ಸುರೇಶ ಯಳಕಪ್ಪನವರ ಹಂಪಿ
ಹಂಪಿ ಉತ್ಸವದ ನಿಮಿತ್ತ ಕಮಲಾಪುರ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ ಬಳಿ ನಡೆದ ಜೋಡೆತ್ತುಗಳ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು.ವಿವಿಧ ತಳಿಗಳ ಎತ್ತುಗಳು ಗಮನಸೆಳೆದವು. ರೈತರು ಆಕರ್ಷಿತರಾಗಿ ಎತ್ತುಗಳನ್ನು ಬಣ್ಣಿಸುವುದು ಕಂಡುಬಂತು. ಹೆಚ್ಚಾಗಿ ಹಳ್ಳಿಕಾರ್ ತಳಿಯ ಎತ್ತುಗಳು ಭಾಗವಹಿಸಿದ್ದವು. ರೈತರು ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿದ್ದರು. ಎತ್ತುಗಳ ಕೋಡುಗಳಿಗೆ ಕೋಡಂಣ್ಸು, ಗೊಂಡೆ, ಕೊರಳಿಗೆ ಗುಗ್ಗರಿ, ಹಣೆಗೆಜ್ಜೆ, ಮೈಮೇಲೆ ಜೂಲು, ನೋಡುಗರ ಕಣ್ಣು ಎತ್ತುಗಳ ಮೇಲೆ ಬೀಳದಿರಲಿ ಎಂದು ರೈತರು ಕರಿಹಗ್ಗ ಕಟ್ಟಿದ್ದರು. ಜಿಲ್ಲೆ ಅಷ್ಟೇ ಅಲ್ಲದೇ ನೆರೆಯ ಜಿಲ್ಲೆಗಳಿಂದ ಬಂದಿದ್ದ ದಷ್ಟಪುಷ್ಟವಾದ ಜೋಡೆತ್ತುಗಳ ಪ್ರದರ್ಶನ ರೈತರನ್ನು ರೋಮಾಂಚನಗೊಳಿಸಿತು.
ಮೊದಲ ಬಾರಿ ಪ್ರದರ್ಶನ: ಪ್ರತಿವರ್ಷದ ಹಂಪಿ ಉತ್ಸವದಲ್ಲಿ ಕೇವಲ ಶ್ವಾನ ಪ್ರದರ್ಶನ, ಟಗರು, ಕೋಳಿ ಪ್ರದರ್ಶನ ಮಾತ್ರ ಕಂಡುಬರುತ್ತಿತ್ತು. ಈ ಬಾರಿ ಜೋಡೆತ್ತುಗಳ ಪ್ರದರ್ಶನ ಮಾಡಿರುವುದರಿಂದ ರೈತರು ಅತ್ಯಂತ ಖುಷಿಯಿಂದ ಎತ್ತುಗಳನ್ನು ಸಿಂಗರಿಸಿ ಪ್ರದರ್ಶನಕ್ಕೆ ತಂದಿದ್ದರು.ಹಳ್ಳಿಕಾರ್ ಜೋಡಿ ಎತ್ತುಗಳು ಹೆಚ್ಚು ಕಂಡುಬಂದವು. ಕಿಲಾರಿ, ಅಮೃತ್‌ಮಹತ್ ತಳಿಯ ಜೋಡಿಗಳು ಕಡಿಮೆ ಪ್ರಮಾಣದಲ್ಲಿ ಇದ್ದವು. ಒಟ್ಟು ೩೪ ಜೋಡಿ ಎತ್ತುಗಳು ಪ್ರದರ್ಶನದಲ್ಲಿ ಕಂಡುಬಂದವು.
ಇಂಗಳಿಗಿ ಗ್ರಾಮದ ರೈತ ದ್ವಾವಣ್ಣ ಅವರು ತಮ್ಮ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿದ್ದರು. ಅನ್ನದಾತ ಹೆಸರಿನ ಜೋಡಿ ಎತ್ತುಗಳ ಕೋಡಿಗೆ ವಿವಿಧ ಅಲಂಕಾರಿಕ ಹೂವುಗಳಿಂದ, ಬಲೂನ್‌ಗಳಿಂದ ಅಲಂಕರಿಸಿದ್ದು ವಿಶೇಷ ಗಮನಸೆಳೆಯಿತು.ವಿಜೇತರು: ಹೊಸಪೇಟೆಯ ರೈತ ಆರ್. ಮಂಜುನಾಥ ಅವರ ಹಳ್ಳಿಕಾರ್ ತಳಿಯ ಜೋಡಿ ಎತ್ತುಗಳು ಪ್ರದರ್ಶನದಲ್ಲಿ ಚಾಂಪಿಯನ್ ಪಟ್ಟ ಗಿಟ್ಟಿಕೊಂಡವು. ಉಸ್ತುವಾರಿ ಸಚಿವ ಜಮೀರ್ ಆಹಮ್ಮದ್ ಈ ಜೋಡೆತ್ತುಗಳಿಗೆ ₹೫೦ ಸಾವಿರ ನಗದು ಬಹುಮಾನವನ್ನು ವೈಯಕ್ತಿವಾಗಿ ನೀಡಿದರು. ಈ ಎತ್ತುಗಳನ್ನು ₹೬.೫ ಲಕ್ಷಕ್ಕೆ ತರಲಾಗಿದೆ ಎಂದು ಮಾಲೀಕ ಮಂಜುನಾಥ ತಿಳಿಸಿದರು.
