ಕನ್ನಡಪ್ರಭ ವಾರ್ತೆ ಬಂಗಾರಪೇಟೆ ಪಟ್ಟಣದ ಶ್ರೀಧರ್ಮರಾಯ ಸ್ವಾಮಿ ಮತ್ತು ದ್ರೌಪದಮ್ಮ ಹೂವಿನ ಕರಗ ಮಹೋತ್ಸವ ಬುಧವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು.
ಶ್ರೀಧರ್ಮರಾಯ ಸ್ವಾಮಿ, ದ್ರೌಪದಮ್ಮ ಕರಗ ಮಹೋತ್ಸವದ ಅಭಿವೃದ್ಧಿ ಟ್ರಸ್ಟ್ ಹಾಗೂ ತಿಗಳ ಯುವಕರ ಕ್ಷೇಮಾಭಿವೃದ್ಧಿ ಸಂಘದಿಂದ 79ನೇ ವರ್ಷದ ಹೂವಿನ ಕರಗ ಆಯೋಜಿಸಲಾಗಿತ್ತು. ಕರಗ ಹೊತ್ತ ಪೂಜಾರಿ ಬೇತಮಂಗಲ ಕೃಷ್ಣಮೂರ್ತಿ, ದೇವಾಲಯದಿಂದ ಹೊರಟು ನೃತ್ಯಕ್ಕಾಗಿ ಏರ್ಪಡಿಸಿದ್ದ ವೇದಿಕೆಯ ಮೇಲೇರಿದರು. ವಾದ್ಯ ಹಾಗೂ ತಮಟೆ ಮೇಳಕ್ಕೆ ವಿವಿಧ ಭಂಗಿಗಳಲ್ಲಿ ನೃತ್ಯ ಪ್ರದರ್ಶಿಸಿದರು. ಸಾವಿರಾರು ಭಕ್ತರು ಹೂವಿನ ಕರಗದಲ್ಲಿ ಭಾಗಿಯಾಗಿದ್ದರು.ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷವಾಗಿ ಶಂಷುದ್ದೀನ್ ಔಲಿಯಾ ದರ್ಗಾಗೆ ಭೇಟಿ ನೀಡಿ ಫಾತಿಯಾ ಸಲ್ಲಿಸಿದರು, ಈ ಮೂಲಕ ಹಿಂದೂ- ಮುಸ್ಲಿಂ ಸಾಮರಸ್ಯವನ್ನು ಬೆಳಗಿಸಿದರು. ಹೂವಿನ ಕರಗಕ್ಕೆ ಪಟ್ಟಣದಲ್ಲಿನ ಪ್ರತಿಯೊಂದು ದೇವಾಲಯದಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ಇಡೀ ಪಟ್ಟಣದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀಧರ್ಮರಾಯ ಸ್ವಾಮಿ, ದ್ರೌಪದಮ್ಮ ದೇವಾಲಯದಲ್ಲಿ ದೇವರಿಗೆ ಹೂವಿನ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಪಟ್ಟಣದ ರಸ್ತೆಯ ಇಕ್ಕೇಲಗಳಲ್ಲಿನ ದೀಪಾಲಂಕಾರ ಹಾಗೂ ದೇವರ ಪಲ್ಲಕ್ಕಿ ಉತ್ಸವ, ಮಹಿಳೆಯರಿಂದ ದೀಪಾರಾಧನೆ ಸೇರಿ ವಿವಿಧ ದೈವಿಕ ಕೈಂಕರ್ಯಗಳು ನಡೆದವು. ಗುರುವಾರ ಸಂಜೆ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಧರ್ಮರಾಯಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಕರಗ ಉತ್ಸವವು ಅಮರಾವತಿ ಬಡಾವಣೆ, ಬಜಾರ್ ರಸ್ತೆ, ಗಾಂಧಿನಗರ, ವಿವೇಕಾನಂದ ನಗರ, ಕುಂಬಾರ ಪಾಳ್ಯ, ರಾಮಕೃಷ್ಣ ಹೆಗಡೆ ಕಾಲೋನಿ, ಶಾಂತಿನಗರ, ಗೌತಮ್ ನಗರ ,ಭೋವಿನಗರ, ವಿಜಯನಗರ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.
ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ಸುಮಂಗಲಿಯರು ಪಾದ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.ಈ ಅದ್ಧೂರಿ ಕರಗ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಸ್. ಎನ್. ನಾರಾಯಣಸ್ವಾಮಿ, ಮಾಜಿ ಸಂಸದ ಎಸ್. ಮುನಿಸ್ವಾಮಿ, ಪುರಸಭೆ ಅಧ್ಯಕ್ಷ ಗೋವಿಂದ ಎಂ., ಸದಸ್ಯ ಕೆ. ಚಂದ್ರಾರೆಡ್ಡಿ ,ಕಪಾಲಿ ಶಂಕರ್ , ವೆಂಕಟೇಶ್, ಶಂಷುದ್ದೀನ್ ಬಾಬು, ಶಫಿ, ರಾಕೇಶ್ ಗೌಡ, ಕನ್ನಡ ಸಂಘದ ಅಧ್ಯಕ್ಷರಾದ
ಪಲ್ಲವಿ ಮಣಿ, ಚಿನ್ನ ವೆಂಕಟೇಶ್ ಭಾಗವಹಿಸಿದ್ದರು.