ಗುಡಿಸಾಗರದಲ್ಲಿ 15 ದಿನದಿಂದ ಕೆಟ್ಟಿದ್ದ ಫ್ರೆಷರ್‌ ಫಿಲ್ಟರ್‌!

KannadaprabhaNewsNetwork |  
Published : Sep 12, 2025, 01:00 AM IST
ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮ. | Kannada Prabha

ಸಾರಾಂಶ

ಗುಡಿಸಾಗರದ ಕೆರೆಯಿಂದ ನೀರು ಫಿಲ್ಟರ್‌ ಮಾಡಬೇಕಿರುವ ಫ್ರೆಷರ್‌ ಫಿಲ್ಟರ್‌ ಕೆಟ್ಟಿತ್ತು ಎಂಬುದನ್ನು ನವಲಗುಂದ ಇಒ ಭಾಗ್ಯಶ್ರೀ ಜಾಹಗೀರದಾರ ಅವರು ಒಪ್ಪಿಕೊಂಡಿದ್ದಾರೆ. ಹದಿನೈದು ದಿನಗಳಿಂದ ಫ್ರೆಷರ್‌ ಫಿಲ್ಟರ್‌ ಕೆಟ್ಟಿತ್ತು,. ಅದನ್ನು ಇದೀಗ ಜಿಪಂ ಎಂಜಿನಿಯರಿಂಗ್‌ ವಿಭಾಗದವರು ರಿಪೇರಿ ಮಾಡುತ್ತಿದ್ದಾರೆ ಎಂಬುದನ್ನು ಪತ್ರಿಕೆಗೆ ತಿಳಿಸಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ನವಲಗುಂದ ತಾಲೂಕಿನ ಗುಡಿಸಾಗರದಲ್ಲಿ 15 ದಿನಗಳಿಂದ ಫಿಲ್ಟರ್‌ ಮಾಡದೇ ನೀರು ಸರಬರಾಜು ಮಾಡಲಾಗುತ್ತಿತ್ತೇ? ಇಂತಹದೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ಕಳೆದ ಹದಿನೈದು ದಿನಗಳಿಂದ ಫ್ರೆಷರ್‌ ಫಿಲ್ಡರ್‌ ಕೆಟ್ಟಿತ್ತು. ಹೀಗಾಗಿ ಕೆರೆಯಿಂದ ಓವರ್‌ ಹೆಡ್‌ ಟ್ಯಾಂಕ್‌ಗೆ ನೀರು ಸಾಗಿಸುವ ಮುನ್ನ ಫ್ರೆಷರ್‌ ಫಿಲ್ಟರ್‌ ಮಾಡದೇ ನೇರವಾಗಿ ಓವರ್‌ ಹೆಡ್‌ ಟ್ಯಾಂಕ್‌ ಭರ್ತಿ ಮಾಡಲಾಗುತ್ತಿತ್ತಂತೆ. ಅಲ್ಲಿಂದ ಮನೆ ಮನೆಗೆ ನಲ್ಲಿ ಮೂಲಕ ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.

ಒಪ್ಪಿಕೊಂಡ ಇಒ: ಗುಡಿಸಾಗರದ ಕೆರೆಯಿಂದ ನೀರು ಫಿಲ್ಟರ್‌ ಮಾಡಬೇಕಿರುವ ಫ್ರೆಷರ್‌ ಫಿಲ್ಟರ್‌ ಕೆಟ್ಟಿತ್ತು ಎಂಬುದನ್ನು ನವಲಗುಂದ ಇಒ ಭಾಗ್ಯಶ್ರೀ ಜಾಹಗೀರದಾರ ಅವರು ಒಪ್ಪಿಕೊಂಡಿದ್ದಾರೆ. ಹದಿನೈದು ದಿನಗಳಿಂದ ಫ್ರೆಷರ್‌ ಫಿಲ್ಟರ್‌ ಕೆಟ್ಟಿತ್ತು,. ಅದನ್ನು ಇದೀಗ ಜಿಪಂ ಎಂಜಿನಿಯರಿಂಗ್‌ ವಿಭಾಗದವರು ರಿಪೇರಿ ಮಾಡುತ್ತಿದ್ದಾರೆ ಎಂಬುದನ್ನು ಪತ್ರಿಕೆಗೆ ತಿಳಿಸಿದ್ದಾರೆ.

ಅತ್ತ ಫ್ರೆಷರ್‌ ಫಿಲ್ಟರ್‌ ಕೆಟ್ಟಿದ್ದರಿಂದ ಕೆರೆಯಿಂದ ನೇರವಾಗಿ ಓವರ್‌ ಹೆಡ್‌ ಟ್ಯಾಂಕಿಗೆ ಅಲ್ಲಿಂದ ಮನೆ ಮನೆಗೆ ನೀರು ಸಾಗಿಸಲಾಗಿದೆ.

