ಶರಣ-ದಾಸ ಸಾಹಿತ್ಯಗಳ ಗುರಿ ಒಂದೇ: ಡಾ. ಪರಮಶಿವಮೂರ್ತಿ

KannadaprabhaNewsNetwork | Published : Jan 19, 2025 2:19 AM

ಸಾರಾಂಶ

ಮನುಷ್ಯನ ಬದುಕನ್ನು ಸುಧಾರಿಸುವುದು ದಾಸರ ಕಾಳಜಿಯಾಗಿತ್ತು.

ಗಂಗಾವತಿಯಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಂಗಾವತಿ:

ಮನುಷ್ಯನ ಬದುಕನ್ನು ಸುಧಾರಿಸುವುದು ದಾಸರ ಕಾಳಜಿಯಾಗಿತ್ತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಡಿವಿ. ಪರಮಶಿವ ಮೂರ್ತಿ ಹೇಳಿದರು.

ನಗರದ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಗ್ರ ದಾಸ ಸಾಹಿತ್ಯ ಅಧ್ಯಯನ ಪೀಠ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಐಕ್ಯೂಎಸಿ ವಿಭಾಗದ ವತಿಯಿಂದ ನಡೆದ ವಿಶೇಷ ಉಪನ್ಯಾಸಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೈನಂದಿನ ಬದುಕಿನಲ್ಲಿ ಎದುರಿಸುವ ಸಮಸ್ಯೆಗಳಿಗೆ ಭಕ್ತಿ ಪರಂಪರೆ ಪರಿಹಾರ ಸೂಚಿಸುತ್ತದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಾಸಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ನಾವು ಹೇಗೆ ಬದುಕಬೇಕು ಬೇರೊಬ್ಬರ ಜೊತೆ ಹೇಗೆ ಬಾಳಬೇಕು ಎನ್ನುವುದನ್ನು ತಿಳಿಸುತ್ತದೆ. ಶರಣ ಸಾಹಿತ್ಯ-ದಾಸಸಾಹಿತ್ಯಗಳ ಗುರಿ ಒಂದೇಯಾಗಿತ್ತು ಎಂದರು.

ದಾಸಸಾಹಿತ್ಯ ವ್ಯಕ್ತಿಗತವಾಗಿ ಸಾಧನೆಯ ಮಾರ್ಗಕ್ಕೆ ಕರೆದೊಯ್ಯುತ್ತದೆ. ಸರಳತೆಯ ಮೂಲಕ ಬದುಕಿನ ಅರ್ಥವನ್ನು ಅದ್ಭುತವಾಗಿ ತಿಳಿಸುತ್ತದೆ. ಭಕ್ತಿಯ ಮೂಲಕ ಮನುಷ್ಯ ಮನುಷ್ಯನಾಗಿ ಬದುಕಬೇಕು ಎಂಬುದನ್ನು ಒತ್ತಿ ಹೇಳುತ್ತದೆ. ದಾಸ ಪರಂಪರೆಯ ಕೀರ್ತನೆಕೇಳಿದರೆ ನಮ್ಮ ಸಿಟ್ಟು, ಕ್ರೋಧ-ದ್ವೇಷಗಳು ಇಲ್ಲವಾಗುತ್ತವೆ. ಇಂದಿನ ಯುವ ಸಮೂಹ ಒತ್ತಡಕ್ಕೆ ಸಿಲುಕುತ್ತಿದೆ. ಗುರಿ ಇಲ್ಲದ ಬದುಕಿನಲ್ಲಿ ಶಾಂತಿ, ನೆಮ್ಮದಿ ಇಲ್ಲದೆ ಸೊರಗುತ್ತಿದೆ. ನಮ್ಮ ಮನೋವಿಕಾರಗಳಿಗೆ ದಾಸ ಸಾಹಿತ್ಯ ಔಷಧಿ ನೀಡುತ್ತವೆ ಎಂದರು.

