ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಶಾಲೆ ಎಂದರೆ ಮಕ್ಕಳಿಗೆ ಜ್ಞಾನ, ಸಂಸ್ಕಾರ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಪವಿತ್ರ ಸ್ಥಳ. ೧೫೦ ಮಕ್ಕಳ ಸಂಖ್ಯೆ ಹೊಂದಿರುವ ಶತಮಾನ ಕಂಡ ಪಟ್ಟಣದ ಸರ್ಕಾರಿ ಹಿರಿಯ ಕನ್ನಡ ಗಂಡುಮಕ್ಕಳ ಶಾಲೆಯೊಂದರ ಕಾಂಪೌಂಡ್ ಕುಸಿದು ಹಲವು ವರ್ಷಗಳಾದರೂ ದುರಸ್ತಿ ಕಾರ್ಯ ಕೈಗೊಳ್ಳದ ಪರಿಣಾಮ ಕುಡುಕರ ಹಾವಳಿಯಿಂದ ಶಾಲಾ ಆವರಣವೇ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ.
ಶಾಲೆಯ ಸುತ್ತಲಿನ ರಕ್ಷಣಾ ಗೋಡೆ ಕುಸಿದಿರುವುದರಿಂದ ಆವರಣಕ್ಕೆ ಹೊರಗಿನವರು ಸುಲಭವಾಗಿ ಪ್ರವೇಶಿಸುವಂತಾಗಿದೆ. ರಾತ್ರಿ ವೇಳೆ ಕೆಲವರು ಆವರಣವನ್ನು ಅನಗತ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ಉಂಟಾಗುವುದರ ಜತೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.ಕುಸಿದ ಕಾಂಪೌಂಡ್‌ನಿಂದ ಸಮಸ್ಯೆ: ಕಾಂಪೌಂಡ್ ಕುಸಿದಿರುವುದರಿಂದ ಶಾಲಾ ಆವರಣಕ್ಕೆ ಯಾವುದೇ ರೀತಿಯ ಭದ್ರತೆ ಇಲ್ಲದಂತಾಗಿದೆ. ಶಾಲಾ ಆವರಣದಲ್ಲಿ ಕಸ, ತ್ಯಾಜ್ಯ ಸಂಗ್ರಹವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ವಚ್ಛತೆಗೂ ಧಕ್ಕೆಯಾಗಿದೆ. ಮಕ್ಕಳು ಆಟವಾಡುವ ಸ್ಥಳದಲ್ಲಿಯೇ ಅನಗತ್ಯ ವಸ್ತುಗಳು ಬಿದ್ದಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.ಶಾಲೆಗೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪುಢಾರಿಗಳು ರಾತ್ರಿ ವೇಳೆಯಲ್ಲಿ ಆವರಣ ಪ್ರವೇಶಿಸುತ್ತಿದ್ದಾರೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬರುತ್ತಿವೆ. ಶಾಲಾ ಆವರಣವು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಕು ವ್ಯವಸ್ಥೆ, ಸಿಸಿ ಕ್ಯಾಮೆರಾ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವ ಮೂಲಕ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಮುಖ್ಯಾಧಿಕಾರಿಗಳಿಗೆ ಪತ್ರ: ಶಾಲೆಯ ಮುಖ್ಯೋಪಾಧ್ಯಾಯರು ನಮಗೆ ಪತ್ರ ಬರೆದು ತಿಳಿಸಿದ್ದಾರೆ. ಶಾಲೆ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬರುವುದರಿಂದ ನಾವು ಕೂಡ ಕಾಂಪೌಂಡ್ ನಿರ್ಮಿಸಿಕೊಡುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದು, ನಿರ್ಮಿಸುವ ಭರವಸೆ ನೀಡಿದ್ದಾರೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮತ್ತೊಮ್ಮೆ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ತಿಳಿಸಿದರು.ಕಾಂಪೌಂಡ್ ದುರಸ್ತಿಗೆ ಕ್ರಮ: ಕಾಂಪೌಂಡ್ ಕುಸಿತದಿಂದಾಗಿ ನಿತ್ಯ ರಾತ್ರಿ ಶಾಲೆಯ ಆವರಣಕ್ಕೆ ದುಷ್ಕರ್ಮಿಗಳು ಬಂದು ಮದ್ಯ ಸೇವಿಸಿ ಬಾಟಲಿ ಒಡೆದು ಹೋಗುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಿಗೆ ಇದು ಭಯ ಹುಟ್ಟಿಸಿದ್ದು, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣ ನಿರ್ಲಕ್ಷ್ಯ ವಹಿಸದೇ ಕಾಂಪೌಂಡ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಮರಪ್ಪ ದೋಟಿಹಾಳ ಆಗ್ರಹಿಸಿದರು.