ಕನ್ನಡಪ್ರಭ ವಾರ್ತೆ ತುರುವೇಕೆರೆ
ತುರುವೇಕೆರೆ ತಾಲೂಕಿನ ಜೀವನದಿಯಂತಿರುವ ಮಲ್ಲಾಘಟ್ಟದ ಕೆರೆಯ ಒಡಲು ವಿಷಯುಕ್ತವಾಗುತ್ತಿದೆ. ಈ ಕೆರೆಯ ನೀರು ತುರುವೇಕೆರೆ ಪಟ್ಟಣಿಗರ ಜೀವಸೆಲೆಯಾಗಿದೆ. ಇಲ್ಲಿಂದಲೇ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರನ್ನು ಒದಗಿಸುವ ಈ ಕೆರೆಯ ನೀರು ಈಗ ಕಲುಷಿತವಾಗುತ್ತಿದೆ.ಈ ಕೆರೆಯನ್ನು ಗಂಗಾಕ್ಷೇತ್ರ ಎನ್ನುತ್ತಾರೆ. ಹಲವಾರು ಗ್ರಾಮಗಳ ದೇವತೆಗಳನ್ನು ಈ ಕೆರೆಯ ಬಳಿ ತಂದು ಪುಣ್ಯ ಸ್ನಾನ ಮಾಡಿಸುವುದು ವಾಡಿಕೆ. ಈ ಕೆರೆ ಬಳಿಗೆ ಕರೆ ತರುವ ದೇವರುಗಳ ವಿಗ್ರಹಗಳ ಮೇಲಿರುವ ಬಟ್ಟೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ದೇವರೊಂದಿಗೆ ಬರುವ ಭಕ್ತರು ಕೆರೆಗೆ ಹಾಕುತ್ತಾರೆ. ಈ ಬಟ್ಟೆಗಳನ್ನು ಕೆರೆಗೆ ಅರ್ಪಿಸಬೇಕು ಎಂಬ ನಂಬಿಕೆ ಅನಾದಿಕಾಲದಿಂದ ಇದೆ. ಆದರೆ ಇದೇ ಪದ್ಧತಿ ಇಂದು ಕುಡಿಯುವ ನೀರಿಗೆ ಕಂಟಕವಾಗಿದೆ.
ಈ ಕೆರೆಗೆ ಪೂಜೆ ಸಲ್ಲಿಸಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿ ಇಲ್ಲಿಗೆ ಮಕ್ಕಳಿಗಾಗಿ ಹರಕೆ ಹೊತ್ತವರು ಬಾಗಿನ ಅರ್ಪಿಸಿ ಕೆರೆಗೆ ತಾವು ತಂದಿರುವ ಸೀರೆ, ರವಿಕೆ ಕಣ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಕೆರೆಗೆ ಅರ್ಪಿಸುತ್ತಾರೆ. ಇದು ಕುಡಿಯುವ ನೀರಿಗೆ ಮತ್ತು ನೀರಿನಲ್ಲಿರುವ ಜಲಚರ ಪ್ರಾಣಿಗಳಿಗೆ ಅನಾಹುತವನ್ನು ತಂದಿದೆ.ಕೆರೆಯಲ್ಲಿ ಸಾವಿರಾರು ಸೀರೆಗಳು, ಬಾಳೆ ಕಂದು, ಮೂರ್ತಿ ಭಂಗವಾಗಿರುವ ಹಳೆ ದೇವರ ವಿಗ್ರಹಗಳು, ಮಾವಿನಸೊಪ್ಪು. ಎಣ್ಣೆ, ತೆಂಗಿನ ಕಾಯಿ, ಎಳನೀರು ಬುರುಡೆ ಸೇರಿದಂತೆ ವಿವಿಧ ಕಲ್ಮಶಗಳು ಗಂಗಾದೇವಿಯ ಒಡಲು ಸೇರುತ್ತಿದೆ. ಈ ಕೆರೆ ತುಂಬಿದರೆ ಕೆರೆಯ ಒಳಗೆ ಹಾಕಿರುವ ಎಲ್ಲಾ ಕಲ್ಮಶಗಳು ಕೋಡಿ ಬಿದ್ದ ಸಂದರ್ಭದಲ್ಲಿ ಕೊಚ್ಚಿ ಹೋಗುತ್ತದೆ. ಆದರೆ ಈಗ ನೀರು ತುಂಬದಿರುವ ಕಾರಣ ಕೆರೆಯ ತಟದಲ್ಲಿ ಸಾವಿರಾರು ವಸ್ತುಗಳು ಕೊಳೆತು ನಾರುತ್ತಿವೆ. ಇದು ಕೆರೆಯ ನೀರನ್ನು ಸೇರಿ ನೀರೂ ಸಹ ಕೊಳೆಯುತ್ತಿದೆ. ದುರ್ವಾಸನೆಗೆ ಕಾರಣವಾಗಿದೆ. ಈ ನೀರಿನಲ್ಲಿ ಸಾವಿರಾರು ಮಂದಿ ಈಜುತ್ತಾರೆ. ಸ್ನಾನ ಮಾಡುತ್ತಾರೆ, ಬಟ್ಟೆ ಬಗೆಯುತ್ತಾರೆ. ಇಲ್ಲಿಂದಲೇ ಸಾವಿರಾರು ಎಕರೆ ಜಮೀನಿಗೆ ನೀರನ್ನೂ ಹಾಯಿಸಲಾಗುತ್ತಿದೆ. ಇಂತಹ ನೀರನ್ನು ಕುಡಿಯುವುದಾದರೂ ಹೇಗೆ ಎಂಬ ಆತಂಕ ಮನೆ ಮಾಡಿದೆ.