ಮಹಿಳಾ ಕೀರ್ತನ ಕಾರ್ತಿಯರ ಕುರಿತು ಉಪನ್ಯಾಸ ನೀಡಿದ ಡಾ. ಮಧುಮತಿ ದೇಶಪಾಂಡೆ, ಗಲಗಲಿ ಅವ್ವ ಕನ್ನಡದ ಮೊದಲ ಹರಿದಾಸ ಮಹಿಳೆ. ಕನಕಗಿರಿ ತಾಲೂಕಿನ ನವಲಿ ಗ್ರಾಮದವಳು. ಹೆಣ್ಣು ಮಕ್ಕಳ ನೋವನ್ನು ನುಂಗಿಕೊಂಡು ಹಾಡುಗಳ ಮುಖಾಂತರ ಅಭಿವ್ಯಕ್ತಿಸಿದ್ದಾಳೆ. ಹರಪನಹಳ್ಳಿ ಭೀಮವ್ವ ಗಾಢವಾಗಿ ತನ್ನ ಕೃತಿಗಳಲ್ಲಿ ತೆರೆದಿಟ್ಟಿದ್ದಾಳೆ. ಹೆಳವನಕಟ್ಟೆ ಗಿರಿಯಮ್ಮ ವಿಭಿನ್ನ ಮಾರ್ಗದ ವಿರಾಗಿಣಿ. ಮದುವೆಯಾಗಿ ವೈರಾಗ್ಯದ ಕಡೆ ತಿರುಗಿ, ಗಂಡನಿಗೆ ಬೇರೊಂದು ಮದುವೆ ಮಾಡಿ, ಮಂತ್ರಾಲಯದ ಸುತೀಂದ್ರ ತೀರ್ಥನಿಂದ ಅನುಗ್ರಹಿತಳಾಗಿ, ಗೋಪಾಲದಾಸರಿಂದ ಅಶೀರ್ವಾದ ಪಡೆದು ವಿಶಿಷ್ಟ ಕೀರ್ತನೆ ರಚಿಸಿದ್ದಾರೆ. ಇನ್ನು ನೂರಾರು ಮಹಿಳಾ ದಾಸರು ಇದ್ದಾರೆ. ಅವರೆಲ್ಲರ ಕುರಿತು ಗಂಭೀರವಾದ ಅಧ್ಯಯನ ನಡೆಯಬೇಕಾಗಿದೆ ಎಂದರು.

ವರ್ತಮಾನದಲ್ಲಿ ದಾಸ ಸಾಹಿತ್ಯದ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದ ಗುಂಡೂರು ಪವನ್‍ಕುಮಾರ್, ದಾಸ ಸಾಹಿತ್ಯದ ಮೊದಲ ಘಟ್ಟ ಹಂಪಿಯಲ್ಲಿ ಬೆಳೆದು ಸಾಮಾಜಿಕ ಸುಧಾರಣೆಗೆ ಭಕ್ತಿ ಮಾರ್ಗವನ್ನು ಅನುಸರಿಸಿದೆ. ಕನಕ-ಪುರಂದರರು ತಮ್ಮ ಕೀರ್ತನೆಗೆ ಮೂಲಕ ಸಾಮಾಜಿಕ ಸುಧಾರಣೆಗೆ ಪ್ರಯತ್ನಿಸಿದರು ಎಂದರು.

ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಮುಮ್ತಾಜ್ ಬೇಗಂ ವಹಿಸಿದ್ದರು. ಪ್ರಾಸ್ತಾವಿಕವಾಗಿ ಡಾ. ಶಿವಾನಂದ ವಿರಕ್ತಮಠ ಮಾತನಾಡಿದರು. ಡಾ. ಎಸ್.ಜಿ. ಗುರಿಕಾರ ಸ್ವಾಗತಿಸಿದರು. ಡಾ. ಬಸವರಾಜ ಗೌಡನಬಾವಿ ನಿರೂಪಿಸಿದರು.

Share this article