ಹೊಸಪೇಟೆಯ ಬಂಡಿ ಕೃಷ್ಣಪ್ಪ ಅವರ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದವು. ಅವರಿಗೆ ₹೧೦ ಸಾವಿರ ನಗದು ಬಹುಮಾನ ನೀಡಲಾಯಿತು. ನಲ್ಲಾಪುರ ಟಿ. ಹನುಮಂತಪ್ಪ ಅವರ ಜೋಡೆತ್ತುಗಳು ದ್ವಿತೀಯ ಸ್ಥಾನ ಪಡೆದು ₹೭೫೦೦ಗಳನ್ನು ತಮ್ಮದಾಗಿಸಿಕೊಂಡರು.ವೆಂಕಟಾಪುರದ ಕೆ. ಹುಲಿಗೇಶ್ ಅವರ ಎತ್ತುಗಳು ತೃತೀಯ ಸ್ಥಾನ ಪಡೆದು ₹೫೦೦೦ ಸಾವಿರ ನಗದು ಪಡೆದರು. ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲ ಎತ್ತುಗಳ ಮಾಲೀಕರಿಗೆ ಪ್ರಮಾಣಪತ್ರ ವಿತರಿಸಿ ಪ್ರೋತ್ಸಾಹಿಸಲಾಯಿತು.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್‌ಖಾನ್ ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಜೋಡೆತ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.ಕಲಬುರಗಿ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ರೈತರು ಎತ್ತುಗಳನ್ನು ಮದುಮಕ್ಕಳಂತೆ ಶೃಂಗರಿಸಿ ಪ್ರದರ್ಶನಕ್ಕೆ ತಂದಿದ್ದಾರೆ. ಕೃಷಿ ಯಾಂತ್ರೀಕರಣ ಆಗುತ್ತಿರುವುದರಿಂದ, ಎತ್ತುಗಳ ಸಾಕಾಣಿಕೆಯಲ್ಲಿ ನಿರ್ಲಕ್ಷ್ಯ ಮಾಡುವುದು ಬೇಡ. ಎತ್ತುಗಳನ್ನು ಅತ್ಯಂತ ಕಾಳಜಿಯಿಂದ ಯಾವುದರ ಕೊರತೆಯಿಲ್ಲದೆ ಮನೆಯ ಮಕ್ಕಳಂತೆ ಸಾಕಬೇಕು. ನಾಟಿ ತಳಿಯ ಎತ್ತುಗಳು ನಶಿಸಬಾರದು, ಉಳಿಸಬೇಕಿದೆ ಎಂದರು.
ವಿಜಯನಗರ ಶಾಸಕ ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಪ್ರದರ್ಶನ ವೀಕ್ಷಿಸಿ ಮಾತನಾಡಿದರು. ಪಶು ವೈದ್ಯರಾದ ಡಾ. ಮಂಜುನಾಥ, ಡಾ. ರವಿಪ್ರಕಾಶ, ಡಾ. ಎಸ್.ಎಸ್. ಪಾಟೀಲ್ ನಿರ್ಣಾಯಕರ ಕಾರ್ಯ ನಿರ್ವಹಿಸಿದರು.ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ ವಿಜಯನಗರ ಜಿಲ್ಲಾ ಉಪನಿರ್ದೇಶಕ ಹೋಮ್‌ಸಿಂಗ್, ಪಶು ಸಹಾಯಕ ನಿರ್ದೇಶಕ ಬಸವರಾಜ ಬೆಣ್ಣೆ, ಡಾ. ಸೂರಪ್ಪ, ಡಾ. ಪ್ರಶಾಂತ ಸೇರಿ ಇಲಾಖೆಯ ವೈದ್ಯರು ಇದ್ದರು.
ಜಿಲ್ಲಾಡಳಿತ ಮೊದಲ ಬಾರಿಗೆ ವಿಶೇಷವಾಗಿ ಜೋಡೆತ್ತುಗಳ ಪ್ರದರ್ಶನ ಆಯೋಜಿಸಿ ರೈತರ ಉತ್ಸಾಹವನ್ನು ಹೆಚ್ಚಿಸಿದೆ. ಮುಂದೆ ಪ್ರತಿ ಉತ್ಸವದಲ್ಲಿ ಜೋಡೆತ್ತುಗಳ ಪ್ರದರ್ಶನದ ಜತೆಗೆ ರೈತರಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.