ಕನ್ನಡಪ್ರಭ ವಾರ್ತೆ ಮೇಲುಕೋಟೆ
ಯತಿರಾಜದಾಸರ್ ಗುರುಪೀಠದಿಂದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಸಹೋದರರು ಅನೂಚಾನ ಸಂಪ್ರದಾಯ ಹಾಗೂ ಪರಂಪರೆಯಂತೆ ಮಕರ ಸಂಕ್ರಾಂತಿ ಮಹೋತ್ಸವವನ್ನು ಶ್ರದ್ಧಾಭಕ್ತಿಂದ ನೆರವೇರಿಸಿದರು.
ಗೋದೂಳಿ ಸಮಯದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ವಿಶೇಷ ಪುಷ್ಪಗಳಿಂದ ತಯಾರಿಸಿದ ಮಾಲೆ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ನಿವೇದನ ಮಾಡಿ ಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯದೊಂದಿಗೆ ಆರಂಭವಾದ ಮಕರ ಸಂಕ್ರಾಂತಿ ಉತ್ಸವ ಚತುರ್ವೀದಿಗಳಲ್ಲಿ ವೈಭವದಿಂದ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಗೋವಿಂದ, ಗೋವಿಂದ ಘೋಷ ಮೊಳಗಿಸುತ್ತಾ ಚೆಲುವನಾರಾಯಣಸ್ವಾಮಿ ದರ್ಶನಪಡೆದು ಪುನೀತರಾದರು.ನಂತರ ಕೊಠಾರ ಮಂಟಪದಲ್ಲಿ ಯತಿರಾಜದಾಸರ್ ಗುರುಪೀಠದಿಂದ ವಿಶೇಷಪೂಜೆ ನಡೆದ ನಂತರ ಜೋಯಿಸರು ಈ ವರ್ಷದ ‘ಸಂಕ್ರಾಂತಿ ಫಲ’ ಪಠಣ ನೆರವೇರಿಸಿದರು. ರಾತ್ರಿ ಮೂಲಮೂರ್ತಿ ಶ್ರೀಚೆಲ್ವ ತಿರುನಾರಾಯಣಸ್ವಾಮಿಯನ್ನು ವಿಶೇಷ ಪುಷ್ಪಾಹಾರಗಳಿಂದ ಅಲಂಕರಿಸಿ ಅರೆಯರ್ ಪಾಡಲ್ ನೊಂದಿಗೆ ವಸಂತರಾಗ ಸೇವೆ ನೆರವೇರಿಸಲಾಯಿತು.
ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಸಹ ಚೆಲುವನಾರಾಯಣಸ್ವಾಮಿ ಇಷ್ಠಾರ್ಥ ಕರುಣಿಸಲಿ ಎಂದು ಹಾರೈಸಿ ಸ್ವಾಮಿಗೆ ನಿವೇದನವಾದ ಹಣ್ಣು ಹಾಗೂ ಎಳ್ಳು ಬೆಲ್ಲದ ತಾಂಬೂಲ ನೀಡಲಾಯಿತು. ಯತಿರಾಜದಾಸರ್ ಗುರುಪೀಠದ ಪ್ರೊ. ಸ್ಥಾನೀಕಂ ಶೆಲ್ವಪ್ಪಿಳ್ಳೆ ಅಯ್ಯಂಗಾರ್ ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್, ಗುರುಪೀಠದ ಶಿಷ್ಯವರ್ಗದ ಹೈಕೋರ್ಟ ವಕೀಲ ಜಯರಾಂ, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಮೇಲುಕೋಟೆ: ದೇವಾಲಯದ ಪ್ರಮುಖ ಉತ್ಸವಗಳಲ್ಲೊಂದಾದ ಅಂಗಮಣಿ ಉತ್ಸವ ಜ.16 ರಂದು ನಡೆಯಲಿದೆ.