ಗುತ್ತಲ: ಐತಿಹಾಸಿಕ ಹಿನ್ನೆಲೆಯ ಹಾವನೂರ ಗ್ರಾಮ ದೇವತಾ ಜಾತ್ರೆಯು ಸಾಂಪ್ರದಾಯಿಕವಾಗಿ ಹಾಗೂ ವಿಜೃಂಭಣೆಯಿಂದ ಜರುಗಿ ಬುಧವಾರ ಸಂಜೆ ಗ್ರಾಮದೇವಿಯನ್ನು ಗಡಿಗೆ ಕಳುಹಿಸುವುದರ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಬೆಳಗಿನ ಜಾವ 6 ಗಂಟೆ ಸುಮಾರಿಗೆ ದೇವಿಯನ್ನು ಚೌತಮನೆ ಕಟ್ಟೆಗೆ ಕುಳ್ಳರಿಸಿ ಭಕ್ತರ ದರ್ಶನಕ್ಕೆ ಇಡಲಾಯಿತು. ಬುಧವಾರ ಸಹಸ್ರಾರು ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು. ಶಾಂತರೂಪದ ಗಜಗೌರಿ ರೂಪದಲ್ಲಿ ದೇವಿಯು ಭಕ್ತರಿಗೆ ದರ್ಶನ ಭಾಗ್ಯವನ್ನು ಕರುಣಿಸಿದಳು.
ಶೃಂಗರಿಸಿದ ಜೋಡೆತ್ತಿನ ಬಂಡೆಗಳು: ಹೆಚ್ಚಿದ ವಾಹನಗಳ ಪ್ರಯಾಣದ ಮಧ್ಯದಲ್ಲಿಯೇ ಸಂಪ್ರದಾಯಿಕ ಕೊಲ್ಲಾರಿ ಬಂಡಿಯನ್ನು (ಚಕ್ಕಡಿ)ಗಳನ್ನು ಶೃಂಗರಿಸಿಕೊಂಡು ಕೆಲವು ರೈತ ಸಮೂಹ ಅದ್ಧೂರಿಯಾಗಿ ಎತ್ತು ಚಕ್ಕಡಿಗಳನ್ನು ಶೃಂಗರಿಸಿ ಕುಟುಂಬದೊಂದಿಗೆ ಜಾತ್ರೆಗೆ ಆಗಮಿಸಿ ತುಂಗಭದ್ರಾ ನದಿಯ ತೀರದಲ್ಲಿ ವಿವಿಧ ಭಕ್ಷ್ಯಗಳನ್ನು ಸವಿದರು. ಅನೇಕರು ನದಿಯಲ್ಲಿ ಸ್ನಾನ ಮಾಡಿ ದೇವಿಯ ದರ್ಶನ ಪಡೆದು ಪುನೀತರಾದರು.ವ್ಯಾಪಾರಿಗಳಲ್ಲಿ ಮಂದಹಾಸ: ಮನರಂಜನೆಯ ಆಟಗಳು ಹಾಗೂ ಹೋಟೆಲ್, ಮಿಠಾಯಿ ಅಂಗಡಿ, ಆಟಿಕೆಗಳ ಅಂಗಡಿ ಸೇರಿದಂತೆ ಎಲ್ಲ ವಿಧಧ ಅಂಗಡಿಗಳಿಗೆ ಹೆಚ್ಚಿನ ಭಕ್ತರ ಆಗಮನದ ಹಿನ್ನೆಲೆ ಎಲ್ಲಾ ಅಂಗಡಿಗಳು ಜನಜಂಗುಳಿಯಿಂದ ತುಂಬಿದ್ದು ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿದಂತಾಗಿತ್ತು.
ಒಟ್ಟಿನಲ್ಲಿ ವರ್ಷದ 364 ದಿನ ಗುಪ್ತ ಪೂಜೆಗೊಳಪಟ್ಟು 1 ದಿನ ಮಾತ್ರ ಅದರಲ್ಲೂ ಕೇವಲ 13 ಗಂಟೆಗಳ ದರ್ಶನ ನೀಡುವ ಗ್ರಾಮದೇವತೆ ದ್ಯಾಮವ್ವ ದೇವಿಯ ದರ್ಶನವನ್ನು ಭಕ್ತರು ಪಡೆದರು, ಭಕ್ತಾಧಿಗಳು ತಮ್ಮ ಹರಕೆಯ ಮುಡುಪುಗಳನ್ನು ಭಕ್ತಿಯಿಂದ ತೀರಿಸಿದರು. ದೇವಿಯು ದೇವಸ್ಥಾನದಿಂದ ಚೌತಮನೆ ಕಟ್ಟೆ ಮತ್ತು ಚೌತಮನೆ ಕಟ್ಟೆಯಿಂದ ಗಡಿಗೆ ತೆರಳುವ ಮೆರವಣಿಗೆಯಲ್ಲಿ ವಿವಿಧ ಸಂಪ್ರದಾಯಿಕ ವಾದ್ಯಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು. ಮೆರವಣಿಗೆ ಸಂದರ್ಭದಲ್ಲಿ ದೇವಿಗೆ ಹಾರುಗೋಳಿ ತೂರುವದು ವಿಶೇಷವಾಗಿತ್ತು.
ನಂತರ ಸಾಯಂಕಾಲ 5 ಗಂಟೆ ನಂತರ ಚೌತಕಟ್ಟಿಯಿಂದ ದೇವಿಯನ್ನು ಗಡಿಗೆ ಕಳಿಸಲಾಯಿತು.