ಎದ್ದುಲಗುಟ್ಟ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ

KannadaprabhaNewsNetwork |  
Published : May 20, 2025, 01:16 AM ISTUpdated : May 20, 2025, 01:17 AM IST
19ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ದೊಡ್ಡಪೊನ್ನಾಂಡಹಳ್ಳಿ ಬಳಿ ಎದ್ದುಲಗುಟ್ಟ ಡ್ಯಾಂ ನಿರ್ಮಾಣಕ್ಕೆ  ನಿವೃತ್ತ ಶಿಕ್ಷಕ ಚಂದ್ರಯ್ಯ ತೋರಿಸಿರುವ ಸ್ಥಳ. | Kannada Prabha

ಸಾರಾಂಶ

ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ವೃಷಭಾವತಿ ಕೆರೆಗೆ ತಾಲೂಕಿನ ಹಲವು ಭಾಗಗಳಿಂದ ಹರಿದ ಬರುವ ಮಳೆ ನೀರು ವೃಷಭಾವತಿ ಕೆರೆ ಸೇರುತ್ತದೆ. ಕೆರೆ ತುಂಬಿ ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಪಾಲಾಗುತ್ತಿದೆ. ಈ ನೀರನ್ನು ತಡೆದು ದೊಡ್ಡಪೊನ್ನಾಂಡಹಳ್ಳಿ ಬಳಿಯಿರುವ ಎದ್ದುಲಗುಟ್ಟದಲ್ಲಿ ಡ್ಯಾಂ ನಿರ್ಮಿಸುವ ಉದ್ದೇಶ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಯರಗೋಳ್ ಡ್ಯಾಂ ಮಾದರಿಯಲ್ಲೇ ‘ಎದ್ದುಲಗುಟ್ಟ’ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ತೋರಿಸಿದೆ. ಈ ಯೋಜನೆ ಕಾರ್ಯಗತವಾದರೆ ಇಡೀ ಕೋಲಾರ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸಬಹುದಾಗಿದೆ.ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲದ ಕಾರಣ ಕೋಲಾರ ಜಿಲ್ಲೆ ಸದಾ ಬರವನ್ನೇ ಹೊದ್ದುಕೊಂಡು ಮಲಗಿದೆ. ಇಂತಹ ಸಮಯದಲ್ಲಿ ಮೂರು ತಾಲೂಕಿನ ಪಟ್ಟಣ ಜನರಿಗೆ ಹಾಗೂ ದಾರಿ ಮಧ್ಯ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಯರಗೋಳ್‌ ಡ್ಯಾಮ ನಿರ್ಮಾಣ ಮಾಡಲಾಗಿದೆ.

ಕೇಂದ್ರ-ರಾಜ್ಯಕ್ಕೆ ಪ್ರಸ್ತಾವನೆ

ಈ ಡ್ಯಾಂನಿಂದ ಈಗಾಗಲೇ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದರಿಂದಾಗಿ ಈ ಭಾಗದ ಜನರ ನೀರಿನ ಸಮಸ್ಯೆ ನೀಗಿದೆ. ಈಗ ಎದ್ದುಲಗುಟ್ಟ ಡ್ಯಾಂ ಯೋಜನೆ ರೂಪಿಸಲು ಯರಗೋಳ್ ಡ್ಯಾಂ ರೂವಾರಿ ನಿವೃತ್ತ ಶಿಕ್ಷಕ ಚಾಮನಹಳ್ಳಿ ಗ್ರಾಮದ ಚಂದ್ರಯ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನಾ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರುಗಳನ್ನು ಕಳುಹಿಸಿ ಪರಿಶೀಲಿಸಲು ಸೂಚಿಸಿರುವುದು ಜಿಲ್ಲೆಯ ಜನತೆಯಲ್ಲಿ ಆಶಾ ಭಾವನೆ ಮೂಡಿಸಿದೆ. ತಾಲೂಕಿನ ಕಾಮಸಮುದ್ರ ವೃಷಭಾವತಿ ಕೆರೆಗೆ ತಾಲೂಕಿನ ಹಲವು ಭಾಗಗಳಿಂದ ಹರಿದ ಬರುವ ಮಳೆ ನೀರು ವೃಷಭಾವತಿ ಕೆರೆ ಸೇರುತ್ತದೆ. ಕೆರೆ ತುಂಬಿ ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಪಾಲಾಗುತ್ತಿದೆ. ಈ ನೀರನ್ನು ತಡೆದು ದೊಡ್ಡಪೊನ್ನಾಂಡಹಳ್ಳಿ ಬಳಿಯಿರುವ ಎದ್ದುಲಗುಟ್ಟ ಪ್ರದೇಶದಲ್ಲಿರುವ ಸುಮಾರು 500 ಎಕರೆ ಪ್ರದೇಶದಲ್ಲಿ ಬೃಹತ್ ಡ್ಯಾಂ ನಿರ್ಮಾಣ ಮಾಡಿದರೆ ಯರಗೋಳ್ ಡ್ಯಾಂಗಿಂತಲೂ ಹೆಚ್ಚಿನ ನೀರನ್ನು ಸಂಗ್ರಹಿಸಬಹುದು.

