ಹಾನಗಲ್ಲ: ದ್ಯಾಮವ್ವ ನಿನ್ನಾಲ್ಕುಧೋ.... ಉಧೋ ಎಂಬ ಹರ್ಷೋದ್ಗಾರ, ವೈವಿಧ್ಯಮಯ ಕಲಾಮೇಳಗಳ ಪ್ರದರ್ಶನದೊಂದಿಗೆ ಹಾನಗಲ್ಲ ಗ್ರಾಮದೇವಿ ಮಹಾರಥೋತ್ಸವ ಮಂಗಳವಾರ ರಾತ್ರಿಯಿಡೀ ಸಂಭ್ರಮ, ಸಡಗರದೊಂದಿಗೆ ಸಹಸ್ರ ಸಹಸ್ರ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಸಂಪನ್ನಗೊಂಡಿತು. ಮಂಗಳವಾರ ರಾತ್ರಿ 10 ಗಂಟೆಗೆ ಶಾಸಕ ಶ್ರೀನಿವಾಸ ಮಾನೆ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಾತ್ರಾ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ತಹಸೀಲ್ದಾರ್ ಎಸ್. ರೇಣುಕಾ, ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ, ಹೆಚ್ಚುವರಿ ಪೊಲೀಸ್ ಜಿಲ್ಲಾ ವರಿಷ್ಠ ಎಲ್.ವೈ. ಶಿರಕೋಳ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಅವರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು.ಗ್ರಾಮದೇವಿ ದೇವಸ್ಥಾನದಿಂದ ರಂಜನಿ ವೃತ್ತದ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ರಥೋತ್ಸವ ಬುಧವಾರ ಬೆಳಗಿನ ಜಾವ ಪುರಸಭೆಯ ಬಳಿ ಇರುವ ದ್ಯಾಮವ್ವನ ಪಾದಗಟ್ಟಿಯಲ್ಲಿ ಧಾರ್ಮಿಕ ಪದ್ಧತಿಗನುಗುಣವಾಗಿ ಸ್ಥಾಪಿಸಲ್ಪಟ್ಟಿತು. ನೆರೆದ ಭಕ್ತ ಸಮೂಹದಿಂದ ಕಾಳಿ ಕಾಳಿ ಮಹಾಕಾಳಿ, ದ್ಯಾಮವ್ವ- ದುರ್ಗವ್ವ ಮೂರು ಮುಕ್ತೆವ್ವ ನಿನ್ನಾಲ್ಕುಧೋ ಉಧೋ... ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಗ್ರಾಮದೇವಿ ಮೂರ್ತಿಯನ್ನು ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗಿತ್ತು. ಸೇಬು ಮತ್ತು ನಿಂಬೆಹಣ್ಣುಗಳ ಹಾರಗಳಿಂದ ಅಲಂಕರಿಸಿದ್ದು ಗಮನ ಸೆಳೆಯಿತು. ಕೆಲವು ಯುವಕರು ಹಲಿಗೆ ನುಡಿಸುತ್ತಾ ಬಗೆ ಬಗೆಯ ಸ್ವರಗಳನ್ನು ಹೊರಸೂಸಿ ನರ್ತಿಸಿ, ಸಂಭ್ರಮಿಸಿದರು. ಲಂಬಾಣಿ ಮಹಿಳೆಯರು ತಮ್ಮ ಸಮುದಾಯದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಮೆರವಣಿಗೆಯುದ್ದಕ್ಕೂ ಜೋಗತಿಯರು ಚಾಮರ ಅಲುಗಾಡಿಸುತ್ತಾ ತನ್ಮಯತೆಯಿಂದ ಉಧೋ.. ಉಧೋ... ಎಂದು ಉದ್ಘರಿಸುತ್ತಾ ಸಾಗಿಬಂದು ಭಕ್ತಿಭಾವ ಪ್ರದರ್ಶಿಸಿದರು.