
ಕನ್ನಡಪ್ರಭ ವಾರ್ತೆ ದಾವಣಗೆರೆ
ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಹಾಗೂ ಕಾಶಿ ಪೀಠದ ಜಗದ್ಗುರುಗಳು ಒಂದೂವರೆ ದಶಕದ ನಂತರ ಒಂದೇ ವೇದಿಕೆಯಲ್ಲಿ ದರ್ಶನ ನೀಡಲಿರುವ ಐತಿಹಾಸಿಕ ಕ್ಷಣಗಳಿಗಾಗಿ ದಾವಣಗೆರೆ ಸೇರಿದಂತೆ ರಾಜ್ಯ, ಪರ ರಾಜ್ಯಗಳಿಂದ ಬಂದಿದ್ದ ಶಿವಾಚಾರ್ಯರು, ಸಹಸ್ರಾರು ಭಕ್ತರು ಕುತೂಹಲದಿಂದ ಕಾಯುತ್ತಿದ್ದರು. ಈ ಅಮೃತ ಕ್ಷಣಗಳಿಗೆ ರೇಣುಕಾ ಮಂದಿರ, ದಾವಣಗೆರೆ ಮಹಾನಗರ ಸಾಕ್ಷಿಯಾಯಿತು.
ವೇದಿಕೆಗೆ ಪಂಚ ಪೀಠಾಧೀಶರು ಬರುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಸೇರಿದಂತೆ ಅನೇಕರು ಆಶೀರ್ವಾದ ಪಡೆದು, ತಮಗೆ ಮೀಸಲಿದ್ದ ಆಸನಗಳಲ್ಲಿ ಆಸೀನರಾದರು.ಶೃಂಗ ಸಮ್ಮೇಳನದ ಹೆಸರಿನಲ್ಲಿ ಪಂಚ ಪೀಠಾಧೀಶರು ಒಂದೇ ವೇದಿಕೆ ಅಲಂಕರಿಸುವ ಮೂಲಕ ಸಹಸ್ರಾರು ಶಿವಾಚಾರ್ಯ ಸ್ವಾಮೀಜಿಗಳಲ್ಲಿದ್ದ ಗೊಂದಲಗಳಿಗೂ ತೆರೆ ಎಳೆದರು. ಇತ್ತ ವೀರಶೈವ ಲಿಂಗಾಯತ ಸಮಾಜ ಬಾಂಧವರಲ್ಲಿದ್ದ ಅಳುಕು, ಆತಂಕವನ್ನೂ ಪಂಚ ಪೀಠಾಧೀಶರು ನಿವಾರಣೆ ಮಾಡಿ, ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಪಂಚಪೀಠಾಧೀಶರು ತಮ್ಮ ಶಕ್ತಿಯನ್ನು ಧಾರೆ ಎರೆದರು.
ಮಹಾಸಭಾ ಪರವಾಗಿ ಅಭಿನಂದನೆ- ಶಂಕರ ಬಿದರಿ:
ನಮ್ಮ ಸಮಾಜವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಮ್ಮೇಳನ ಮುನ್ನುಡಿ ಬರೆದಿದೆ. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಲು ಸಮ್ಮೇಳನ ಮಹತ್ತರ ಹೆಜ್ಜೆಯಾಗಬೇಕು. ನಮ್ಮಲ್ಲಿ ಮೂರು ವರ್ಗಗಳಿವೆ. ಗುರು ವರ್ಗ, ಬಸವಾದಿ ಶರಣರ ವಿರಕ್ತ ವರ್ಗ, ಶರಣ ಬಸವೇಶ್ವರರ ಶರಣ ವರ್ಗ. ಮೂರು ವರ್ಗಗಳನ್ನು ಸೇರಿಸುವುದೇ ಮಹಾಸಭಾದ ಮಹಾಸಂಕಲ್ಪವಾಗಿದೆ. ಈ ದಿಶೆಯಲ್ಲಿ ಪಂಚ ಪೀಠಾಧೀಶರನ್ನು ಒಂದೇ ವೇದಿಕೆಗೆ ತರುವ ಮೊದಲ ಪ್ರಯತ್ನದಲ್ಲಿ ಮಹಾಸಭಾ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಯಾವ್ಯಾವ ಪಂಗಡಗಳಿಗೆ ಮೀಸಲಾತಿ ದೊರೆಯಬೇಕೋ ಅಂತಹ ಮೀಸಲಾತಿ ದೊರೆಯಬೇಕು. ನಮ್ಮ ಮುಖಂಡರು ಕೇಂದ್ರ, ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆಯಾಗುತ್ತಿದೆ. ಪ್ರತಿಯೊಂದು ಕ್ರೈಸ್ತ ಕುಟುಂಬ ತಮ್ಮ ವರ್ಷದ ಗಳಿಕೆಯಲ್ಲಿ ಶೇ.10ರಷ್ಟನ್ನು ಧರ್ಮ ಕಾರ್ಯಕ್ಕೆ ನೀಡುತ್ತದೆ. ಜೈನರು ಸಹ ಶೇ.10, ಮುಸ್ಲಿಮರು ಶೇ.2ರಷ್ಟು ತಮ್ಮ ಸಮಾಜಕ್ಕೆ ನೀಡುತ್ತಾರೆ. ಅದೇ ರೀತಿ ವೀರಶೈವ ಲಿಂಗಾಯತ ಸಮಾಜವೂ ಪ್ರತಿ ವರ್ಷ ತಮ್ಮ ವರ್ಷದ ಆದಾಯದ ಶೇ.2ರಷ್ಟನ್ನು ಸಮಾಜದ ಕಾರ್ಯ, ಧಾರ್ಮಿಕ ಚಟುವಟಿಕೆಗೆ ನೀಡಬೇಕು ಎಂದು ಮನವಿ ಮಾಡಿದರು.
-ಶಂಕರ ಬಿದರಿ, ಮುಖಂಡ ವೀರಶೈವ ಲಿಂಗಾಯತ ಸಮಾನಾರ್ಥಕ ಪದ, ಎರಡೂ ಒಂದೇ. ಇದನ್ನ ಅಖಿಲ ಭಾರತ ವೀರಶೈವ ಮಹಾಸಭಾ 2017ರಲ್ಲೇ ಒಕ್ಕೊರಲಿನಿಂದ ಒಪ್ಪಿದೆ. ಇನ್ನು ಮುಂದೆ ವೀರಶೈವ ಅಂದರೂ ಒಂದೇ, ಲಿಂಗಾಯತ ಅಂದರೂ ಒಂದೇ. ಇದು ಯಾವ ಕಾಲದಲ್ಲೂ ಪುನರ್‌ವಿಮರ್ಶೆಗೆ ಒಳಪಡುವುದಿಲ್ಲ.
- - -
- - -
-21ಕೆಡಿವಿಜಿ11: ದಾವಣಗೆರೆಯಲ್ಲಿ 16 ವರ್ಷಗಳ ನಂತರ ಒಂದಾಗಿ ಪಂಚ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನಕ್ಕೆ ಹಾಜರಾಗುವ ಮುನ್ನ ಪೂಜೆ ಸಲ್ಲಿಸಿದ ನಂತರ ಪಂಚ ಪೀಠಾಧೀಶರು ಸಭಾಂಗಣದ ವೇದಿಕೆಯನ್ನೇರುವ ಮುನ್ನ ಭಕ್ತರಿಗೆ ದರ್ಶನ ಕಲ್ಪಿಸಿದರು.