ತಪಸ್ಸಿನ ಫಲವನ್ನು ಜನಸಾಮಾನ್ಯರಿಗೆ ಧಾರೆಯೆದವರು: ಆರ್.ಅಶೋಕ್

KannadaprabhaNewsNetwork |  
Published : Jan 19, 2024, 01:48 AM IST
18ಕೆಎಂಎನ್ ಡಿ18ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಭಕ್ತಸಂಗಮವನ್ನು ನಿರ್ಮಲಾನಂದನಾಥ ಶ್ರೀಗಳ ಜೊತೆಗೂಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಭೈರವೈಕ್ಯಶ್ರೀಗಳು ಈ ಭೂಮಿಯಲ್ಲಿ ಹುಟ್ಟಿಲ್ಲವೆಂದರೆ ಏನಾಗುತ್ತಿತ್ತೆಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಸಾಧು, ಸಂತರೆಂದರೆ ಕೇವಲ ತನ್ನ ಶಾಂತಿ ಸಮೃದ್ಧಿಗೋಸ್ಕರ ತಪಸ್ಸು ಮಾಡುವುದಲ್ಲ. ತಪಸ್ಸು ಮಾಡಿ ಸಿಕ್ಕ ಫಲವನ್ನು ಜನಸಾಮಾನ್ಯರಿಗೆ ತಲುಪಿಸುವುದನ್ನು ಶ್ರೀಗಳು ತೋರಿಸಿಕೊಟ್ಟರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಪಸ್ಸಿನಿಂದ ದೊರೆತ ಫಲವನ್ನು ಜನಸಾಮಾನ್ಯರಿಗೆ ತಲುಪಿಸುವುದನ್ನು ತೋರಿಸಿಕೊಟ್ಟವರೇ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಬಣ್ಣಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ 79ನೇ ಜಯಂತ್ಯುತ್ಸವ ಮತ್ತು 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಭಕ್ತಸಂಗಮದಲ್ಲಿ ಅವರು ಮಾತನಾಡಿದರು.

ದಿಕ್ಕು, ದೆಸೆ, ಗುರಿ ಯಾವುದೂ ಇಲ್ಲದ ಮತ್ತು ಈ ಸಮಾಜಕ್ಕೆ ಗೌರವ ಇಲ್ಲದ ಕಾಲಘಟ್ಟದಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ದಿಕ್ಕು ತೋರಿಸಿ ಗೌರವ ಸಿಗುವಂತೆ ಮಾಡುವ ಜೊತೆಗೆ ಸಮಾಜಕ್ಕೆ ಶಕ್ತಿಯಾಗಿ ಆತ್ಮಗೌರವ ಹೆಚ್ಚಿಸಿದ್ದಾರೆ ಎಂದರು.

ಭೈರವೈಕ್ಯಶ್ರೀಗಳು ಈ ಭೂಮಿಯಲ್ಲಿ ಹುಟ್ಟಿಲ್ಲವೆಂದರೆ ಏನಾಗುತ್ತಿತ್ತೆಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಸಾಧು, ಸಂತರೆಂದರೆ ಕೇವಲ ತನ್ನ ಶಾಂತಿ ಸಮೃದ್ಧಿಗೋಸ್ಕರ ತಪಸ್ಸು ಮಾಡುವುದಲ್ಲ. ತಪಸ್ಸು ಮಾಡಿ ಸಿಕ್ಕ ಫಲವನ್ನು ಜನಸಾಮಾನ್ಯರಿಗೆ ತಲುಪಿಸುವುದನ್ನು ಶ್ರೀಗಳು ತೋರಿಸಿಕೊಟ್ಟರು ಎಂದು ಹೇಳಿದರು.