ಶುದ್ಧವಿಲ್ಲದ ಟ್ಯಾಂಕು: ಇನ್ನು ಗ್ರಾಮದಲ್ಲಿ ಒಂದು ಕೆರೆಯಿದೆ. ಎರಡು ಓವರ್‌ ಹೆಡ್‌ ಟ್ಯಾಂಕ್‌ಗಳಿವೆ. ಎರಡು ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಅದೆಷ್ಟು ವರ್ಷವಾಗಿದೆಯೋ ಏನೋ ಎಂಬುದೇ ನೆನಪಿಲ್ಲ ಎಂದು ಗ್ರಾಮಸ್ಥರೇ ಆರೋಪಿಸುತ್ತಾರೆ. ಇನ್ನು ಕೆರೆಯನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಆ ಕೆಲಸವನ್ನೂ ಮಾಡಿಲ್ಲ. ಇನ್ನು ಈ ಕೆರೆಗೆ ಮಲಪ್ರಭಾ ಕಾಲುವೆಯಿಂದ ನೀರು ಸರಬರಾಜು ಆಗುತ್ತದೆ. ಮಲಪ್ರಭಾ ಕಾಲುವೆಯ ನಿರ್ವಹಣೆಯೂ ಸರಿಯಾಗಿ ನಡೆದಿಲ್ಲ. ಹೀಗಾಗಿ ಅಲ್ಲೂ ಗಿಡಗಂಟೆಗಳು ಸಿಕ್ಕಾಪಟ್ಟೆ ಬೆಳೆದಿವೆ.

ಅತ್ತ ಕಾಲುವೆಯೂ ನಿರ್ವಹಣೆ ಇಲ್ಲ. ಇನ್ನು ಓವರ್‌ ಹೆಡ್‌ ಟ್ಯಾಂಕ್‌ನ್ನೂ ಸ್ವಚ್ಛಗೊಳಿಸಿಲ್ಲ. ಇದರೊಂದಿಗೆ ಫ್ರೆಷರ್‌ ಫಿಲ್ಟರ್‌ ಕೂಡ ಕೆಟ್ಟಿತ್ತು. ಈ ಎಲ್ಲ ಕಾರಣಗಳಿಂದ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗಿದೆ. ಆ ನೀರನ್ನು ಸೇವಿಸಿ ಜನತೆ ಅಸ್ವಸ್ಥಗೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನೂ ಫುಡ್‌ ಪಾಯಿಸನ್‌ ಆಗಿರಬಹುದು ಎಂದು ಹೇಳಲು ಊರಲ್ಲಿ ಸಾಮೂಹಿಕ ಊಟ ಮಾಡುವಂತಹ ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳೂ ನಡೆದಿಲ್ಲ. ಹೀಗಾಗಿ ಕಲುಷಿತ ನೀರಿನ ಸೇವನೆಯಿಂದಲೇ ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

ಜಿಲ್ಲಾಡಳಿತ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ. ಅಲ್ಲಿಂದ ವರದಿ ಬಂದ ಬಳಿಕವೇ ನಿಜಾಂಶ ಗೊತ್ತಾಗುತ್ತದೆ. ಆದರೂ ವರದಿ ಏನಾದರೂ ಬರಲಿ; ಮೊದಲು ಕೆರೆಯನ್ನು ಪೂರ್ಣವಾಗಿ ಖಾಲಿ ಮಾಡಿಸಿ ಸ್ವಚ್ಛಗೊಳಿಸಿ, ಮಲಪ್ರಭಾ ನದಿಯಿಂದ ಮತ್ತೊಮ್ಮೆ ಭರ್ತಿ ಮಾಡಿಸಿ. ಜತೆಗೆ ಮಲಪ್ರಭಾ ಕಾಲುವೆಯ ನಿರ್ವಹಣೆ ಸರಿಯಾಗಿ ಮಾಡಿಸಿ. ಓವರ್‌ ಹೆಡ್‌ ಟ್ಯಾಂಕ್‌ನ್ನು ಆಗಾಗ ಸ್ವಚ್ಛಗೊಳಿಸಬೇಕು. ಫ್ರೆಷರ್‌ ಫಿಲ್ಟರ್‌ ಹಾಳಾಗದಂತೆ, ಆದರೂ ತಕ್ಷಣವೇ ದುರಸ್ತಿ ಮಾಡಿಸಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹ.

