ಐತಿಹಾಸಿಕ ಶ್ರೀರಂಗನಾಥಸ್ವಾಮಿಯ ವೈಭವಯುತ ಬ್ರಹ್ಮ ರಥೋತ್ಸವ

KannadaprabhaNewsNetwork |  
Published : Feb 06, 2025, 12:15 AM IST
15ಕೆಎಂಎನ್ ಡಿ20,21,22 | Kannada Prabha

ಸಾರಾಂಶ

ರಥೋತ್ಸವದ ವೇಳೆ ಗೋವಿಂದ, ಗೋವಿಂದ ಎಂಬ ಹರ್ಷೋದ್ಗಾರ ಭಕ್ತರಿಂದ ಕೇಳಿಬಂದಿತು. ನವಜೋಡಿಗಳು ಹಾಗೂ ಭಕ್ತರು ಬ್ರಹ್ಮರಥಕ್ಕೆ ಹಣ್ಣು ಜವನ ಎಸೆದು ಇಷ್ಟಾರ್ಥ ಸಿದ್ಧಿಸುವಂತೆ ಶ್ರೀ ಆದಿರಂಗನಲ್ಲಿ ಪ್ರಾರ್ಥನೆ ಸಲ್ಲಿಸಿದರು. ನೆರದಿದ್ದ ಭಕ್ತರಿಗೆ ಅಲ್ಲಲ್ಲಿ ದಾನಿಗಳು ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿಯ ವೈಭವಯುತ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವವನ್ನು ಕಣ್ತುಂಬಿಕೊಂಡು ಶ್ರೀರಂಗನಾಥಸ್ವಾಮಿ ದರ್ಶನ ಪಡೆದರು. ರಥಕ್ಕೆ ಹಣ್ಣು, ಜವನ ಎಸೆದು ಪ್ರಾರ್ಥನೆ ಸಲ್ಲಿಸಿದರು.

ಮಧ್ಯಾಹ್ನ 3ರಿಂದ 3.30ರ ಶುಭ ಸಮಯದಲ್ಲಿ ಆಕಾಶದಲ್ಲಿ ಗೋಚರಿಸಿದ ಗರುಡ ಪಕ್ಷಿಯು ಬ್ರಹ್ಮರಥ ಹಾಗೂ ದೇವಾಲಯದ ಕಳಶಕ್ಕೆ ಪ್ರದರ್ಶನ ಹಾಕಿದ ಬಳಿಕ ರಥೋತ್ಸವಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಸೇರಿದಂತೆ ನ್ಯಾಯಾಧೀಶರು ಹಾಗೂ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ಬೆಳಗ್ಗಿನಿಂದಲೇ ಶ್ರೀರಂಗನಾಥಸ್ವಾಮಿಯ ಬ್ರಹ್ಮರಥೋಥ್ಸವಕ್ಕೆ ದೇವಾಲಯದ ಆಡಳಿತ ಮಂಡಳಿ ಸೇರಿದಂತೆ ಪ್ರಧಾನ ಅರ್ಚಕ ವಿಜಯಸಾರಥಿ, ವೇದಬ್ರಹ್ಮ ಡಾ.ವಿ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವಿವಿಧ ಹೋಮ-ಹವನಗಳು ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ದೇವಾಲಯದ ಬಳಿ ನೆರೆದಿದ್ದ ಅಪಾರ ಭಕ್ತ ಸಮೂಹ ಹರ್ಷದಿಂದ ರಥವನ್ನು ದೇವಾಲಯದ ಸುತ್ತ ಒಂದು ಸುತ್ತಿನ ಪ್ರದಕ್ಷಿಣೆ ನಡೆಸಿ ಮೂಲ ಜಾಗದಲ್ಲಿ ನಿಲ್ಲಿಸಿದರು. ರಥೋತ್ಸವದ ವೇಳೆ ಗೋವಿಂದ, ಗೋವಿಂದ ಎಂಬ ಹರ್ಷೋದ್ಗಾರ ಭಕ್ತರಿಂದ ಕೇಳಿಬಂದಿತು. ನವಜೋಡಿಗಳು ಹಾಗೂ ಭಕ್ತರು ಬ್ರಹ್ಮರಥಕ್ಕೆ ಹಣ್ಣು ಜವನ ಎಸೆದು ಇಷ್ಟಾರ್ಥ ಸಿದ್ಧಿಸುವಂತೆ ಶ್ರೀ ಆದಿರಂಗನಲ್ಲಿ ಪ್ರಾರ್ಥನೆ ಸಲ್ಲಿಸಿದರು. ನೆರದಿದ್ದ ಭಕ್ತರಿಗೆ ಅಲ್ಲಲ್ಲಿ ದಾನಿಗಳು ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಮಾಡಿದರು.

