ಕನ್ನಡಪ್ರಭ ವಾರ್ತೆ, ತುಮಕೂರು
ಸಮಾಜದಲ್ಲಿ ಪ್ರೀತಿ, ಕರುಣೆ, ಭಾತೃತ್ವದ ಮೌಲ್ಯಗಳು ನಶಿಸುತ್ತಿವೆ, ಸ್ವಾರ್ಥ ಎಲ್ಲೆಡೆಗೆ ಅವರಿಸುತ್ತಿದೆ. ಹಾಗಾಗಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹಿರಿಯ ರಂಗಕರ್ಮಿ ಹಾಗೂ ಸಂಸ್ಕೃತಿ ಚಿಂತಕ ಡಾ.ಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಐದು ದಿನಗಳ ಯುಗಾದಿ ನಾಟಕೋತ್ಸವ-2025ಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು, ನನಗೆ, ನನ್ನಿಂದಲೇ ಎಂಬ ಆಹಂಕಾರದಿಂದ ಬಹುತ್ವದ ಕಲ್ಪನೆ ಮರೆಯಾಗಿದೆ. ವಿದ್ಯಾವಂತರಲ್ಲಿಯೇ ಈ ರೀತಿಯ ಭಾವನೆಗಳು ಹೆಚ್ಚಾಗಿದ್ದು, ಇಂತಹವರು ಜನರಿಗಷ್ಟೇ ಅಲ್ಲ, ಸಮಾಜದ, ಕೊನೆಗೆ ನ್ಯಾಯಾಲಯದ ದಾರಿ ತಪ್ಪಿಸುವಲ್ಲಿ ನಿಸ್ಸೀಮರು ಎಂದರು.ಭಾರತೀಯ ಸಮಾಜ ಎಲ್ಲ ಮೌಲ್ಯಗಳನ್ನು ಹೆಣ್ಣಿನಿಂದಲೇ ಬಯಸುತ್ತದೆ. ಹೆಣ್ಣು ಗರತಿಯಾಗಿರಬೇಕು ಎಂದು ಬಯಸುವ ಸಮಾಜ, ಗಂಡು ಏಕಪತ್ನಿ ವೃತ್ತಸ್ಥನಾಗಿರಬೇಕು ಎಂದು ಕಟ್ಟುಪಾಡು ವಿಧಿಸಲ್ಲ. ಇದನ್ನೇ ಮೀರಿ ವ್ಯಾಸ ಕುಂತಿಯ ಐದು ಜನ ಮಕ್ಕಳನ್ನು ಕಾಪಾಡಲು ಮಹಾಭಾರತ ಸೃಷ್ಟಿಸಿದ. ಮುಂದುವರೆದು ಕುಂತಿಗೆ ಕಾವಲಾಗಿ ದೌಪ್ರದಿಗೆ ಐದು ಜನರ ಗಂಡಂದಿರನ್ನು ಹೊಂದುವಂತೆ ಮಾಡಿದ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ಬಂಜೆ ಈ ರೀತಿಯ ಪದಗಳು ಹೆಣ್ಣಿಗೆ ಮಾತ್ರ ಸೀಮಿತ. ವಿಜ್ಞಾನ ಮುನ್ನೆಲೆಗೆ ಬರುವವರೆಗೂ ಮಕ್ಕಳಾಗದಿರಲು ಗಂಡು ಕಾರಣ ಎಂಬ ಸತ್ಯವನ್ನು ಹೇಳಲೇ ಇಲ್ಲ. ಭೂಮಿಯನ್ನು ಹೆಣ್ಣಿಗೂ, ಆಕಾಶವನ್ನು ಗಂಡಿಗೂ ಹೋಲಿಸಿ, ಮಳೆರಾಯನ ಮೂಲಕ ಅವರಿಬ್ಬರನ್ನು ಒಗ್ಗೂಡಿಸುವ ಜನಪದ ನಮ್ಮಲಿದೆ. ಹಾಗಾಗಿಯೇ ಶಿವ ಸೃಷ್ಟಿಕರ್ತನೂ ಹೌದು, ಲಯಕರ್ತನು ಹೌದು ಎಂದು ಬಸವಲಿಂಗಯ್ಯ ನುಡಿದರು.