ಬೇಜವಾಬ್ದಾರಿ:ಇದು ಗಂಗಾ ಕ್ಷೇತ್ರ. ದೇವರುಗಳಿಗೆ ಪುಣ್ಯ ಸ್ನಾನ ಮಾಡಿಸುವ ಸಂಧರ್ಭದಲ್ಲಿ ಕಲ್ಮಶಗಳನ್ನು ಈ ಕೆರೆಗೆ ಬಿಸಾಡುವ ಬದಲು ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ತೊಟ್ಟಿ ಮಾಡುವ ಅವಶ್ಯಕತೆ ಇದೆ. ಈ ಕೆರೆಯಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಬಾರದೆಂದು ಎಚ್ಚರಿಕೆಯ ನಾಮಫಲಕವನ್ನೂ ಸಹ ಹಾಕಲಾಗಿದೆ. ಆದರೂ ಸಹ ಯಾರೂ ಸಹ ಕ್ಯಾರೇ ಅನ್ನುತ್ತಿಲ್ಲ. ಈ ಕೆರೆ ಹೇಮಾವತಿ ಇಲಾಖೆ ಅಡಿ ಬರುತ್ತದೆ. ಈ ಕೆರೆಯ ಅಚ್ಚುಕಟ್ಟಿನ ಜವಾಬ್ದಾರಿಯೂ ಸಹ ಈ ಇಲಾಖೆಗೆ ಸೇರಿದೆ. ಈ ಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಪ್ರತಿ ದಿನ ಸಾವಿರಾರು ಮಂದಿ ಇಲ್ಲಿಯ ವೈಭವವನ್ನು ವೀಕ್ಷಿಸಲು ಆಗಮಿಸುತ್ತಾರೆ. ಲಕ್ಷಾಂತರ ರುಪಾಯಿ ಆದಾಯ ಬರಲಿದೆ. ಈ ಕೆರೆಯ ಪ್ರದೇಶ ಆನೇಕೆರೆ ಗ್ರಾಮ ಪಂಚಾಯಿತಿಗೂ ಬರಲಿದೆ. ಅಲ್ಲಿನ ಸ್ವಚ್ಛತೆ ಸೇರಿದಂತೆ ವಿವಿಧ ಜವಾಬ್ದಾರಿಗಳೂ ಈ ಗ್ರಾಮ ಪಂಚಾಯಿತಿಯದ್ದಾಗಿದೆ.
ತುರುವೇಕೆರೆ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿರುವುದರಿಂದ ಪಟ್ಟಣದ ಪಂಚಾಯಿತಿಗೂ ಜವಾಬ್ದಾರಿ ಇದೆ. ಮೂರು ಇಲಾಖೆಯವರೂ ಮನಸ್ಸು ಮಾಡಿ ಕೆರೆ ಸ್ವಚ್ಛಗೊಳಿಸಲು ಸೂಕ್ತ ಕ್ರಮದ ಅತ್ಯಂತ ತುರ್ತು ಆಗಬೇಕಿದೆ. ಇದೇ ಪ್ರಕಾರ ಮುಂದುವರೆದರೆ ಕುಡಿಯುವ ಅಮೃತ ವಿಷವಾಗಿ ಸಾವಿರಾರು ಜನರ ಜೀವಕ್ಕೆ ಕುತ್ತು ಬಂದರೂ ಆಶ್ಚರ್ಯವಿಲ್ಲ.