ಬಿಸಿಲಿನ ತಾಪ ಹೆಚ್ಚಾಗಿದ್ದ ಕಾರಣ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಸೇರಿದಂತೆ ಇತರೆ ತಂಪು ಪಾನೀಯಗಳನ್ನ ದಾನಿಗಳು ನೀಡುತ್ತಿದ್ದು ಕಂಡುಬಂತು. ದೇಗುಲದ ಮುಂಭಾಗ ರಸ್ತೆಯ ಎರಡು ಇಕ್ಕೆಲಗಳಲ್ಲಿ ಮಕ್ಕಳ ವಿವಿಧ ಆಟಿಕೆ ಸಾಮಾನುಗಳು, ಬಳೆ, ಸರ, ಹಣ್ಣು, ಹಂಪಲ, ಬಜ್ಜಿ, ವಡೆ ಸೇರಿದಂತೆ ತಿಂಡಿ ತಿನಿಸುಗಳ ವ್ಯಾಪಾರ ವಹಿವಾಟು ಜೋರಾಗಿತ್ತು. ಮಕ್ಕಳು ಹಾಗೂ ವಯಸ್ಕರು ತಮಗೆ ಇಷ್ಟವಾದ ವಸ್ತುಗಳನ್ನು ತೆಗೆದುಕೊಂಡು ಮುಂದೆ ಸಾಗುತ್ತಿದ್ದರು.

ಸ್ವಾಮಿಗೆ ವಿಶೇಷ ಪೂಜೆ:

ಇದಕ್ಕೂ ಮುನ್ನ ಶ್ರೀರಂಗನಾಥಸ್ವಾಮಿ ದೇವರಿಗೆ ಬೆಳಗ್ಗಿನಿಂದಲೇ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತು. ನಂತರ ಕುಂಕುಮಾರ್ಚನೆ, ಅಭಿಷೇಕ, ಸಹಸ್ರನಾಮ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯ ನಡೆಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಇನ್ನು ದೇವಾಲಯದ ಪರಾಂಗಣ ಸೇರಿದಂತೆ ರಾಜ ಗೋಪರಕ್ಕೆ ತುಳಸಿ ಹಾರ, ಹೂವು, ಬಾಳೆ ಹಾಗೂ ಮಾವಿನ ತೋರಣಗಳಿಂದ ಸಿಂಗರಿಸಲಾಗಿತ್ತು.

ಪಟ್ಟಣದ ಶ್ರೀರಂನಾಥಸ್ವಾಮಿ ದೇವಾಲಯದ ಆವರಣ ಸೇರಿದಂತೆ ಪ್ರಮುಖ ಬೀದಿಗಳು ಹಾಗೂ ವೃತ್ತಗಳಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಹಾಗೂ ಮಾವಿನ ತೋರಣಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು.

ಬೆಳಗ್ಗೆ 6 ಗಂಟೆಗೆ ಸೂರ್ಯ ಮಂಡಲ ಹಾಗೂ ಚಂದ್ರ ಮಂಡಲದ ಉತ್ಸವವು ಪಟ್ಟಣದ ರಾಜ ಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಾಗಿತು. ತಮ್ಮ ತಮ್ಮ ಮನೆಯ ಬಳಿ ಬರುತ್ತಿದ್ದಂತೆಯೆ ಪುರ ಜನರು ಪೂಜೆ ಸಲ್ಲಿಸಿ ಸೂರ್ಯದೇವ ಮತ್ತು ಚಂದ್ರ ದೇವನನ್ನು ಪ್ರಾರ್ಥಿಸಿದರು. ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲೆ ಹಾಗೂ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥಸಪ್ತಮಿಯ ಸೊಬಗನ್ನು ಸವಿದು, ಸರದಿ ಸಾಲಿನಲ್ಲಿ ನಿಂತು ಶ್ರೀರಂಗನಾಥಸ್ವಾಮಿ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!