ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಾವು ಅಧಿಕಾರಕ್ಕೆ ಬಂದರೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಮಾತು ಕೊಟ್ಟಿದ್ದ ಕಾಂಗ್ರೆಸ್ ಸರ್ಕಾರ ಈಗ ಮಾತು ತಪ್ಪಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಆರೋಪಿಸಿದರು.ಇಲ್ಲಿನ ಪ್ರೆಸ್ ಟ್ರಸ್ಟ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಮಧು ಬಂಗಾರಪ್ಪ ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ಕರೆದಿದ್ದರು. ಬಳಿಕ ಆಯನೂರಿನಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ಮಾಡಿ ಶಿವಮೊಗ್ಗದಲ್ಲಿ ದೊಡ್ಡ ಸಮಾವೇಶ ಮಾಡಿದ್ದರು. ಆ ಸಮಾವೇಶದಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ಇದೇ ವೇಳೆ ಮಲೆನಾಡು ಭಾಗದ ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಕೊಟ್ಟಿದ್ದೆವು. ಆಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ನಾವು ಅಧಿಕಾರಕ್ಕೆ ಬಂದರೆ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದರು. ಆದರೆ, ಈಗ ಅಧಿಕಾರಕ್ಕೆ ಬಂದು 9 ತಿಂಗಳಾದರೂ ಈ ಬಗ್ಗೆ ಸರ್ಕಾರ ಚಕಾರವೇ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ಚುನಾವಣೆ ಹೊಸ್ತಿಲಲ್ಲಿ ಶಿವಮೊಗ್ಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಾವೇಶ ಮಾಡುವ ಬಗ್ಗೆ ಮಧು ಬಂಗಾರಪ್ಪ ಘೋಷಣೆ ಮಾಡುತ್ತಿದ್ದಂತೆ ಬಿ.ಎಸ್. ಯಡಿಯೂರಪ್ಪ ಅವರು ಸಭೆ ಕರೆದು, 15 ದಿನಳಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಈಗ ಅವರೂ ಈ ಬಗ್ಗೆ ಮಾತನಾಡುತ್ತಿಲ್ಲ. ಇನ್ನು ಚುನಾವಣೆಯಲ್ಲಿ ಗೆಲ್ಲುವುದೇ ಸಾಧನೆ ಎಂದುಕೊಂಡಿರುವ ಸಂಸದ ಬಿ.ವೈ.ರಾಘವೇಂದ್ರ ಅವರು ಕೂಡ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಈವರೆಗೆ ಧ್ವನಿ ಎತ್ತಿಲ್ಲ ಎಂದು ಟೀಕಿಸಿದರು.ಸದನದಲ್ಲೂ ಚರ್ಚೆಗಳಾಗಿಲ್ಲ:
ಇನ್ನು ಗ್ಯಾರಂಟಿ ಅಲೆಯಲ್ಲಿ ತೇಲುತ್ತಿರುವ ಕಾಂಗ್ರೆಸ್ ನಾಯಕರಿಗೆ ಗ್ಯಾರಂಟಿ ಬಿಟ್ಟು ಬೇರೆ ಯಾವ ಸಮಸ್ಯೆಗಳು ಕಾಣುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮುಳುಗಡೆ ಸಂತ್ರಸ್ತರಿಗೆ ಅನ್ಯಾಯ ಮಾಡಿದರು. ಈಗ ಕಾಂಗ್ರೆಸ್‌ನವರು ಅದನ್ನೇ ಮಾಡುತ್ತಿದ್ದಾರೆ. ಈವರೆಗೆ ಯಾವ ಸಚಿವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸದನದಲ್ಲೂ ಈ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಹರಿಹಾಯ್ದರು.ಮುಳುಗಡೆ ಸಂತ್ರಸ್ತರು ಭೂಮಿಗೆ ಹಕ್ಕುಪತ್ರ ಕೊಡಿ ಎಂದು ಹೋರಾಟ ಮಾಡಿದರೆ ಸರ್ಕಾರಗಳು ಇರುವ ಜಾಗವನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿವೆ. ಅರಣ್ಯ ಇಲಾಖೆ ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ಮುಳುಗಡೆ ಸಂತ್ರಸ್ತರ ಪರ ಹೋರಾಟ ಮಾಡಿದ ಸಚಿವ ಮಧು ಬಂಗಾರಪ್ಪ ಅವರ ತವರು ಸೊರಬ ಕ್ಷೇತ್ರದಲ್ಲೇ ಹೆಚ್ಚು ರೈತರನ್ನು ಒಕ್ಕಲೆಬ್ಬಿಸುವಂಥ ಕೆಲಸ ಆಗುತ್ತಿದೆ. ಮಧು ಬಂಗಾರಪ್ಪ ಅವರು ಕೂಡಲೇ ಸಭೆ ಮಾಡಿ ಸಮಸ್ಯೆ ಬಗೆಹರಿಸಲು ಸರ್ಕಾರದ ಗಮನ ಸೆಳೆಯಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಕಾಂತ್ರಿ ಸಂಘಟನೆ ಪ್ರಮುಖರಾದ ಹರ್ಮಾನ್, ವೇದಮೂರ್ತಿ, ಮಹೇಶ್‌ಕುಮಾರ್ ಮತ್ತಿತರರು ಇದ್ದರು.- - - ಬಾಕ್ಸ್‌ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಚುನಾವಣೆ ಪೂರ್ವದಲ್ಲಿ ನಾವು ಅಧಿಕಾರಕ್ಕೆ ಬಂದರೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಕಾಂಗ್ರೆಸ್ ಸರ್ಕಾರ ಮಾತು ಕೊಟ್ಟು ಈಗ ಮಾತು ತಪ್ಪಿದೆ. ಹಿಂದೆ ಬಿಜೆಪಿಯವರೂ ಹೀಗೆ ಮಾಡಿದರು. ಈ ಹಿನ್ನೆಲೆಯಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ
- ತೀ.ನಾ.ಶ್ರೀನಿವಾಸ್, ಜಿಲ್ಲಾಧ್ಯಕ್ಷ, ಮಲೆನಾಡು ರೈತ ಹೋರಾಟ ಸಮಿತಿ- - - -23ಎಸ್‌ಎಂಜಿಕೆಪಿ01: ತೀ.ನಾ.ಶ್ರೀನಿವಾಸ್