ಕನ್ನಡಪ್ರಭ ವಾರ್ತೆ ಕೊಪ್ಪಳ
ಕೇವಲ ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆಗೈದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟಿರುವ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನಡೆದಿದ್ದು, ಕಿನ್ನಾಳ ಗ್ರಾಮಸ್ಥರು ಘಟನೆಯಿಂದ ಆತಂಕಗೊಂಡಿದ್ದಾರೆ.ಬಾಲಕಿಯನ್ನು ಅನುಶ್ರೀ ರಾಘು ಮಡಿವಾಳರ (7) ಎಂದು ಗುರುತಿಸಲಾಗಿದೆ. ಇದರಿಂದ ತಂದೆ-ತಾಯಿಗಳಲ್ಲಿ ದುಃಖದ ಕಟ್ಟೆಯೊಡೆದಿದೆ.
ಏ. 19ರಂದು ಬಾಲಕಿ ಆಡಲು ಹೋಗಿ ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪಾಲಕರು ಊರೆಲ್ಲ ಹುಡುಕಾಡಿದ್ದರು. ಒಂದು ದಿನ ಕಾದರೂ ಬಾಲಕಿ ಪತ್ತೆಯಾಗಲೇ ಇಲ್ಲ. ಇದರಿಂದ ಅವರ ತಂದೆ ರಾಘು ಕೊಪ್ಪಳ ನಗರ ಠಾಣೆಯಲ್ಲಿ ದೂರು ನೀಡಿ, ಮಗಳು ಕಾಣೆಯಾದ ಪ್ರಕರಣ ದಾಖಲು ಮಾಡಿದ್ದರು.ಚೀಲದಲ್ಲಿ ಪತ್ತೆ:ಎರಡು ದಿನಗಳಾದರೂ ಸಿಗದೆ ಇದ್ದಾಗ ಕಿನ್ನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಹುಡುಕಲಾಯಿತು. ಆದರೆ, ಬಾಲಕಿಯನ್ನು ಅವರ ಮನೆಯ ಪಕ್ಕದಲ್ಲಿಯೇ ಇರುವ ಪಾಳುಬಿದ್ದ ಮನೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹಾಕಿದ್ದಾರೆ.
ಪಾಳುಬಿದ್ದ ಮನೆಯಲ್ಲಿ ಗ್ರಾಮದ ಬಾಲಕನೋರ್ವ ಮೂತ್ರ ಮಾಡಲು ಹೋದಾಗ ಚೀಲದಲ್ಲಿ ಕಾಲು ಕಾಣುತ್ತಿರುವುದನ್ನು ನೋಡಿ ಗಾಬರಿಗೊಂಡು ಓಡಿ ಬಂದು ಅಕ್ಕಪಕ್ಕದವರಿಗೆ ತಿಳಿಸಿದ್ದಾನೆ. ಆಗ ಹೋಗಿ ನೋಡಿದರೆ ಬಾಲಕಿಯೇ ಎನ್ನುವುದು ದೃಢಪಟ್ಟಿದೆ. ಘಟನೆಯ ಕುರಿತು ನಿಖರ ಮಾಹಿತಿ ಗೊತ್ತಾಗಿಲ್ಲ. ಆದರೆ, ನಿಧಿ ಆಸೆಗಾಗಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಸ್ಥಳಕ್ಕೆ ಎಸ್ಪಿ ಭೇಟಿ:
ಬಾಲಕಿ ಹತ್ಯೆಯಾದ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿಯಿಂದ ಎಫ್‌ಎಸ್ಎಲ್ ತಂಡ ಆಗಮಿಸಬೇಕಾಗಿರುವುದರಿಂದ ಚೀಲವನ್ನು ತಡರಾತ್ರಿಯವರೆಗೂ ತೆರೆದಿರಲಿಲ್ಲ.ಓರ್ವ ವಶಕ್ಕೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಮೇಲೆ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.ಮೃತ ಬಾಲಕಿಯ ತಂದೆ ರಾಘು ಮಡಿವಾಳರ ಹೇಳುವಂತೆ ತನಗೆ ಯಾರ ಮೇಲೆಯೂ ಅನುಮಾನ ಇಲ್ಲ. ನಾನು ಯಾರೊಂದಿಗೂ ಜಗಳವಾಡಿಲ್ಲ. ಅಷ್ಟೊಂದು ಹಗೆತನವೂ ಇಲ್ಲ. ನಮ್ಮ ಚಿಕ್ಕಪ್ಪನವರೊಂದಿಗೆ ಮನೆಯ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಇರುವುದು ನಿಜ. ಆದರೆ, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ.
ಘಟನೆಯ ಕುರಿತು ಗಂಭೀರವಾಗಿ ತನಿಖೆ ನಡೆಸಲಾಗುತ್ತದೆ. ಎಫ್‌ಎಸ್ಎಲ್ ತಂಡ ಬರುವವರೆಗೂ ಬಾಲಕಿ ತುಂಬಿರುವ ಚೀಲ ತೆರೆಯದಂತೆ ಸೂಚಿಸಲಾಗಿದೆ. ಅವರ ಬಂದ ಮೇಲೆ ತೆರೆದು ನೋಡಿದಾಗ ಮತ್ತಷ್ಟು ಮಾಹಿತಿ ದೊರೆಯಬಹುದು ಎಂದು ಎಸ್ಪಿ ಯಶೋದಾ ವಂಟಿಗೋಡಿ ತಿಳಿಸಿದ್ದಾರೆ.