ಬೇಸಿಗೆ ಬಿಸಿಲಿನಿಂದ ಈ ಕಾಡಾನೆಗೆ ಕಾಡಿನಲ್ಲಿ ಸಾಕಷ್ಟು ಆಹಾರ ಸಿಗದೆ ಸೊರಗಿದೆ
ಮರಿ ಹಾಕಿರುವ ಕಾಡಾನೆಯೊಂದಕ್ಕೆ ಬೇಸಿಗೆ ದಿನವಾಗಿದ್ದರಿಂದ ಸಾಕಷ್ಟು ಆಹಾರ ಸಿಗದೆ ನಿತ್ರಾಣವಾಗಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆಹಾರ, ಔಷಧಿ ನೀಡಿ ಉಪಚರಿಸುತ್ತಿದ್ದಾರೆ.
ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿದಿಬ್ಬ ಸಮೀಪದ ಶುಂಠಿಕೆರೆ ಎಂಬಲ್ಲಿ ಕಳೆದ 1 ವಾರದ ಹಿಂದೆ ಕಾಡಾನೆ ಗಂಡು ಮರಿಯೊಂದಿಗೆ ಕಂಡು ಬಂದಿದೆ. ಮಾರಿದಿಬ್ಬ ಸಮೀಪದ ಭದ್ರಾ ಹಿನ್ನೀರಿಗೆ ಬಂದು ನೀರು ಕುಡಿದು ಮತ್ತೆ ಮರಿ ಆನೆಯೊಂದಿಗೆ ಕಾಡು ಸೇರುತ್ತಿದೆ. ಬೇಸಿಗೆ ಬಿಸಿಲಿನಿಂದ ಈ ಕಾಡಾನೆಗೆ ಕಾಡಿನಲ್ಲಿ ಸಾಕಷ್ಟು ಆಹಾರ ಸಿಗದೆ ಸೊರಗಿದೆ. ಇದನ್ನು ಗಮನಿಸಿದ ಅರಣ್ಯ ಇಲಾಖೆಯವರು ಲಕ್ಕವಳ್ಳಿಯ ಭದ್ರಾ ವನ್ಯಜೀವಿ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ವನ್ಯಜೀವಿ ವಿಭಾಗದ ಪಶು ವೈದ್ಯ ಡಾ. ವಿಶಾಕ್ ಆಗಾಗ್ಗೆ ಬಂದು ಕಾಡಾನೆಗೆ ಬೇಕಾದ ಔಷಧಿಯನ್ನು ಆಹಾರದೊಂದಿಗೆ ಮಿಶ್ರ ಮಾಡಿ ಆನೆಗೆ ನೀಡುವ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಇದರ ಜೊತೆಗೆ ಈ ಭಾಗದ ವನ ಪಾಲಕ ಸಂದೀಪ ಕಾಡಾನೆಗೆ ಹುಲ್ಲು, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣು ಸೇರಿದಂತೆ ವಿವಿಧ ಆಹಾರ ನೀಡುತ್ತಾ ಬರುತ್ತಿದ್ದಾರೆ. ಕಾಡಾನೆ ಮರಿ ಹಾಕಿದ ನಂತರ ಹಿಂಡಿನಿಂದ ಬೇರೆಯಾಗಿರಬಹುದು ಎನ್ನಲಾಗಿದೆ.--- ಬಾಕ್ಸ್ ---