ಹಿರಿಯೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ದಿನೇ ದಿನೇ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ಭಾರತೀಯ ಜನತಾ ಪಾರ್ಟಿಯ ನಾಯಕರು ಹಾಗೂ ಕಾರ್ಯಕರ್ತರು ತಾಲೂಕಿನ ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ ನೂರು ಜನರನ್ನು ಪಕ್ಷದ ಸದಸ್ಯರನ್ನು ಮಾಡುವ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು. ಬೂತ್ ಹಂತದಲ್ಲಿ ಪಕ್ಷ ಬಲಿಷ್ಠವಾಗಬೇಕು ಎಂದರು.
ಈಗಾಗಲೇ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ವಿನಾಶದ ಹಾದಿಯಲ್ಲಿದೆ. ಜನರ ವಿಶ್ವಾಸವನ್ನು ಗಳಿಸುವುದರಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ಮೂರು ವರ್ಷಗಳವರೆಗೆ ಅವರು ಅಧಿಕಾರ ನಡೆಸುವುದೇ ಅನುಮಾನ ಎಂಬಂತಾಗಿದೆ. ಹಗರಣಗಳ ಸುಳಿಯಲ್ಲಿ ಸಿಲುಕಿ ಸರ್ಕಾರ ಒದ್ದಾಡುತ್ತಿದ್ದು ,ಅಭಿವೃದ್ಧಿಯತ್ತ ದೃಷ್ಟಿ ಹರಿಸುವ ವ್ಯವಧಾನವೇ ಅವರಲ್ಲಿ ಕಾಣುತ್ತಿಲ್ಲ ಎಂದು ಹೇಳಿದರು.ಬರುವಂತಹ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜನರ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡು ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶತಃಸಿದ್ಧ ಎಂಬಂತಾಗಿದೆ. 180ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಬಲಿಷ್ಠವಾದ ಸರ್ಕಾರವನ್ನು ನೀಡಲು ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಪಡೆ ಸಿದ್ಧವಿದೆ ಎಂದು ತಿಳಿಸಿದರು.
ಇನ್ನೂ ಸಮಯವಿದೆ ಎಂಬ ತಾತ್ಸಾರ ಯಾರಲ್ಲೂ ಬೇಡ. ಪಕ್ಷದ ನಿರ್ಧಾರದಂತೆ ಪ್ರತಿ ಬೂತ್‌ನಲ್ಲೂ ನೂರು ಜನ ಸದಸ್ಯರನ್ನು ತಯಾರು ಮಾಡುವ ಕಾರ್ಯದಲ್ಲಿ ನಾಳೆಯಿಂದಲೇ ತೊಡಗಿ. ಎಷ್ಟು ಶ್ರಮ ಹಾಕುತ್ತಿವೋ ಅಷ್ಟು ಯಶಸ್ಸು ಇರುತ್ತದೆ. ಆದ್ದರಿಂದ ಕಾರ್ಯಕರ್ತರು, ಮುಖಂಡರು ಪಕ್ಷ ಗಟ್ಟಿಗೊಳಿಸಲು ತೊಡಗಬೇಕು ಎಂದರು.
ಆಟಗಾರರಿಗೆ ಶುಭ ಹಾರೈಸಿದ ಅಶೋಕ್
ನೆಹರೂ ಮೈದಾನದ ಸದಸ್ಯತ್ವ ಕಾರ್ಯಾಗಾರಕ್ಕೆ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರವರು ನೆಹರೂ ಮೈದಾನದಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಖೋ ಖೋ ತರಬೇತಿ ಪಂದ್ಯಾವಳಿಗಳ ಆಟಗಾರರನ್ನು ಮಾತನಾಡಿಸಿ ಶುಭ ಹಾರೈಸಿದರು.