಶೆಟ್ಟಿ ಹೇಳಿದ್ದಾರೆ.

ಈ ದಾನವನ್ನು ಕರ್ನಾಟಕದಲ್ಲಿ ಪ್ರವರ್ತಕ ಉಪಕ್ರಮವೆಂದು ಶ್ಲಾಘಿಸಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಮೊಟ್ಟಮೊದಲ ಮೃತದೇಹದ ಮೂಳೆ ದಾನವಾಗಿದ್ದು, ಪರಹಿತಚಿಂತನೆಯ ಕಾರ್ಯಗಳನ್ನು ಬೆಂಬಲಿಸುವಲ್ಲಿ ಆರೋಗ್ಯ ಸಂಸ್ಥೆಗಳು ಮತ್ತು ಕುಟುಂಬಗಳ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುತ್ತದೆ.

ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಶೆಟ್ಟಿ ಅವರು ಕುಟುಂಬದ ಬೆಂಬಲ, ಸಹಕಾರ ಮತ್ತು ವೈದ್ಯಕೀಯ ತಂಡದ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...