ಕೂಡ್ಲಿಗಿ: ಅಸಂಖ್ಯಾತ ಹುತಾತ್ಮರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ. ಈ ಸ್ವಾತಂತ್ರ್ಯವನ್ನು ನಮ್ಮ ಸ್ವೇಚ್ಛಾಚಾರವಾಗಿ ಬಳಸಿಕೊಂಡು ವ್ಯರ್ಥ ಮಾಡಬಾರದು. ಸ್ವಾತಂತ್ರ್ಯ ಸಮಾಜದ ಕಟ್ಟಕಡೆಯ ಸಮುದಾಯಗಳಿಗೂ, ಜನತೆಗೂ ಧ್ವನಿಯಾಗಬೇಕು ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಭಿಪ್ರಾಯವ್ಯಕ್ತಪಡಿಸಿದರು.
ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಧ್ವಜಾರೋಹಣ ನೆರವೇರಿಸಿದರು. ಕೂಡ್ಲಿಗಿ ಕ್ಷೇತ್ರದ 2024-2025ನೇ ಸಾಲಿನ 96 ವಿಶೇಷ ಚೇತನರಿಗೆ ತ್ರಿಚಕ್ರ ವಾಹನವನ್ನು ಶಾಸಕ ಡಾ. ಶ್ರೀನಿವಾಸ ವಿತರಣೆ ಮಾಡಿದರು.
ಸಾಧಕರಿಗೆ, ಪ್ರಬಂಧ ಸೇರಿದಂತೆ ಇತರ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಧ್ವಜಾರೋಹಣಕ್ಕೂ ಮೊದಲು ಶಾಸಕರು, ತಹಸೀಲ್ದಾರರು ಸೇರಿದಂತೆ ಇತರರು ಮಹಾತ್ಮ ಗಾಂಧೀಜಿ ಚಿತಾಭಸ್ಮವಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಆನಂತರ ತಹಸೀಲ್ದಾರ್ ಧ್ವಜಾರೋಹಣ ನಡೆಸಿದರು, ಶಾಸಕ ಡಾ. ಶ್ರೀನಿವಾಸ ಹಾಗೂ ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ, ತಾಪಂ ಇಒ ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ ಉಪಸ್ಥಿತರಿದ್ದರು. ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ, ಸ್ಥಾಯಿ ಸಮಿತಿ ಅಧ್ಯಕ್ಷ ಶುಕೂರ್ ಹಾಜರಿದ್ದರು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ, ಸಿಪಿಐ ಪ್ರಹ್ಲಾದ ಆರ್. ಚನ್ನಗಿರಿ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಜಿಲಾನ್, ಇತರ ಮುಖಂಡರು, ಗಣ್ಯರು ಉಪಸ್ಥಿತರಿದ್ದರು. ಕೂಡ್ಲಿಗಿ ಪೊಲೀಸರು ಸೇರಿದಂತೆ ಇತರರಿಂದ ಪಥಸಂಚಲನ ನಡೆಯಿತು. ಶಾಲಾಮಕ್ಕಳಿಂದ ದೇಶಭಕ್ತಿ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.