ಕನ್ನಡಪ್ರಭ ವಾತೆ ಚನ್ನಮ್ಮನ ಕಿತ್ತೂರು
ಬಜೆಟ್ ಮಂಡನೆಯಲ್ಲಿ ಕಿತ್ತೂರು ಪ್ರಾಧಿಕಾರಕ್ಕೆ ಅನುದಾನ ನೀಡದೇ ಕಡೆಗಣಿಸಿ ರಾಣಿ ಚನ್ನಮ್ಮಾಜಿಗೆ ರಾಜ್ಯ ಸರ್ಕಾರ ಅವಮಾನಿಸಿದೆ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾವನದಲ್ಲಿ ನಾಗರಿಕರ ಸಭೆ ನಡೆಸಿ ಮಾತನಾಡಿದ ಅವರು, ಎಲ್ಲ ಪ್ರಾಧಿಕಾರಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡಿದ್ದು ಸ್ವಾಗತಾರ್ಹ. ಆದರೆ, ಐತಿಹಾಸಿಕ ರಾಣಿ ಚನ್ನಮ್ಮಾಜಿಯ ಕಿತ್ತೂರು ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕಿತ್ತು. ಆದರೆ, ಬಿಡಿಕಾಸು ಅನುದಾನ ನೀಡದೇ ಅವಮಾನಿಸಿದ್ದು ನಾಡ ಜನತೆಗೆ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದೆ. ಸ್ವಾತಂತ್ರದ ಹೋರಾಟಕ್ಕೆ ಕಿಡಿ ಹೊತ್ತಿಸಿದ ನಾಡು ನಮ್ಮದು, ನಾವು ನಮ್ಮ ನಾಡಿಗೆ ಯಾವಾಗಲೂ ಹೋರಾಟದಿಂದಲೇ ನ್ಯಾಯ ಪಡೆಯಬೇಕಾದ ಪರಿಸ್ಥಿತಿ ಬಂದೊದಗುತ್ತಿದೆ. ನಾವು ಇನ್ನೂ ಹೀಗೆ ಸುಮ್ಮನೆ ಕೂತರೆ ಐತಿಹಾಸಿಕ ಕಿತ್ತೂರು ನಾಡಿನ ಇತಿಹಾಸ ಅಳಿದು ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ಕಿತ್ತೂರು ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕಾದ ಸರ್ಕಾರ ಇವತ್ತಿನ ನಿರ್ಲಕ್ಷ್ಯ ಧೋರಣೆಗೆ ಉಗ್ರ ಹೋರಾಟಕ್ಕೆ ನಾವುಗಳು ಮುಂದಾಗಬೇಕಿದೆ. ಜಾತ್ಯಾತೀತ, ಪಕ್ಷಾತೀತವಾಗಿ ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡೋಣ ಎಂದು ಕೋರಿದರು.ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಚನ್ನಮ್ಮಾಜಿಯ ಬಲಗೈ ಬಂಟ ರಾಯಣ್ಣನಿಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿದೆ ಇದು ನಮಗೂ ಸಂತೋಷವಿದೆ. ಆದರೆ, ರಾಯಣ್ಣನ ಅಭಿವೃದ್ಧಿಗೆ ಇರುವಂತಹ ಕಾಳಜಿ ರಾಣಿ ಚನ್ನಮ್ಮಾಜಿಯ ಮೇಲೆ ಏಕೆ ಇಲ್ಲ? ಬಹುಶಃ ಈ ಸರ್ಕಾರ ಲಿಂಗಾಯತ ವಿರೋಧಿಯಾಗಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇಗುಲ ಹಳ್ಳಿಯ ವೀರೇಶ್ವರ ಸ್ವಾಮೀಜಿ ಮಾತನಾಡಿ, ಬಜೆಟಿನಲ್ಲಿ ಅನುದಾನ ಬಂದಿಲ್ಲವೆಂದರೆ ಅಲ್ಲಿ ಪ್ರಶ್ನೆ ಮಾಡಬೇಕಾಗಿದ್ದು, ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ನಾಡಿನ ಮಹತ್ತರ ಜವಾಬ್ದಾರಿ ಇವರ ಮೇಲಿದೆ. ಸರ್ಕಾರದ ಮೇಲೆ ಒತ್ತಡ ತಂದು ವಿಶೇಷ ಅನುದಾನ ತರುವಂತ ಕೆಲಸ ಮಾಡಲಿ ಎಂದರು.ಮುಸ್ಲಿಂ ಧರ್ಮ ಗುರು ಹಜರತ ತನ್ವೀರಸಾಬ್, ಜಗದೀಶ ವಸ್ತ್ರದ, ಎಸ್.ಬಿ.ದಳವಾಯಿ, ಹನುಮಂತ ಲಂಗೋಟಿ, ಸಂದೀಪ ದೇಶಪಾಂಡೆ, ಚಂದ್ರ ಗೌಡ ಪಾಟೀಲ, ಮಲ್ಲಿಕಾರ್ಜುನ ಸಾನಿಕೊಪ್ಪ, ಡಿ.ಆರ್.ಪಾಟೀಲ ಸೇರಿದಂತೆ ಇತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಹಾಗೂ ಪಟ್ಟಣದ ಗ್ರಾಮಸ್ಥರು ಪಾಲ್ಗೊಂಡಿದ್ದರು.18 ರಂದು ಪಟ್ಟಣ ಬಂದ್‌ಗೆ ಕರೆ
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್‌ನಲ್ಲಿ ಬಿಡಿಕಾಸು ನೀಡದ ಸರಕಾರ ನಡೆಯನ್ನು ಕಿತ್ತೂರು ನಾಗರಿಕರು ಖಂಡಿಸಿ ಮಾ.18 ರಂದು ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ಈ ನಿರ್ಣಯವನ್ನು ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಮಂಗಳವಾರ ನಾಗರಿಕರ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಪಟ್ಟಣ ಬಂದ್ ಗೆ ನಿರ್ಣಯ ಕೈಗೊಳ್ಳಲಾಯಿತು.