ಜಾನಪದ ತಜ್ಞ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಬಹಳ ಸಕ್ರಿಯವಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿದೆ. ಹೊಸ ನಾಟಕಗಳ ಜೊತೆಗೆ, ಕಲಾವಿದರನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದು, ಇವರ ಈ ಕಾರ್ಯ ಮತ್ತಷ್ಟು ಕಲಾವಿದರನ್ನು ತಲುಪುವಂತಾಗಲಿ ಎಂದರು.ಯಕ್ಷದೀವಿಗೆಯ ಅಧ್ಯಕ್ಷೆ ಶ್ರೀಮತಿ ಆರತಿ ಪಟ್ರಮೆ ಮಾತನಾಡಿ,2025 ನೇ ವರ್ಷದ ರಂಗಭೂಮಿ ದಿನಾಚರಣೆಯ ಸಂದೇಶ ಶಾಂತಿಗಾಗಿ ರಂಗಭೂಮಿ ಎಂಬುದಾಗಿದೆ. ಸಮಾಜವನ್ನು ನೋಡುತ್ತಿದ್ದರೆ ಅನೇಕ ಸಂಗತಿಗಳು ನಮ್ಮನ್ನು ತಲ್ಲಣಗೊಳಿಸುತ್ತವೆ. ಕಲೆಯ ಮೂಲಕ ಜನರನ್ನು ಎಚ್ಚರಿಸುವ ಬಗ್ಗೆ, ಯುವಜನರನ್ನು ತಲುಪಿ, ಮುಂದಿನ ಬದಲಾವಣೆ ಹೇಗಿರಬೇಕು ಎಂಬುದನ್ನು ನಾವೆಲ್ಲರೂ ತೀರ್ಮಾನಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಡಾ.ಲಕ್ಷ್ಮೀದಾಸ್ ಮಾತನಾಡಿ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಐದು ದಿನ ಈ ನಾಟಕೋತ್ಸವದಲ್ಲಿ ಯಕ್ಷಗಾನ, ನಾಟಕ, ಸುಗಮ ಸಂಗೀತ, ರಂಗ ಗೀತೆ, ಜಾನಪದ ಗೀತೆಗಳು, ಭರತ ನಾಟ್ಯ ಸೇರಿದಂತೆ ಎಲ್ಲಾ ಕಲಾ ಪ್ರಕಾರಗಳನ್ನು ಒಂದು ವೇದಿಕೆಯಲ್ಲಿ ತಂದಿದ್ದಾರೆ. ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತಮಾರನಹಳ್ಳಿ ಸಿದ್ದರಾಜು ಕಳೆದ ಒಂದು ತಿಂಗಳ ನಿರಂತರ ಪ್ರಯತ್ನ ಈ ಯುಗಾದಿ ನಾಟಕೋತ್ಸವ. ಜನರು ಇಂತಹ ಕಾರ್ಯಕ್ರಮಗಳನ್ನು ಮನರಂಜನೆ ದೃಷ್ಟಿಯಿಂದಷ್ಟೇ ಅಲ್ಲ. ಸಾಮಾಜಿಕ ಕಳಕಳಿಯ ಹಾದಿಯಲ್ಲಿ ನೋಡಿ, ಪ್ರೋತ್ಸಾಹಿಸಬೇಕಾಗಿದೆ ಎಂದರು.ವೇದಿಕೆಯಲ್ಲಿ ಕಾಂತರಾಜು ಕೌತಮಾರನಹಳ್ಳಿ, ಸಿದ್ದರಾಜು ಸ್ವಾಂದೇನಹಳ್ಳಿ,ವೀರಲಗೊಂದಿ ನಾಗರಾಜು, ಶಿವಕುಮಾರ್ ತಿಮ್ಮಲಾಪುರ ಮತ್ತಿತರರು ಪಾಲ್ಗೊಂಡಿದ್ದರು.