ಶ್ರೀಗಳು ಕೇವಲ ವೈದ್ಯಕೀಯ ಕಾಲೇಜುಗಳನ್ನು ಮಾತ್ರ ಸ್ಥಾಪಿಸಿಲ್ಲ. ಹಳ್ಳಿಗಾಡಿನ ಎಲ್ಲ ವರ್ಗದ ಬಡ ಮಕ್ಕಳಿಗೆ ನಗರ ಪ್ರದೇಶಗಳಲ್ಲಿ ಸುಸಜ್ಜಿತ ಹಾಸ್ಟೆಲ್‌ಗಳನ್ನು ನಿರ್ಮಿಸುವ ಮೂಲಕ ಅವರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟು ದೇಶ, ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಯೊಂದಿಗೆ ಬದುಕು ಕಟ್ಟಿಕೊಳ್ಳುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ವಿಶ್ವಮಾನವ ಸಂದೇಶ ಸಾರಿದ್ದ ರಾಷ್ಟ್ರಕವಿ ಕುವೆಂಪು ಅವರೂ ಸಹ ಈ ಮಠಕ್ಕೆ ಬಂದು ಹೋಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಸ್.ಎಂ.ಕೃಷ್ಣ ಸೇರಿ ಹಲವು ಹಿರಿಯ ಮುತ್ಸದ್ದಿಗಳೆಲ್ಲ ಶ್ರೀಮಠದ ಭಕ್ತರೇ. ಆದ್ದರಿಂದಲೇ ನಮ್ಮ ಸಮಾಜಕ್ಕೆ ಗೌರವ ಸಿಕ್ಕಿದೆ ಎಂದರು.

ಅಯೋಧ್ಯೆಯಿಂದ ಬಂದಿದ್ದ ಗೋರಕನಾಥ ಶ್ರೀಗಳು ಆದಿಚುಂಚನಗಿರಿ ಮಠವನ್ನು ಆರಂಭಿಸಿದರು. ಭೈರವೈಕ್ಯ ಶ್ರೀಗಳು ಹಾಕಿರುವ ಮಾರ್ಗದಲ್ಲಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಸಾಗುತ್ತಿದ್ದಾರೆ. ಪರಂಪರೆಯುಳ್ಳ ಈ ಮಠ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ತಿಳಿಸಿದರು.

ಶ್ರೀಗಳು ಒಕ್ಕಲುತನದ ಮಕ್ಕಳಿಗೆ ಇನ್ನಷ್ಟು ಬೆಳಕು ಮತ್ತು ಅವಕಾಶ ಸಿಗುವ ಕೆಲಸ ಮಾಡುತ್ತಿದ್ದಾರೆ. ಭೈರವೈಕ್ಯ ಶ್ರೀಗಳು ಸೂರ್ಯ ಚಂದ್ರರಿರುವರೆಗೂ ನಿರಂತರವಾಗಿರುತ್ತಾರೆ ಎಂದು ತಿಳಿಸಿದರು.

ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಆದಿಚುಂಚನಗಿರಿ ಮಠವನ್ನು ಚಿನ್ನದ ಗರಿಯನ್ನಾಗಿಸಿರುವ ಕೀರ್ತಿ ಭೈರವೈಕ್ಯ ಡಾ.ಬಾಲ ಗಂಗಾಧರನಾಥ ಶ್ರೀಗಳಿಗೆ ಸಲ್ಲುತ್ತದೆ. ಶೋಷಿತ ಸಮುದಾಯದ ಮಕ್ಕಳನ್ನು ಕರೆತಂದು ಅವರಿಗೆ ಸಂಸ್ಕೃತ ವಿದ್ಯೆ ಕಲಿಸುವ ಜೊತೆಗೆ, ಜಾತ್ಯಾತೀತವಾಗಿ ಎಲ್ಲ ವರ್ಗದ ಜನರನ್ನೂ ಶ್ರೀಮಠದ ಭಕ್ತರನ್ನಾಗಿ ಸ್ವೀಕರಿಸಿದ್ದಾರೆ. ಹಳ್ಳಿಗಾಡಿನ ಮಕ್ಕಳಿಗೆ ಅಕ್ಷರ ಜ್ಞಾನ ಕೊಟ್ಟು ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಲು ಗ್ರಾಮೀಣ ಪ್ರದೇಶದಲ್ಲಿಯೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ ಎಂದರು.--------------

18ಕೆಎಂಎನ್ ಡಿ18

ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಭಕ್ತಸಂಗಮವನ್ನು ನಿರ್ಮಲಾನಂದನಾಥ ಶ್ರೀಗಳ ಜೊತೆಗೂಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