ದೇವಿಯ ಮೂರ್ತಿಗೆ ಪ್ರತಿಯೊಂದು ಮನೆಗಳ ಎದುರು ಹೆಂಗಳೆಯರು ಆರತಿ ಬೆಳಗಿ, ಭಕ್ತಿಭಾವದಿಂದ ಬರಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಡೀ ಪಟ್ಟಣ ಸಿಂಗಾರಗೊಂಡಿತ್ತು. ಪೂಜಾ ಕುಣಿತ, ಚಂಡಿ ವಾದ್ಯ, ವೀರಗಾಸೆ, ಭಜನಾ ಮೇಳ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನ ಸಾಂಸ್ಕೃತಿಕ ಲೋಕವನ್ನೇ ಅನಾವರಣಗೊಳಿಸಿ ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದುಕೊಟ್ಟಿತು.ಕಳೆದ ಮೂರು ತಿಂಗಳಿನಿಂದ ಇಡೀ ಹಬ್ಬದ ಯಶಸ್ಸಿಗೆ ಕಂಕಣಬದ್ಧರಾಗಿ ಸಿದ್ತೆಧಗೆ ಮುಂದಾದ ಗ್ರಾಮದೇವಿ ಜಾತ್ರಾ ಟ್ರಸ್ಟ್ ಉಪಾಧ್ಯಕ್ಷ ಸುರೇಶ ಪೂಜಾರ, ಕಾರ್ಯದರ್ಶಿ ಗಣೇಶ ಮೂಡ್ಲಿಯವರ, ಕೋಶಾಧ್ಯಕ್ಷ ರಾಜು ಗೌಳಿ, ಸದಸ್ಯರಾದ ಭೋಜರಾಜ ಕರೂದಿ, ನಾಗೇಂದ್ರ ಬಂಕಾಪುರ, ಯಲ್ಲಪ್ಪ ಶೇರಖಾನೆ, ಬಾಳಾರಾಮ ಗುರ್ಲಹೊಸೂರ, ವಿರುಪಾಕ್ಷಪ್ಪ ಕಡಬಗೇರಿ, ಗುರುರಾಜ ನಿಂಗೋಜಿ, ರವಿಚಂದ್ರ ಪುರೋಹಿತ, ರಾಮು ಯಳ್ಳೂರ, ನಾರಾಯಣ ಅಥಣಿ, ಸಂಜಯ ಬೇದ್ರೆ, ಆದರ್ಶ ಶೆಟ್ಟಿ, ಕೃಷ್ಣಾ ಬಾಗಲೆ, ಮನೋಜ ಕಲಾಲ, ಈಶ್ವರ ವಾಲ್ಮೀಕಿ, ಸುನಿಲಕುಮಾರ ಅರ್ಕಸಾಲಿ, ಕೀರ್ತಿಕುಮಾರ ಚಿನ್ನಮುಳಗುಂದ, ಮಾಲತೇಶ ಕೊಲ್ಲಾಪೂರ ಹಾಗೂ ಯುವ ಕಾರ್ಯಕರ್ತರ ಸಮೂಹ ರಾತ್ರಿಯಿಡೀ ನಡೆದ ರಥೋತ್ಸವ ಶಾಂತವಾಗಿ ನಡೆಯಲು ಎಲ್ಲ ವ್ಯವಸ್ಥೆಗೊಳಿಸಿದ್ದರು. ಸಿಪಿಐ ಆಂಜನೇಯ, ಪಿಎಸ್‌ಐ ಸಂಪತ್ತ ಆನಿಕಿವಿ ಅವರ ನೇತೃತ್ವದ ಪೊಲೀಸ್ ತಂಡ ಅತ್ಯುತ್ತಮ ಕಾರ್ಯ ನಿರ್ವಹಿಸಿ ಶಾಂತತೆ ಕಾಪಾಡಿದರು.ಹರಕೆ ಸಲ್ಲಿಕೆ: ರಥೋತ್ಸವಕ್ಕೂ ಮುನ್ನ ಪಾದಗಟ್ಟಿಗೆ ಭಕ್ತಾದಿಗಳು ನೀರು ಹಾಕುವುದು ಹಾಗೂ ಇನ್ನು ಕೆಲವು ಭಕ್ತರು ತಮ್ಮ ಹರಕೆಯಂತೆ ದೀಡ್ ನಮಸ್ಕಾರ ಹಾಕಿ ಹರಕೆ ಸಲ್ಲಿಸುವುದು ವಿಶೇಷವಾಗಿತ್ತು. ಬಾಲ ಮುತ್ತೈದೆಗೆ ಉಡಿ ತುಂಬುವುದು ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಿ ಪ್ರತಿಷ್ಠಾಪನೆಯ ಮಂಟಪದಲ್ಲಿ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಗಳು ನಡೆದವು.