ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

KannadaprabhaNewsNetwork |  
Published : Oct 25, 2026, 01:15 AM IST
3.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ | Kannada Prabha

ಸಾರಾಂಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯು ಸಾಂಗವಾಗಿ ಮುಗಿದಿದೆ. ಅಭ್ಯರ್ಥಿಗಳ ಹಣೆಬರಹವನ್ನು ಶಿಕ್ಷಕ ಮತದಾರರು ಬರೆದಿದ್ದು, ಅದು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯು ಸಾಂಗವಾಗಿ ಮುಗಿದಿದೆ. ಅಭ್ಯರ್ಥಿಗಳ ಹಣೆಬರಹವನ್ನು ಶಿಕ್ಷಕ ಮತದಾರರು ಬರೆದಿದ್ದು, ಅದು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಫಲಿತಾಂಶವನ್ನು ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಇನ್ನು ಎರಡು ದಿನಗಳ ಕಾಲ ಟೆನ್ಷನ್ ನಲ್ಲಿ ಕಾಯುವುದು ಅನಿವಾರ್ಯ. ಗೆಲುವಿಗಾಗಿ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿರುವ ಅಭ್ಯರ್ಥಿಗಳು ಈಗ ದೇವರ ಮೊರೆ ಹೋಗಿದ್ದಾರೆ.

ಡಿಕೆ - ಎಚ್ಡಿಕೆಗೆ ಪ್ರತಿಷ್ಠೆಯ ಪಣ:

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ ಫಲಿತಾಂಶ ಮುಂಬರುವ ಜಿಪಂ - ತಾಪಂ, ಗ್ರಾಪಂ, ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿ ಎಂದು ರಾಜಕೀಯ ನಾಯಕರು ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿಯೇ 36 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಒಳಗೊಂಡಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ - ಬಿಜೆಜಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಸವಾಲಾಗಿದೆ.

ಅದರಲ್ಲೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿರವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಫಲಿತಾಂಶ ಸಾಕಷ್ಟು ಕುತೂಹಲ ಮೂಡಿಸಿದೆ.

ಪುಟ್ಟಣ್ಣ ಪರವಾಗಿ ಸ್ವತಃ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು ಹಾಗೂ ಎ.ಪಿ.ರಂಗನಾಥ್ ಪರವಾಗಿ ಕುಮಾರಸ್ವಾಮಿ, ಆರ್.ಅಶೋಕ್ , ಶಾಸಕರು ಪ್ರಚಾರ ನಡೆಸಿದ್ದಾರೆ. ಅಲ್ಲದೆ, ಉಭಯ ಪಕ್ಷಗಳ ಹಲವು ನಾಯಕರು ಭಾಗಿಯಾಗಿದ್ದಾರೆ.

ದೇವರ ಮೊರೆ ಹೋದ ಅಭ್ಯರ್ಥಿಗಳು-ಬೆಂಬಲಿಗರು:

ಚುನಾವಣೆ ಬಳಿಕ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ. ಫಲಿತಾಂಶ ಪ್ರಕಟವಾಗುವವರೆಗೆ ಟೆನ್ಷನ್ ನಲ್ಲಿ ಕಾಲ ಕಳೆಯುವುದಕ್ಕಿಂತ ದೇವರ ಮೊರೆ ಹೋಗುವುದೇ ಲೇಸು ಎಂಬ ನೆಲೆಯಲ್ಲಿ ಅಭ್ಯರ್ಥಿಗಳು ದೇವರ ದರ್ಶನಕ್ಕೆ ಹೋಗಿದ್ದಾರೆ.

ಪ್ರತಿಯೊಬ್ಬರಿಗೂ ಗೆಲುವಿನ ವಿಶ್ವಾಸ:

ಕಳೆದ ಒಂದು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಅಲೆದಿರುವ ಅಭ್ಯರ್ಥಿಗಳು ತಾವು ಮಾಡಿರುವ ಕಲಸದ ಮೇಲೆ ಭರವಸೆ ಹೊಂದಿದ್ದು, ತಮಗೆ ಗೆಲುವು ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ. ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಹೆಚ್ಚು ವಿಶ್ವಾಸದಲ್ಲಿದ್ದಾರೆ.

2023ರಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಪುಟ್ಟಣ್ಣ, ಇನ್ನು ಮುಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿರುತ್ತೇನೆ ಎಂದು ಘೋಷಿಸಿ ಸ್ಪರ್ಧೆ ಮಾಡಿದ್ದಾರೆ.

ಶಿಕ್ಷಕರ ನಡುವೆ ಹಿಡಿತ ಹೊಂದಿರುವ ಪುಟ್ಟಣ್ಣಗೆ ಈ ಬಾರಿ ಎನ್‌ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಪ್ರಬಲ ಪೈಪೋಟಿ ನೀಡಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದರೆ ಆರನೇ ಬಾರಿ ವಿಜಯದ ಸಾಧನೆ ಮಾಡಿದಂತಾಗುತ್ತದೆ.

