ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ.3ರಷ್ಟು ಸ್ವಯಂ ಘೋಷಿತ ಆಸ್ತಿ ತೆರಿಗೆ(ಎಸ್‌ಎಎಸ್) ಹೆಚ್ಚಳಕ್ಕೆ ಪರಿಷತ್ ಸಭೆ ತೀರ್ಮಾನಿಸಿದೆ. ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಪರಿಷ್ಕೃತ ಮಾರುಕಟ್ಟೆ ದರಗಳನ್ನು ಅಳವಡಿಸಿ ಪರಿಷ್ಕೃತ ಆಸ್ತಿ ತೆರಿಗೆ ವಸೂಲಿ ಮಾಡಬೇಕು ಎಂಬ ಸರ್ಕಾರದ ನಿಯಮದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಈ ನಿರ್ಣಯ ಕೈಗೊಳ್ಳಲಾಯಿತು. ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರು ತೆರಿಗೆ ಪರಿಷ್ಕರಣೆ ಕುರಿತ ಕಾರ್ಯಸೂಚಿ ಮಂಡಿಸಿದರು.ಪಾಲಿಕೆ ವ್ಯಾಪ್ತಿಯಲ್ಲಿ 2023-24ನೇ ಸಾಲಿಗೆ ಹೊಸ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಅಳವಡಿಸಿ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜನವರಿ ತಿಂಗಳಿನಿಂದ ತೆರಿಗೆದಾರರು 2024-25ನೇ ಸಾಲಿನ ತೆರಿಗೆಯನ್ನು ಮುಂಗಡವಾಗಿ ಪಾವತಿಸಲು ಆಸಕ್ತಿ ವಹಿಸಿರುವುದರಿಂದ ಆನ್‌ಲೈನ್ ತಂತ್ರಾಂಶದಲ್ಲಿ ಪರಿಷ್ಕೃತ ಮಾರುಕಟ್ಟೆಮೌಲ್ಯ ಬಳಸಿ ಮುಂಗಡ ಪಾವತಿಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಮುಖ್ಯ ಸಚೇತಕರು ತಿಳಿಸಿದರು.ಅಣಬೆ ಫ್ಯಾಕ್ಟರಿ ಮುಚ್ಚಿಸುವ ಅಧಿಕಾರ ಇದೆಯೇ?: ವಾಮಂಜೂರಿನ ತಿರುವೈಲ್‌ನ ಅಣಬೆ ಫ್ಯಾಕ್ಟರಿ ಕುರಿತಂತೆ ಕಳೆದ ಐದಾರು ತಿಂಗಳಿನಿಂದ ಉನ್ನತ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಚರ್ಚೆ, ಸಭೆಯಾಗಿದೆ. ಮಂಗಳೂರು ಪಾಲಿಕೆ ಆಡಳಿತಕ್ಕೆ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರ ಇದೆಯೇ? ಕಳೆದ ಸಭೆಯಲ್ಲಿ ಮೇಯರ್ ನಿರ್ಣಯ ಫಲಪ್ರದವೇ ಎಂದು ಸಭೆಯ ಆರಂಭದಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ ಪ್ರಶ್ನಿಸಿದರು.ವಿಪಕ್ಷ ಸದಸ್ಯ ಎ.ಸಿ. ವಿನಯರಾಜ್ ಮಾತನಾಡಿ, 60 ಸದಸ್ಯರ ಅನುಮತಿ ಎಂಬ ನಿರ್ಣಯದಿಂದ ವಿಪಕ್ಷ ಸದಸ್ಯರ ಹೆಸರನ್ನು ಕಡತದಿಂದ ತೆಗೆಯಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಕೆಲಹೊತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಪಾಲಿಕೆ ಆಯುಕ್ತ ಆನಂದ್ ಮಾತನಾಡಿ, ಕೆಲವು ಷರತ್ತುಗಳನ್ನು ಅನ್ವಯಿಸುವಂತೆ ಮಾಡಿ ಅದು ಪಾಲನೆಯಾಗುತ್ತಿರುವ ಬಗ್ಗೆಯೂ ಜಿಲ್ಲಾಧಿಕಾರಿ ಮಟ್ಟದಲ್ಲಿ ವರದಿ ಸಲ್ಲಿಕೆಯಾಗಿದೆ. ಈ ನಡುವೆ ವಿಷಯ ನ್ಯಾಯಾಲಯದಲ್ಲೂ ಇದೆ. ಈ ಸಂದರ್ಭ ಪಾಲಿಕೆಯಿಂದ ಈ ಬಗ್ಗೆ ನಿರ್ಣಯ ಮಾಡಿದರೆ ಕಾನೂನಿನಲ್ಲಿ ಪಾಲಿಕೆಗೆ ಮುಜಗರ ಆಗುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತದೆ ಎಂದರು.ಉಪ ಮೇಯರ್ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಭರತ್ ಕುಮಾರ್, ಗಣೇಶ್ ಇದ್ದರು. ಜಲಸಿರಿ ಪ್ರಾಯೋಗಿಕ ಹಂತದಲ್ಲಿ 1 ಗಂಟೆಯೂ ನೀರಿಲ್ಲ!: ಮಂಗಳೂರು ನಗರಕ್ಕೆ ವಾರದಲ್ಲಿ 24 ಗಂಟೆಯೂ ನೀರು ಪೂರೈಕೆಗೆ ಕೈಗೊಳ್ಳಲಾದ ಜಲಸಿರಿ ಯೋಜನೆ ಪ್ರಾಯೋಗಿಕ ಹಂತದಲ್ಲೇ ವಿಫಲವಾಗಿರುವ ಆರೋಪ ಸದಸ್ಯರಿಂದ ವ್ಯಕ್ತವಾಯಿತು.
