ಮೂರ್ಕಣ್ಣು ಗುಡ್ಡದ ಭೂವಿವಾದಕ್ಕೆ ಅರಣ್ಯ ಇಲಾಖೆಯೇ ಕಾರಣ

KannadaprabhaNewsNetwork |  
Published : Nov 25, 2026, 01:45 AM IST
24ಎಚ್ಎಸ್ಎನ್18 :  | Kannada Prabha

ಸಾರಾಂಶ

ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಅವರು ಜುಲೈ ೨೨ರಂದು ಮೂರ್ಕಣ್ಣು ಗುಡ್ಡಕ್ಕೆ ಭೇಟಿ ನೀಡಿ ವಾಸ್ತವಿಕ ಸ್ಥಿತಿಗತಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸಿದ್ದಾರೆ. ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ ರೈತರ ಬೆಳೆಗಳು ನಾಶವಾಗುತ್ತಿದ್ದು, ಜನರ ಜೀವಕ್ಕೂ ಅಪಾಯ ಎದುರಾಗಿದೆ. ೨೦೧೪ರಲ್ಲಿ ಎಂಟು ಗ್ರಾಮಗಳ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ನಿರ್ಮಿಸಲು ೨,೭೦೦ ಎಕರೆ ಭೂಮಿ ನೀಡಲು ರೈತರು ಸಿದ್ಧರಿದ್ದರೂ, ಕೇಂದ್ರದ ಅನುಮೋದನೆ ದೊರೆಯದೆ ಯೋಜನೆ ಸ್ಥಗಿತಗೊಂಡಿದೆ. ಈಗಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಯೋಜನೆ ಜಾರಿಗೆ ತರಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವುದರ ಜತೆಗೆ ಆನೆಗಳಿಗೆ ಆಹಾರ, ನೀರು ಮತ್ತು ಸೂಕ್ತ ವಾಸಸ್ಥಳ ಕಲ್ಪಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮೂರ್ಕಣ್ಣು ಗುಡ್ಡದ ಅರಣ್ಯ ಭೂಮಿ ವಿವಾದದಲ್ಲಿ ರೈತರ ಯಾವುದೇ ತಪ್ಪಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಲೋಪದಿಂದಾಗಿ ಹಲವು ವರ್ಷಗಳಿಂದ ರೈತರು ಮತ್ತು ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಶಾಸಕ ಎಚ್. ಕೆ. ಕುಮಾರಸ್ವಾಮಿ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಹಿಂದಿನ ಅಧಿಸೂಚನೆ ಹೊರಡಿಸುವಾಗ ಸ್ಥಳೀಯ ಜನವಸತಿ ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸದಿರುವುದೇ ಇಂದಿನ ಸಮಸ್ಯೆಗೆ ಕಾರಣವಾಗಿದೆ. ಸರ್ಕಾರದಿಂದ ಭೂಮಿ ಮಂಜೂರಾತಿ ಪಡೆದವರನ್ನು ಅಕ್ರಮ ಒತ್ತುವರಿದಾರರೊಂದಿಗೆ ಸಮಾನವಾಗಿ ಪರಿಗಣಿಸುವುದು ಸರಿಯಲ್ಲ. ರೈತರ ದಾಖಲೆ ಹಾಗೂ ಸಮಜಾಯಿಷಿ ಪರಿಶೀಲಿಸದೆ ಒಕ್ಕಲೆಬ್ಬಿಸಬಾರದು ಎಂಬ ನ್ಯಾಯಾಲಯದ ಆದೇಶ ರೈತರಿಗೆ ಸಮಾಧಾನ ತಂದಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಅವರು ಜುಲೈ ೨೨ರಂದು ಮೂರ್ಕಣ್ಣು ಗುಡ್ಡಕ್ಕೆ ಭೇಟಿ ನೀಡಿ ವಾಸ್ತವಿಕ ಸ್ಥಿತಿಗತಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸಿದ್ದಾರೆ. ರೈತರ ಹಿತ ಕಾಪಾಡಲು ಸಂಘಟನೆಗಳು, ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ. ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ ರೈತರ ಬೆಳೆಗಳು ನಾಶವಾಗುತ್ತಿದ್ದು, ಜನರ ಜೀವಕ್ಕೂ ಅಪಾಯ ಎದುರಾಗಿದೆ. ೨೦೧೪ರಲ್ಲಿ ಎಂಟು ಗ್ರಾಮಗಳ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ನಿರ್ಮಿಸಲು ೨,೭೦೦ ಎಕರೆ ಭೂಮಿ ನೀಡಲು ರೈತರು ಸಿದ್ಧರಿದ್ದರೂ, ಕೇಂದ್ರದ ಅನುಮೋದನೆ ದೊರೆಯದೆ ಯೋಜನೆ ಸ್ಥಗಿತಗೊಂಡಿದೆ. ಈಗಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಯೋಜನೆ ಜಾರಿಗೆ ತರಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವುದರ ಜತೆಗೆ ಆನೆಗಳಿಗೆ ಆಹಾರ, ನೀರು ಮತ್ತು ಸೂಕ್ತ ವಾಸಸ್ಥಳ ಕಲ್ಪಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ ಲೋಕೇಶ್ ಮಸ್ತಾರೆ ಮಾತನಾಡಿ, ಮೂರ್ಕಣ್ಣು ಗುಡ್ಡದ ಎಂಟು ಗ್ರಾಮಗಳ ಸುಮಾರು ಎರಡು ಸಾವಿರ ನಿವಾಸಿಗಳು ದಶಕಗಳಿಂದ ಭೂವಿವಾದ ಎದುರಿಸುತ್ತಿದ್ದಾರೆ. ಸೆಕ್ಷನ್-೪ ಅಧಿಸೂಚನೆಗೆ ಸಂಬಂಧಿಸಿದಂತೆ ೧೯೨೪ರಲ್ಲಿಯೇ ರದ್ದಾಗಿರುವ ದಾಖಲೆಗಳು ಲಭ್ಯವಾಗಿದ್ದರೂ ಅರಣ್ಯ ಇಲಾಖೆ ರೈತರ ವಿರುದ್ಧ ಕ್ರಮ ಕೈಗೊಂಡಿದೆ. ಸುಮಾರು ೫೦೮ ಜನರ ವಿರುದ್ಧ ಪ್ರಕರಣ ದಾಖಲಿಸಿ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವ ನೋಟಿಸ್ ನೀಡಿರುವುದು ಖಂಡನೀಯ. ಹೈಕೋರ್ಟ್‌ಗೆ ಮೂಲ ದಾಖಲೆಗಳನ್ನು ಸಲ್ಲಿಸಿದ ಬಳಿಕ ರೈತರ ಪರ ಮಹತ್ವದ ಆದೇಶ ದೊರೆತಿದ್ದು, ಇದು ರಾಜ್ಯದ ಇತರೆ ರೈತರಿಗೂ ಮಾದರಿಯಾಗಲಿದೆ. ರೈತರ ಹಕ್ಕುಗಳ ರಕ್ಷಣೆಗೆ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದರು. ಅರಣ್ಯ ಇಲಾಖೆಯೇ ಹಿಂದೆ ಮರ ಕಡಿಯಲು ಹಾಗೂ ಸೌದೆ ಸಂಗ್ರಹಿಸಲು ಅನುಮತಿ ನೀಡಿದ್ದರೂ, ನಂತರ ಅದೇ ಜನರನ್ನು ಅಕ್ರಮ ಒತ್ತುವರಿದಾರರೆಂದು ಆರೋಪಿಸಿರುವುದು ವಿಪರ್ಯಾಸ. ಮನೆಗಳ ದುರಸ್ತಿಗೂ ಅಡ್ಡಿಪಡಿಸಿ ಪ್ರಕರಣ ದಾಖಲಿಸುವ ಮೂಲಕ ನಿವಾಸಿಗಳಿಗೆ ತೀವ್ರ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ನಟರಾಜು ಐಸಾಮೇಗೌಡ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಮೀಸಲಾತಿ ಹಂಚಿಕೆಯಲ್ಲಿ ಜನಸಂಖ್ಯೆಗೆ ಆದ್ಯತೆ ನೀಡದೆ ಅವೈಜ್ಞಾನಿಕವಾಗಿ ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಕಡೆಗಣಿಸಿ ಕಡಿಮೆ ಜನಸಂಖ್ಯೆಯ ಕ್ಷೇತ್ರಕ್ಕೆ ಮೀಸಲಾತಿ ನೀಡಿರುವುದು ಪ್ರಶ್ನಾರ್ಹವಾಗಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಮಹಿಳಾ ಮೀಸಲಾತಿಯೂ ಕಡಿಮೆಯಾಗಿದ್ದು, ಇದೇ ವೇಳೆ ಮಹಿಳಾ ಮೀಸಲಾತಿ ವಿಚಾರದಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಿಂದಿನ ಅವಧಿಯಲ್ಲಿ ೧೯ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದರೆ, ಈ ಬಾರಿ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕಿದೆ. ದಿನಗೂಲಿ ಕೆಲಸ ಮಾಡುವ ಮಹಿಳೆಯರಿಗೂ ಮಾಸಿಕ ಕನಿಷ್ಠ ೧೫ ಸಾವಿರ ರು. ಆದಾಯದ ಅಗತ್ಯವಿರುವ ಸಂದರ್ಭದಲ್ಲಿ, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮೀಸಲಾತಿಯಲ್ಲಿಯೂ ಕಡಿತ ಮಾಡಿರುವುದು ಸರಿಯಲ್ಲ ಎಂದರು. ಮೀಸಲಾತಿ ನಿಗದಿಗೆ ಸ್ಪಷ್ಟವಾದ ಮಾನದಂಡ ಹಾಗೂ ಸಮರ್ಪಕ ಮಾರ್ಗಸೂಚಿ ರೂಪಿಸಬೇಕು. ಜನಸಂಖ್ಯೆ, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಿ ಮರುಪರಿಶೀಲನೆ ನಡೆಸಬೇಕು. ಯಾವುದೇ ವರ್ಗಕ್ಕೂ ಅನ್ಯಾಯವಾಗದಂತೆ ಸರ್ಕಾರ ಸೂಕ್ತ ತಿದ್ದುಪಡಿ ಮಾಡಿ ನ್ಯಾಯಯುತ ಮೀಸಲಾತಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸುಪ್ರದೀಪ್ ಯಜಮಾನ್, ಕುಮಾರಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಪಾನಿಂದಲೇ ಆಶಾ ಮನವೊಲಿಕೆಗೆ ಸಿಎಂ ಯತ್ನ
ವೈದ್ಯರ ಚೀಟಿ ಇಲ್ಲದೆ ಗರ್ಭಪಾತ ಮಾತ್ರೆಗಳ ಮಾರಾಟ: ಅಧಿಕಾರಿಗಳ ದಾಳಿ