ಒಟ್ಟಿನಲ್ಲಿ ಗುಡಿಸಾಗರ ಗ್ರಾಮದಲ್ಲಿ ವಾಂತಿ- ಭೇದಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಆಡಳಿತದ ವಿರುದ್ಧ ಜನರ ಆಕ್ರೋಶ ಮಾತ್ರ ಕೇಳಿ ಬರುತ್ತಿದೆ.

ಸ್ಥಳಾಂತರಗೊಂಡ ಊರು: ಗುಡಿಸಾಗರ ಎಂಬುದು ನವಲಗುಂದ ಗಡಿಯಲ್ಲಿರುವ ಪುಟ್ಟ ಗ್ರಾಮ. ಬರೋಬ್ಬರಿ 3500 ಜನಸಂಖ್ಯೆ ಇದೆ. ಹಾಗೆ ನೋಡಿದರೆ ಒಂದು ಊರಲ್ಲೇ ಎರಡು ಊರುಗಳಿವೆ. ಒಂದು ಹಳೆ ಗುಡಿಸಾಗರವಾದರೆ ಇನ್ನೊಂದು ನವಗುಡಿಸಾಗರ. ಇದು ಪ್ರವಾಹ ಪೀಡಿತ ಗ್ರಾಮ.

ಹಿಂದೆ 2007, 2008, 2009 ಹೀಗೆ ಮೂರು ವರ್ಷಗಳ ಕಾಲ (ನಾಲ್ಕುನಾಲ್ಕು ದಿನ) ಬೆಣ್ಣಿಹಳ್ಳದ ಉಗ್ರಾವತಾರಕ್ಕೆ ಅಕ್ಷರಶಃ ನಡುಗಡ್ಡೆಯಂತಾಗಿತ್ತು. ಹೊರಗಿನ ಸಂಪರ್ಕ ಕಡಿತಗೊಂಡು ಇಡೀ ಊರಿಗೆ ಊರೇ ನಡುಗಡ್ಡೆಯಂತಾಗಿತ್ತು. 2008ರಲ್ಲೇ ಯಡಿಯೂರಪ್ಪ ನೇತೃತ್ವದ ಸರ್ಕಾರ ಗುಡಿಸಾಗರವನ್ನೂ ಆಸರೆ ಯೋಜನೆಯಡಿಯಲ್ಲಿ ಸ್ಥಳಾಂತರ ಮಾಡಿತ್ತು. ಆದರೆ, ಪೂರ್ಣಗ್ರಾಮ ಸ್ಥಳಾಂತರವಾಗಿಲ್ಲ. ಪ್ರವಾಹದಿಂದ ಪೀಡಿತವಾಗಿ ಅರ್ಧ ಊರನ್ನು ಸ್ಥಳಾಂತರ ಮಾಡಿ ನವಗುಡಿಸಾಗರ ಎಂದು ಸರ್ಕಾರ ಘೋಷಿಸಿತ್ತು. ಆಗಿನಿಂದ ನವಗ್ರಾಮದಲ್ಲಿ 215 ಮನೆಗಳು 1500 ಜನಸಂಖ್ಯೆ, ಹಳೇಗುಡಿಸಾಗರದಲ್ಲಿ 300 ಮನೆಗಳು 2000 ಜನಸಂಖ್ಯೆ ಇದೆ. ಎರಡು ಗ್ರಾಮಗಳಿಗೆ ಕುಡಿಯುವ ನೀರಿಗೆ ಒಂದೇ ಕೆರೆ.

ಫ್ರೆಷರ್ ಫಿಲ್ಟರ್‌ 15 ದಿನಗಳಿಂದ ಕೆಟ್ಟಿತ್ತು. ಅದನ್ನೀಗ ರಿಪೇರಿ ಮಾಡಲಾಗುತ್ತಿದೆ. ಸದ್ಯ ಗ್ರಾಮಕ್ಕೆ ಕೆರೆ ನೀರು ಸರಬರಾಜು ಸ್ಥಗಿತಗೊಳಿಸಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನವಲಗುಂದ ತಾಪಂ ಇಒ ಭಾಗ್ಯಶ್ರೀ ಜಾಹಗೀರದಾರ ಹೇಳಿದರು.

ಕೆರೆಯ ನೀರನ್ನು ಖಾಲಿ ಮಾಡಿಸಿ, ಸ್ವಚ್ಛಗೊಳಿಸಿ ಪುನಃ ತುಂಬಿಸಬೇಕು. ಜತೆಗೆ ಓವರ್‌ ಹೆಡ್‌ ಟ್ಯಾಂಕ್‌ ಶುದ್ಧಗೊಳಿಸಬೇಕು. ಮಲಪ್ರಭಾ ಕಾಲುವೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಗುಡಿಸಾಗರ ಗ್ರಾಮದ ಶಿವನಗೌಡ ಕುಲಕರ್ಣಿ ಹೇಳಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