ಜಲಸಿರಿ ಯೋಜನೆಯ ಪೈಲಟ್ ಯೋಜನೆಯೇ ವಿಫಲವಾಗಿದೆ ಎಂಬ ಆಕ್ಷೇಪ ಸದಸ್ಯರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಫೆ.8ರಂದು ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ಮೇಯರ್ ನಿರ್ಧರಿಸಿದರು.ಈ ಸಂದರ್ಭ ಸದಸ್ಯ ನವೀನ್ ಡಿಸೋಜಾ ಮಾತನಾಡಿ, ಶಿವಬಾಗ್, ವಾಸ್‌ಲೇನ್, ಅಥೆನಾ ಈ ಭಾಗದಲ್ಲಿ ಹಿಂದಿನ ವ್ಯವಸ್ಥೆಯಲ್ಲಿ ದಿನಕ್ಕೆ 10 ಗಂಟೆ ನೀರು ಬರುತ್ತಿತ್ತು. ಆದರೆ ಜಲಸಿರಿ ವ್ಯವಸ್ಥೆಯಡಿ 24 ಗಂಟೆ ನೀರು ವಾರ್ಡ್‌ಗೆ ನೀರು ಬರುವುದು 1 ಗಂಟೆ ಮಾತ್ರ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ವಿನಯರಾಜ್ ಮಾತನಾಡಿ, 2 ವರ್ಷದಿಂದ ಪೈಲಟ್ ಎಂದು ಹೇಳಿ ಇನ್ನೂ ನೀರು ಪೂರೈಕೆ ಆಗಿಲ್ಲ. ಝೋನ್‌ಗಳನ್ನು ಇನ್ನೂ ಗುರುತಿಸಲಾಗಿಲ್ಲ. ಅಧಿಕಾರಿಗಳು ವಾರ್ಡ್‌ನ ಸದಸ್ಯರ ಜತೆ ಸಮನ್ವಯತೆಯನ್ನೇ ಹೊಂದಿಲ್ಲ. ಆದರೆ ಇದ್ಯಾವುದೂ ಆಗುತ್ತಿಲ್ಲ. ಜಲಸಿರಿ ನೀರು ಪೂರೈಕೆಗಾಗಿ ಅಡ್ಯಾರ್‌ನಲ್ಲಿ 125 ಕೋಟಿ ರು. ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ (ಡಬ್ಲ್ಯುಟಿಪಿ) ಮಾಡಬೇಕಿದೆ. ಆದರೆ ಅಲ್ಲಿಂದ ನೀರನ್ನು ಪೂರೈಕೆ ಮಾಡುವ ಪೈಪ್‌ಲೈನ್ ಬಗ್ಗೆ ಡಿಪಿಆರ್ ಯೋಜನೆಯಲ್ಲಿ ಸೇರಿಸಿಲ್ಲ ಎಂದರು.ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರೂ ದನಿಗೂಡಸಿ, 2 ವರ್ಷಗಳಿಂದ ಈ ಯೋಜನೆಯ ಡೆಪ್ಯುಟಿ ಪ್ರಾಜೆಕ್ಟ್ ನಿರ್ದೇಶಕರು ಉತ್ತರದಿಂದ ನುಣುಚಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರಿಗೆ ಪಾವತಿ ಮಾಡುವುದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಆಯುಕ್ತ ಆನಂದ್ ಪ್ರತಿಕ್ರಿಯಿಸಿ, ಆ ಭಾಗಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.ಸದನದ ಬಾವಿಯಲ್ಲಿ ಮಲಗಿ ಪ್ರತಿಭಟನೆ: ಜಲಸಿರಿಯ ಪೈಲಟ್ ಯೋಜನೆಯಡಿ ತಮ್ಮ ವಾರ್ಡ್‌ನಲ್ಲಿ 24 ಗಂಟೆ ನೀರಿನ ಭರವಸೆಯ ಬದಲಿಗೆ ಬರುತ್ತಿರುವುದು 1 ಗಂಟೆ ನೀರು ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಸಮಸ್ಯೆಗೆ ಪರಿಹಾರ ಬೇಕು ಎಂದು ಒತ್ತಾಯಿಸಿ ಸದಸ್ಯ ನವೀನ್ ಡಿಸೋಜಾ ಅವರು ಮೇಯರ್ ಪೀಠದ ಎದುರು ಸದನದ ಬಾವಿಗಿಳಿದು ಮಲಗಿ ಪ್ರತಿಭಟಿಸಿದ ಘಟನೆಗೆ ಪಾಲಿಕೆ ಸಭೆ ಸಾಕ್ಷಿಯಾಯಿತು. ವಿಪಕ್ಷದ ನಾಯಕ ಸೇರಿದಂತೆ ಸದಸ್ಯರು ಕೂಡಾ ಮೇಯರ್ ಪೀಠದ ಎದುರು ಪ್ರತಿಭಟಿಸಿದರು.