ಕೋಲಾರ ಜಿಲ್ಲೆಗೆ ನೀರು

ಒಮ್ಮೆ ಈ ಡ್ಯಾಂ ತುಂಬಿದರೆ ನೀರನ್ನು ಇಡೀ ಕೋಲಾರ ಜಿಲ್ಲೆಯ ಜನರಿಗೆ ನಿತ್ಯ ಕುಡಿಯುವ ನೀರನ್ನು ಸರಬರಾಜು ಮಾಡಬಹುದು. ಅಲ್ಲದೆ ಈ ಯೋಜನೆ ಕಾರ್ಯಗತವಾದರೆ ಕೋಲಾರ ಜಿಲ್ಲೆಯ ಜನರಿಗೆ ಶಾಶ್ವತ ಕುಡಿಯುವ ನೀರು ಸಿಗಲಿದೆ ಎಂಬುದು ನಿವೃತ್ತ ಶಿಕ್ಷಕ ಚಂದ್ರಯ್ಯ ಅಭಿಪ್ರಾಯವಾಗಿದೆ.

ಈ ಹಿನ್ನೆಲೆ ಪ್ರಧಾನಿ ಮಂತ್ರಿ ಮೋದಿ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಚಂದ್ರಯ್ಯ ಪತ್ರ ಬರೆದು ಗಮನ ಸೆಳೆದಿದ್ದು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ತನ್ನ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸಿತ್ತು. ಈಗ ಕೇಂದ್ರ ತಂಡ ಸಹ ಎದ್ದುಲಗುಟ್ಟ ಸ್ಥಳಕ್ಕೆ ಬಂದು ಸ್ಥಳ ನೋಡಿ ಹೋಗಿದ್ದಾರೆ. ಇಲ್ಲಿ ಡ್ಯಾಂ ನಿರ್ಮಾಣ ಮಾಡಲು ಸೂಕ್ತವಾದ ಜಾಗವಾಗಿದೆ ಎಂದು ವರದಿ ನೀಡಿದ್ದಾರೆ ಎನ್ನಲಾಗಿದೆ.

ಅನುದಾನ ಮೀಸಲಿಗೆ ಒತ್ತಾಯ

ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಹ ಕಳೆದ ಬಜೆಟ್‍ನಲ್ಲಿ ಈ ಯೋಜನೆಗೆ ಅನುದಾನ ಮೀಸಲಿಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು. ಯರಗೋಳ್ ಡ್ಯಾಂ ನಿರ್ಮಾಣಕ್ಕೆ 14 ವರ್ಷಬೇಕಾಯಿತು. ಇನ್ನು ಈ ಎದ್ದುಲುಗುಟ್ಟ ಡ್ಯಾಂಗೆ ಸರ್ಕಾರಗಳು ಒಪ್ಪಿಗೆ ನೀಡಿ ಎಲ್ಲಾ ವಿಘ್ನಗಳು ನಿವಾರಣೆಯಾಗಿ ಕಾಮಗಾರಿ ಪ್ರಾರಂಭವಾಗಲು ಇನ್ನೆಷ್ಟು ವರ್ಷಗಳು ಬೇಕೋ. ಇದು ಇನ್ನೂ ಆರಂಭಿಕ ಹಂತವಾಗಿರುವ ಕಾರಣ ಜನತೆಯ ಕುತೂಹಲ ಕೆರಳಿಸಿದೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