ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿ ಹುಡುಕಿ, ಹುಡುಕಿ ಅಭಿವೃದ್ದಿ ಕೆಲಸಗಳನ್ನು ಮಾಡಿಸುತ್ತಿದ್ದೇನೆ. ತೋಟಗಳು ಒಣಗಿದರೆ ರೈತರ ಮನಸ್ಸಿಗೆ ನೋವಾಗುತ್ತದೆನ್ನುವುದನ್ನು ಅರ್ಥಮಾಡಿಕೊಂಡು ಚೆಕ್‍ಡ್ಯಾಂ ಗಳನ್ನು ಕಟ್ಟಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ತಾಲ್ಲೂಕಿನ ಎಂ.ಜಿ.ಕಟ್ಟೆ ಗ್ರಾಮದಲ್ಲಿ 1.89 ಕೋಟಿ ರು.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಚೆಕ್‍ಡ್ಯಾಂ ಉದ್ಘಾಟಿಸಿ, ಬಾಗಿನ ಅರ್ಪಿಸಿ ಮಾತನಾಡಿದರು.
ಭರಮಸಾಗರದಲ್ಲಿ ಮೊದಲ ಬಾರಿ ಚುನಾವಣೆಗೆ ನಿಂತಾಗ ಜನರ ಬಳಿ ಹೋಗಿ ಮತ ಕೇಳಲು ರಸ್ತೆಗಳಿರಲಿಲ್ಲ. ಗೆದ್ದ ನಂತರ ಎಲ್ಲಾ ಹಳ್ಳಿಗಳಲ್ಲೂ ರಸ್ತೆ ಮಾಡಿಸಿದ್ದರಿಂದ ಜನ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿಗೆ ಚುನಾವಣೆಗೆ ನಿಂತಾಗ ಒಂದು ಸಾರಿ ಗೆದ್ದವರು ಮತ್ತೆ ಗೆಲ್ಲುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಚುನಾವಣೆಯಲ್ಲಿ ಯುವಕರು ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿ 21 ಸಾವಿರ ಮತಗಳ ಅಂತರದಿಂದ ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು ಎಂದು ಸ್ಮರಿಸಿಕೊಂಡರು.ಸಣ್ಣ ಊರು ಎಂದು ಯಾವ ಗ್ರಾಮವನ್ನು ಉದಾಸೀನ ಮಾಡಿಲ್ಲ. ಎಲ್ಲಾ ಕಡೆ ಚೆಕ್‍ಡ್ಯಾಂಗಳನ್ನು ಕಟ್ಟಿಸಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆದ ಪರಿಣಾಮ ತುಂಬಿ ತುಳುಕುತ್ತಿವೆ. ಸಾರ್ವಜನಿಕರ ಸಂತೋಷವೆ ನನಗೆ ಆಶೀರ್ವಾದ. ಚುನಾವಣೆ ಸಂದರ್ಭದಲ್ಲಿ ಬಂದು ಗಿಲೀಟ್ ಮಾತುಗಳನ್ನಾಡುವವರ ವಿರುದ್ದ ಎಚ್ಚರಿಕೆಯಿಂದಿರಿ ಎಂದು ಜನತೆಯಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
3 ಕೋಟಿ ರು. ವೆಚ್ಚದಲ್ಲಿ ನಂದನ ಹೊಸೂರು ಕೆರೆ ರಿಪೇರಿ ಮಾಡಿಸಿದ್ದೇನೆ. ಕೆರೆಯಾಗಳಹಳ್ಳಿ ಕೆರೆಗೆ ಒಂದು ಕೋಟಿ ರು.ಗಳನ್ನು ನೀಡಿದ್ದೆ. ಈಗ ಮತ್ತೊಂದು ಕೋಟಿ ರು. ಕೊಟ್ಟಿದ್ದೇನೆ. ವಿಧಾನಸೌಧ ಕಟ್ಟಿರುವುದು ಕೇವಲ 90 ಲಕ್ಷ ರು.ಗಳಲ್ಲಿ. ಮತಿಘಟ್ಟ ರಸ್ತೆಗೆ 35 ಕೋಟಿ ರು. ಗಳನ್ನು ಕೊಟ್ಟಿದ್ದೇನೆ. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರು.ಗಳನ್ನು ಖರ್ಚು ಮಾಡಿದ್ದೇನೆ. ಇನ್ನು 50 ವರ್ಷಗಳ ಕಾಲ ನೀರಿಗೆ ಸಮಸ್ಯೆಯಿರುವುದಿಲ್ಲ. ತೇಕಲವಟ್ಟಿ ಬಳಿ 23 ಕೋಟಿ ರು.ಗಳ ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.300 ಕ್ಕೂ ಹೆಚ್ಚು ಶಾಲೆಗಳನ್ನು ಕಟ್ಟಿಸಿದ್ದೇನೆ. ಉಪ್ಪರಿಗೇನ ಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಿಸಿದ್ದೇನೆ. ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ಎಲ್ಲವನ್ನು ನೀಡುತ್ತಿದೆ. ಎಲ್.ಕೆ.ಜಿ.ಯಿಂದ ಹಿಡಿದು ಪಿ.ಯು.ಸಿ.ವರೆಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆ ಬಡ ಮಕ್ಕಳಿಗೆ ತೊಂದರೆಯಾಗಬಾರದೆಂದು ಉಚಿತವಾಗಿ ಬಸ್‍ಗಳನ್ನು ಬಿಟ್ಟಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಪುಣ್ಯ ಸಾರ್ಥಕ ಕೆಲಸ ಮಾಡಿಲ್ಲ. ತಾಲ್ಲೂಕಿನಾದ್ಯಂತ ಕೆರೆಗಳಿಗೆ ನೀರು ತುಂಬಿಸುವುದು, ಸ್ಕೂಲ್, ಅಂಗನವಾಡಿ, ಸಿ.ಸಿ.ರಸ್ತೆ, ಕರೆಂಟ್ ಹೀಗೆ ಎಲ್ಲಿ ಏನು ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆನ್ನುವುದನ್ನು ಮನದಲ್ಲಿಟ್ಟುಕೊಂಡು ಜವಾಬ್ದಾರಿಯಿಂದ ಕೆಲಸ ಮಾಡುವ ಎಂ.ಎಲ್.ಎ. ನಾನು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರವೀಣ್, ಸದಸ್ಯರಾದ ಸತೀಶ್, ಮಂಜಣ್ಣ, ಬಿಜೆಪಿ.ಮುಖಂಡರಾದ ಚಂದ್ರಣ್ಣ, ಸಿದ್ದಣ್ಣ, ರಂಗಸ್ವಾಮಿ, ಸಿದ್ದಪ್ಪ, ತಿಮ್ಮಣ್ಣ, ಶ್ರೀನಿವಾಸ್, ಎಲೆರಾಜಪ್ಪ, ದಿನೇಶ್ ಹಾಗೂ ಗ್ರಾಮದ ಮುಖಂಡರುಹಾಜರಿದ್ದರು.