ಕನ್ನಡಪ್ರಭ ವಾರ್ತೆ ಯಮಕನಮರಡಿ
ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಆಸ್ತಿ ಅಂತಸ್ತು ಮಾಡುತ್ತಿರುವ ಇಂದಿನ ಕಾಲದಲ್ಲಿ ಸೀಮಿಲಕ್ಷ್ಮೀದೇವಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಾ ನಿವಾಸ ಕಟ್ಟಲು ಭೂದಾನಿಗಳ ಉದ್ದಾರತೆ ಮೆಚ್ಚುವಂತದ್ದು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.ಸಮೀಪದ ಕರಗುಪ್ಪಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಸೀಮಿಲಕ್ಷ್ಮೀದೇವಿ ಯಾತ್ರಾ ನಿವಾಸ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿಯವರು ತಮ್ಮ ಶಾಸಕರ ಅನುದಾನದಲ್ಲಿ ನೀಡಿರುವ ₹25 ಲಕ್ಷಗಳ ವೆಚ್ಚದಲ್ಲಿ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿದೆ. ಕಲ್ಯಾಣ ಮಂಟಪ ನಿಮಾಣಕ್ಕಾಗಿ ₹50 ಲಕ್ಷಗಳ ಶಾಸಕರ ಅನುದಾನದಲ್ಲಿ ಮಂಜೂರಾಗಿದೆ. ಈ ಭಾಗದಲ್ಲಿ ಸಚಿವರು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಸುಸಜ್ಜಿತವಾದ ಈ ಯಾತ್ರಾ ನಿವಾಸದ ಸದ್ಭಕ್ತರು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅಂಕಲಗಿ-ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮಸಿದ್ದೇಶ್ವರ ವಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಠಮಾನ್ಯಗಳ ಬಗ್ಗೆ ದೇವಸ್ಥಾನಗಳ ಬಗ್ಗೆ ಅಪಾರ ಕಾರಳಜಿ ಹೊಂದಿ ಅವುಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸತೀಶ ಜಾರಕಿಹೊಳಿಯವರ ಕಾರ್ಯವು ಅತ್ಯಂತ ಶ್ಲಾಘನೀಯವಾದದು. ಇತಿಹಾಸದ ಪೂರ್ಣ ಜ್ಞಾನ ಹೊಂದಿರುವ ಸಚಿವ ಸತೀಶ ಜಾರಕಿಹೊಳಿಯವರು ಜನಸೇವೆಯೇ ತಮ್ಮ ಸಾಧನೆ ಎಂದು ತಿಳಿದು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಶಾಸಕರು ಯಮಕನಮರಡಿ ಮತಕ್ಷೇತ್ರಕ್ಕೆ ದೊರಕಿರುವುದು ಸೌಭಾಗ್ಯವೇ ಸರಿ ಎಂದು ಬಣ್ಣಿಸಿದರು.ನಿವೃತ್ತ ಶಿಕ್ಷಕ ಗುರಪ್ಪ ಮಾಳಗಿ ಮಾತನಾಡಿ, ಕುಂದರನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ಸೀಮಿಲಕ್ಷ್ಮೀದೇವಿ ತನ್ನ ಲೀಲೆ ಪವಾಡಗಳಿಂದ ಭಕ್ತರ ಬೇಡಿಕೆಗಳಿಗೆ ಅನುಗ್ರಹ ನೀಡುತ್ತ ಪ್ರಖ್ಯಾತಿ ಹೊಂದಿದ್ದಾಳೆ. ಎಲ್ಲ ಭಕ್ತರಿಗೆ ರಕ್ಷಣೆ ನೀಡುತ್ತಾಳೆ ಎಂದು ತಿಳಿಸಿದರು.
ಬಸ್ಸಾಪೂರ ಗವಿಮಠದ ಬಾಲಸಿದ್ದೇಶ್ವರ ದೇವರು ಸಮ್ಮುಖ ವಹಿಸಿದ್ದರು. ಈ ವೇಳೆಯಲ್ಲಿ ಸಚಿವ ಸತೀಶ ಜಾರಕಿಹೊಳಿಯವರ ಆಪ್ತ ಸಹಾಯಕರಾದ ಮಾರುತಿ ಗುಟಗುದ್ದಿ, ಲಗಮಣ್ಣಾ ಪಣಗುದ್ದಿ, ಕರಗುಪ್ಪಿ ಗ್ರಾಮದ ಗಣ್ಯರಾದ ಮಲಗೌಡ ಪಾಟೀಲ, ಕರಗುಪ್ಪಿ ಗ್ರಾಪಂ ಅಧ್ಯಕ್ಷ ಸುಮಿತ್ರಾ ಜೋರ್ಲಿ, ಡಾ.ಪ್ರವೀಣ ಪಾಯನ್ನವರ, ಮಲ್ಲಪ್ಪ ನಾಯಿಕ, ಗಂಗಪ್ಪ ಕಂಟಿಕಾರ, ಲಗಮೋಜಿ ಪೂಜೇರಿ, ಲಗಮಣ್ಣಾ ಪೂಜೇರಿ, ಸೋಮಲಿಂಗ ಜೋರ್ಲಿ, ಚಂದ್ರು ಜೋರ್ಲಿ, ಕಮಿಟಿಯ ಸರ್ವ ಸದಸ್ಯರು ಪ್ರಮುಖರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ದಾನ ನೀಡಿದ ಭೂದಾನಿಗಳಾದ ಸಂತೋಷ ಸೋಮಲಿಂಗ ಸಣ್ಣಸಂಕಪ್ಪಗೋಳ (ಸಾ. ಯಲ್ಲಾಪೂರ ಇವರು 10 ಗುಂಟೆ), ಮಲ್ಲಿಕಾರ್ಜುನ ಸಿದ್ದಪ್ಪ ಪಾಟೀಲ, ಚನ್ನಬಸಪ್ಪ ಬ.ಪಾಟೀಲ, (4 ಗುಂಟೆ) ಇವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸುತ್ತ-ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಇದ್ದರು. ಮಹಾಲಕ್ಷ್ಮೀದೇವಿ ಹಾಗೂ ಸೀಮಿದೇವಿ ಅಭಿಷೇಕ ಪೂಜೆ ನಂತರ ನೂತನ ಯಾತ್ರಾ ನಿವಾಸದ ವಾಸ್ತು ಹೋಮ ಹವನ ನಡೆಯಿತು. ಸರ್ವ ಪಲ್ಲಕ್ಕಿಗಳ ಆಗಮನ ಮತ್ತು ಸುಮಂಗಲಿಯರಿಂದ ಬುತ್ತಿಯ ಸೇವೆ ನಡೆಯಿತು.