ಇನ್ನು ಎನ್ ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಪರವಾಗಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದಾರೆ. ಮತದಾನದ ಕೊನೆ ಘಳಿಗೆವರೆಗೂ ಮಿತ್ರ ಪಕ್ಷಗಳ ಮುಖಂಡರು , ಕಾರ್ಯಕರ್ತರು ಮತಗಟ್ಟೆ ಬಳಿ ಮತದಾರ ಶಿಕ್ಷಕರ ಮನವೊಲಿಸುವ ಕಸರತ್ತು ನಡೆಸುತ್ತಿದ್ದರು. ಈ ಬಾರಿ ರಂಗನಾಥ್ ಗೆಲುವು ಸಾಧಿಸಿದರೆ ಹೊಸ ದಾಖಲೆ ಬರೆದಂತಾಗುತ್ತದೆ.

ಜೋರಾದ ಬೆಟ್ಟಿಂಗ್ :

ಫಲಿತಾಂಶ ಪ್ರಕಟಣೆಗೆ ದಿನಗಣನೆ ಆರಂಭಗೊಂಡಿರುವುದರಿಂದ ಸೋಲು-ಗೆಲುವಿನ ಕುರಿತು ಬೆಟ್ಟಿಂಗ್ ಜೋರಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯ ಬೆಂಬಲಿಗರು ಹಾಗೂ ಪಕ್ಷಗಳ ಮುಖಂಡರು ಪ್ರತಿಯೊಂದು ಮತಗಟ್ಟೆಯ ವಿವರ ತರಿಸಿಕೊಂಡು ಅದನ್ನು ವಿಶ್ಲೇಷಿಸಿ ಇಂತಿಷ್ಟು ಮತ ಬಿದ್ದಿದೆ ಎಂಬ ಖಚಿತ ವಿಶ್ವಾಸ ವ್ಯಕ್ತಪಡಿಸುತ್ತಿರುವುದು ಬೆಟ್ಟಿಂಗ್ ದಂಧೆ ಹೆಚ್ಚಲು ಕಾರಣ. ಅಷ್ಟೇ ಅಲ್ಲದೇ, ತಾವು ಕೆಲಸ ಮಾಡಿದ ಅಭ್ಯರ್ಥಿಯೇ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ನಂಬಿರುವ ಬೆಂಬಲಿತ ಶಿಕ್ಷಕರು, ಗೆದ್ದ ಬಳಿಕ ಅವರಿಂದ ಮಾಡಿಸಿಕೊಳ್ಳಬೇಕಾದ ಕೆಲಸಗಳ ಪಟ್ಟಿ ಹಿಡಿದು ಕಾಯುತ್ತಿದ್ದಾರೆ.

ಎಲ್ಲರ ಚಿತ್ತ ಬೆಂಗಳೂರಿನತ್ತ :

ಬೆಂಗಳೂರಿನ ಪ್ರಾದೇಶಿಕ ಆಯುಕ್ತರೇ ಚುನಾವಣೆಯ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಇದರೊಂದಿಗೆ ಮತ ಎಣಿಕೆ, ಸ್ಟ್ರಾಂಗ್ ರೂಮ್ ಎಲ್ಲವೂ ಬೆಂಗಳೂರಿನಲ್ಲೇ ಇರುವುದರಿಂದ ಎಲ್ಲ ಚಿತ್ತ ಬೆಂಗಳೂರಿನತ್ತ ಇದೆ. ಹೀಗಾಗಿ ಮತ ಎಣಿಕೆ ದಿನವಾದ ಅ.27 ಬೆಂಗಳೂರಿಗೆ ತೆರಳಲಿರುವ ಶಿಕ್ಷಕರಿಗೆ ಕಾರು, ಪೆಟ್ರೋಲ್ ಕಾಸು, ಊಟ ತಿಂಡಿ ವ್ಯವಸ್ಥೆಗಳು ಭರ್ಜರಿಯಾಗಿ ನಡೆಯುತ್ತಿರುವುದು ಚುನಾವಣಾ ಬಳಿಕದ ಮತ್ತೊಂದು ವಿಶೇಷ.

ಶಿಕ್ಷಕರ ಕ್ಷೇತ್ರ ಚುನಾವಣೆ ಮುಗಿದಿದೆ. ಫಲಿತಾಂಶಕ್ಕಾಗಿ ನಾವೂ ಕುತೂಹಲದಿಂದ ಕಾಯುತ್ತಿದ್ದೇವೆ. ಯಾರು ಗೆಲ್ಲುತ್ತಾರೆ -ಸೋಲುತ್ತಾರೆ ಎಂಬುದನ್ನು ಕಾದು ನೋಡಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದವರಿಗೆ ಮತ ಹಾಕಿದ್ದೇನೆ.

- ಕೆಂಪರಾಜು, ಮತದಾರ ಶಿಕ್ಷಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಗೆದ್ದ ಸಿರಿಗೆರೆಯ ಎಂಟೆಕ್ ಪದವೀಧರ!
ಎನ್‌ಸಿಡಿ ತಪಾಸಣೆಯಲ್ಲಿ ಚಿಕ್ಕಮಗಳೂರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಯು.ಟಿ. ಖಾದರ್ ಅಭಿನಂದನೆ